ಕಳೆದ ವರ್ಷ ಪ್ರಚಂಡ ಲಯದಲ್ಲಿದ್ದ ಸಿಂಧು ಹಲವು ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದರು. ಆದರೆ ಈ ವರ್ಷ ಸ್ಥಿರ ಪ್ರದರ್ಶನ ನೀಡುತ್ತಿದ್ದರೂ ಇನ್ನೂ ಒಂದೂ ಟ್ರೋಫಿ ಗೆಲ್ಲಲು ಸಾಧ್ಯವಾಗಿಲ್ಲ. ಮಲೇಷ್ಯಾ ಹಾಗೂ ಇಂಡೋನೇಷ್ಯಾ ಓಪನ್‌ನಲ್ಲಿ  ಪ್ರಶಸ್ತಿ ಜಯಿಸುವ ನೆಚ್ಚಿನ ತಾರೆ ಎನಿಸಿದ್ದರೂ, ಪ್ರಶಸ್ತಿ ಸುತ್ತಿಗೆ ಪ್ರವೇಶಿಸಲು ಸಾಧ್ಯವಾಗಲಿಲ್ಲ.

ಬ್ಯಾಂಕಾಕ್[ಜು.10]: ಭಾರತದ ಅಗ್ರ ಶಟ್ಲರ್‌ಗಳಾದ ಪಿ.ವಿ.ಸಿಂಧು ಈ ವರ್ಷ ಮೊದಲ ಪ್ರಶಸ್ತಿ ಗೆಲ್ಲಲು ಕಾತರಿಸುತ್ತಿದ್ದು, ಇಂದಿನಿಂದ ಆರಂಭಗೊಳ್ಳಲಿರುವ ಥಾಯ್ಲೆಂಡ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಭಾರತದ ಸವಾಲನ್ನು ಮುನ್ನಡೆಸಲಿದ್ದಾರೆ.

ಕಳೆದ ವರ್ಷ ಪ್ರಚಂಡ ಲಯದಲ್ಲಿದ್ದ ಸಿಂಧು ಹಲವು ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದರು. ಆದರೆ ಈ ವರ್ಷ ಸ್ಥಿರ ಪ್ರದರ್ಶನ ನೀಡುತ್ತಿದ್ದರೂ ಇನ್ನೂ ಒಂದೂ ಟ್ರೋಫಿ ಗೆಲ್ಲಲು ಸಾಧ್ಯವಾಗಿಲ್ಲ. ಮಲೇಷ್ಯಾ ಹಾಗೂ ಇಂಡೋನೇಷ್ಯಾ ಓಪನ್‌ನಲ್ಲಿ ಪ್ರಶಸ್ತಿ ಜಯಿಸುವ ನೆಚ್ಚಿನ ತಾರೆ ಎನಿಸಿದ್ದರೂ, ಪ್ರಶಸ್ತಿ ಸುತ್ತಿಗೆ ಪ್ರವೇಶಿಸಲು ಸಾಧ್ಯವಾಗಲಿಲ್ಲ.

ಮಲೇಷ್ಯಾದಲ್ಲಿ ಸೆಮೀಸ್‌ಗೇರಿದ್ದ ಸಿಂಧು, ಇಂಡೋನೇಷ್ಯಾದಲ್ಲಿ ಕ್ವಾರ್ಟರ್‌ನಲ್ಲೇ ಮುಗ್ಗರಿಸಿದ್ದರು. ಇಲ್ಲಿ ಸಿಂಧು ಮೊದಲ ಸುತ್ತಿನಲ್ಲಿ ಬಲ್ಗೇರಿಯಾದ ಲಿಂಡಾ ಜೆಟ್ಚಿರಿಯನ್ನು ಎದುರಿಸಲಿದ್ದಾರೆ. ಇನ್ನು ಸೈನಾ ನೆಹ್ವಾಲ್‌ ಕಳೆದ 2 ವಾರಗಳಲ್ಲಿ ದ್ವಿತೀಯ ಸುತ್ತು ನಿರ್ಗಮನ ಕಂಡಿದ್ದು, ಇಲ್ಲಿ ಸ್ಥಳೀಯ ಆಟಗಾರ್ತಿ ಬುಸಾನನ್‌ರನ್ನು ಮೊದಲ ಸುತ್ತಿನಲ್ಲಿ ಎದುರಿಸಲಿದ್ದಾರೆ. 

ಪುರುಷರ ಸಿಂಗಲ್ಸ್‌ನಲ್ಲಿ ಎಚ್‌.ಎಸ್‌.ಪ್ರಣಯ್‌, ಸಮೀರ್‌ ವರ್ಮಾ, ಪಾರುಪಲ್ಲಿ ಕಶ್ಯಪ್‌ ಕಣಕ್ಕಿಳಿದರೆ ಮಹಿಳಾ ಸಿಂಗಲ್ಸ್‌ನಲ್ಲಿ ಸೈನಾ, ಸಿಂಧು ಜತೆ 16 ವರ್ಷದ ವೈಷ್ಣವಿ ರೆಡ್ಡಿ ಆಡಲಿದ್ದಾರೆ. ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್‌ ಸಾಯಿರಾಜ್‌-ಚಿರಾಗ್‌ ಶೆಟ್ಟಿ, ಮನು ಅತ್ರಿ-ಸುಮಿತ್‌ ರೆಡ್ಡಿ, ಅರ್ಜುನ್‌-ರಾಮಚಂದ್ರನ್‌ ಶ್ಲೋಕ್‌, ಕೋನಾ ತರುಣ್‌-ಸೌರಭ್‌ ಶರ್ಮಾ ಕಾಣಿಸಿಕೊಳ್ಳಲಿದ್ದಾರೆ. ಮಹಿಳಾ ಡಬಲ್ಸ್‌ನಲ್ಲಿ ಮೇಘನಾ-ಪೂರ್ವಿಶಾ, ಸನ್ಯೋಗಿತಾ-ಪ್ರಜಕ್ತ ಆಡಿದರೆ, ಮಿಶ್ರ ಡಬಲ್ಸ್‌ನಲ್ಲಿ ಸಾತ್ವಿಕ್‌ ಹಾಗೂ ಅಶ್ವಿನಿ ಪೊನ್ನಪ್ಪ ಸ್ಪರ್ಧಿಸಲಿದ್ದಾರೆ.