ಐಪಿಎಲ್ ಬೆಟ್ಟಿಂಗ್ ಪ್ರಕರಣದಲ್ಲಿ ನಟ, ನಿರ್ಮಾಪಕ ಅರ್ಬಾಜ್ ಖಾನ್ ತಪ್ಪೋಪ್ಪಿಕೊಂಡ ಬೆನ್ನಲ್ಲೇ, ಮತ್ತಿಬ್ಬರು ಬಾಲಿವುಡ್ ನಿರ್ಮಾಪಕರಿಗೆ ಪೊಲೀಸರು ಸಮನ್ಸ್ ನೀಡಲಾಗಿದೆ.  ಇದೀಗ ಐಪಿಎಲ್ ಬೆಟ್ಟಿಂಗ್ ಪ್ರಕರಣದಲ್ಲಿ ಮತ್ತಷ್ಟು ಬಾಲಿವುಡ್ ದಿಗ್ಗಜರು ಪಾಲ್ಗೊಂಡಿರುವ ಶಂಕೆ ವ್ಯಕ್ತವಾಗಿದೆ.

ಮುಂಬೈ(ಜೂನ್.4) ಐಪಿಎಲ್ ಬೆಟ್ಟಿಂಗ್ ಪ್ರಕರಣದಲ್ಲಿ ಬಾಲಿವುಡ್ ನಿರ್ಮಾಪಕ ಅರ್ಬಾಜ್ ಖಾನ್ ಪೊಲೀಸರ ಮುಂದೆ ವಿಚಾರಣಗೆ ಹಾಜರಾದ ಬೆನ್ನಲ್ಲೇ, ಇದೀಗ ಮತ್ತಿಬ್ಬರು ಬಾಲಿವುಡ್ ನಿರ್ಮಾಪಕರಿಗೆ ಥಾಣೆ ವಿಶೇಷ ದಳದ ಪೊಲೀಸರು ಸಮನ್ಸ್ ನೀಡಿದ್ದಾರೆ. 

ಐಪಿಎಲ್ ಬೆಟ್ಟಿಂಗ್ ಆರೋಪಡಿ ಅರ್ಬಾಜ್ ಖಾನ್ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಿದ್ದರು. ಐಪಿಎಲ್ ಬೆಟ್ಟಿಂಗ್ ನಡೆಸಿರೋದನ್ನ ತಪ್ಪಿಕೊಂಡಿರುವ ಅರ್ಬಾಜ್, ಮತ್ತಷ್ಟು ಮಾಹಿತಿಗಳನ್ನ ಪೊಲೀಸರಿಗೆ ಬಾಯ್ಬಿಬಿಟ್ಟಿದ್ದಾರೆ. ಈ ಮಾಹಿತ ಆಧಾರದಡಿ ಇದೀಗ ಪೊಲೀಸರು ಬಾಲಿವುಡ್ ನಿರ್ಮಾಪಕರಾದ ಪರಾಗ್ ಸಾಂಗ್ವಿ ಹಾಗೂ ಮುರಾದ್ ಖೈತಾನ್‌ಗೆ ಸಮನ್ಸ್ ನೀಡಲಾಗಿದೆ. ಜೂನ್ 5 ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ.

ಐಪಿಎಲ್ ಬೆಟ್ಟಿಂಗ್: ತಪ್ಪೊಪ್ಪಿಕೊಂಡ ಅರ್ಬಾಜ್..!

ಮೇ 16ರಂದು ಮುಂಬೈನ ಥಾಣೆ ಪೊಲೀಸರು ಐಪಿಎಲ್ ಬೆಟ್ಟಿಂಗ್ ನಡೆಯುತ್ತಿದೆ ಎಂಬ ಮಾಹಿತಿ ಮೇರೆಗೆ ದೊಂಬಿವಿಲಿಯಲ್ಲಿರುವ ಕಟ್ಟದ ಮೇಲೆ ದಾಳಿ ನಡೆಸಿ ಮೂವರನ್ನ ಬಂಧಿಸಿದ್ದರು. ಇವರ ವಿಚಾರಣೆ ಬಳಿಕ ಇಬ್ಬರು ಬುಕ್ಕಿಗಳನ್ನ ಬಂಧಿಸಲಾಗಿತ್ತು. ಇನ್ನು ಮೇ 29 ರಂದು ಥಾಣೆಯ ಕಲ್ಯಾಣ್ ಸೆಷನ್ಸ್ ಆವರಣದಲ್ಲಿ ಪ್ರಮುಖ ಬುಕ್ಕಿ ಸೋನು ಜಲನ್‌ನನ್ನು ಬಂಧಿಸಿದ್ದರು. ವಿಚಾರಣೆ ವೇಳೆ ಜಲನ್ ಅರ್ಬಾಜ್ ಖಾನ್ ಹೆಸರು ಬಾಯ್ಬಿಬಿಟ್ಟಿದ್ದ. ಹೀಗಾಗಿ ಥಾಣೆ ಪೊಲೀಸರು ಅರ್ಬಾಜ್ ಖಾನ್‌ಗೆ ಸಮನ್ಸ್ ಜಾರಿ ಮಾಡಿದ್ದರು. 

ಅರ್ಬಾಜ್ ಖಾನ್ ಸಂಸಾರಕ್ಕೆ ಬೆಂಕಿ ಇಟ್ಟಿದ್ದು ಇದೇ ಐಪಿಎಲ್ ಬೆಟ್ಟಿಂಗ್!

ಜೂನ್ 2 ರಂದು ಪೊಲೀಸರ ಮುಂದೆ ವಿಚಾರಣೆಗೆ ಹಾಜರಾದ ಅರ್ಬಾಜ್ ಖಾನ್ ಐಪಿಎಲ್ ಬೆಟ್ಟಿಂಗ್ ನಡೆಸಿರೋದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಕಳೆದ 6 ವರ್ಷಗಳಿಂದ ಬೆಟ್ಟಿಂಗ್ ನಡೆಸುತ್ತಿರೋದಾಗಿ ಅರ್ಬಾಜ್ ಹೇಳಿದ್ದಾರೆ. ಇಷ್ಟೇ ಅಲ್ಲ ಬೆಟ್ಟಿಂಗ್‌ನಿಂದ 2.8 ಕೋಟಿ ರೂಪಾಯಿ ಕಳೆದುಕೊಂಡಿರುವುದಾಗಿ ಹೇಳಿದ್ದಾರೆ. ಅರ್ಬಾಜ್ ಖಾನ್ ಹೇಳಿಕೆಗಳನ್ನ ದಾಖಲಿಸಿಕೊಂಡಿರುವ ಥಾಣೆ ಪೊಲೀಸರು ತನಿಖೆಯನ್ನ ಮತ್ತಷ್ಟು ಚುರುಕುಗೊಳಿಸಿದ್ದಾರೆ. ಐಪಿಎಲ್ ಬೆಟ್ಟಿಂಗ್ ಪ್ರಕರಣ ಅಗೆದಷ್ಟು ಸ್ಫೋಟಕ ಮಾಹಿತಿಗಳು ಬಹಿರಂಗವಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ಬೆಟ್ಟಿಂಗ್ ಪ್ರಕರಣ ಮತ್ತಷ್ಟು ತಿರುವು ಪಡೆದುಕೊಳ್ಳುವುದರಲ್ಲಿ ಅನುಮಾನವಿಲ್ಲ.