ಥಾಯ್ಲೆಂಡ್‌ನ ‘ವೈಲ್ಡ್ ಬೋರ್’ ಎಂಬ ಫುಟ್‌ಬಾಲ್ ತಂಡದ 12 ಮಕ್ಕಳು ಗುಹೆಯಲಲ್ಲಿ ಸಿಲುಕಿ ಇಂದಿಗೆ 14 ದಿನ ಕಳೆದಿದೆ. ಮಕ್ಕಳನ್ನ ಸುರಕ್ಷಿತವಾಗಿ ಹೊರತರಲು ಥಾಯ್ಲೆಂಡ್ ಸರ್ಕಾರ ಹರಸಾಹಸ ಪಡುತ್ತಿದೆ. ಆದರೆ ಇದೀಗ ಹೊಸ ಸಂಕಷ್ಠ ತಲೆದೋರಿದೆ.
ಮಾ ಸಾಯ್ (ಥಾಯ್ಲೆಂಡ್): 14 ದಿನಗಳಿಂದ ಇಲ್ಲಿನ ಗುಹೆಯೊಂದರಲ್ಲಿ ಸಿಲುಕಿಕೊಂಡಿರುವ 12 ಬಾಲಕರನ್ನು ರಕ್ಷಿಸಲು ಥಾಯ್ಲೆಂಡ್ ಸರ್ಕಾರ ಏನೆಲ್ಲಾ ಸಾಹಸ ಮಾಡುತ್ತಿದ್ದರೂ ಯಾವುದೂ ಫಲ ಕೊಡುತ್ತಿಲ್ಲ. ಈ ನಡುವೆ, ಗುಹೆ ಇರುವ ಥಾಯ್ಲೆಂಡ್‌ನ ಪ್ರದೇಶದಲ್ಲಿ ದಟ್ಟವಾದ ಮೋಡ ಕವಿದಿದೆ. ಭರ್ಜರಿ ಮಳೆಯೇನಾದರೂ ಆದರೆ ಇಲ್ಲಿವರೆಗೂ ಸರ್ಕಾರ ನಡೆಸಿರುವ ಪ್ರಯತ್ನಗಳು ವಿಫಲವಾಗಿ, ಗುಹೆಯಲ್ಲಿ ನೀರಿನ ಮಟ್ಟಮತ್ತಷ್ಟುಹೆಚ್ಚಾಗಲಿದೆ. ಇದರಿಂದ ಮಕ್ಕಳ ಜೀವಕ್ಕೇ ಕಂಟಕ ಎದುರಾಗುವ ಅಪಾಯವಿದೆ.
ನುರಿತ ಈಜುಗಾರರ ಸಹಾಯದಿಂದ ಮಕ್ಕಳನ್ನು ರಕ್ಷಿಸುವ ಕಾರ್ಯಾಚರಣೆ ಕಳೆದ 10 ದಿನಗಳಿಂದಲೂ ನಡೆಯುತ್ತಿದೆ. ಆದರೆ ಈ ಗುಹೆಯ ಮಾರ್ಗ ದುರ್ಗಮವಾಗಿರುವುದು, ಕೆಲವೆಡೆ 16 ಅಡಿವರೆಗೂ ನೀರು ತುಂಬಿಕೊಂಡಿರುವುದು ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಈ ನಡುವೆ, ಮಕ್ಕಳಿಗೆ ಈಜು ಕಲಿಸುವ ಕೆಲಸ ನಡೆಯುತ್ತಿದೆಯಾದರೂ, ಕಳೆದ 14 ದಿನಗಳಿಂದ ಆಯಾಸಗೊಂಡಿರುವ ಅವರು 6 ತಾಸುಗಳ ಕಾಲ ಈಜುವಷ್ಟುಶಕ್ತಿಯನ್ನು ಹೊಂದಿಲ್ಲ ಎಂದು ಹೇಳಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಥಾಯ್ಲೆಂಡ್ ಸರ್ಕಾರ ಗುಹೆಯ ಮೇಲಿರುವ ಪರ್ವತದಲ್ಲೇ 100 ಕೊಳವೆಗಳನ್ನು ಕೊರೆಯುವ ಕೆಲಸ ಆರಂಭಿಸಿದ್ದಾರೆ. ಆದರೆ ಮಕ್ಕಳು ಎಲ್ಲಿದ್ದಾರೆ ಎಂಬುದನ್ನು ಪರ್ವತದ ಮೇಲಿನಿಂದ ನಿಖರವಾಗಿ ಅಂದಾಜಿಸಲು ಆಗುತ್ತಿಲ್ಲ. ತಂತ್ರಜ್ಞಾನದ ಕೊರತೆಯಿಂದಾಗಿ ಮಕ್ಕಳಿರುವ ಸ್ಥಳದವರೆಗೆ ಎಷ್ಟುಆಳದ ಕೊಳವೆ ಕೊರೆಯಬೇಕು ಎಂಬುದು ಗೊತ್ತಾಗುತ್ತಿಲ್ಲ.
ಮತ್ತೊಂದೆಡೆ, ಗುಹೆಯಲ್ಲಿ ಆಮ್ಲಜನಕ ಪ್ರಮಾಣ ಕುಸಿಯತೊಡಗುತ್ತಿದೆ. ಜೀವಗಾಳಿಯನ್ನು ಸರಬರಾಜು ಮಾಡಲು ಹೊಸ ಲೈನ್‌ವೊಂದನ್ನು ಸಿಬ್ಬಂದಿ ಎಳೆದಿದ್ದಾರೆ. ಅಗತ್ಯವಿಲ್ಲದ ಸಿಬ್ಬಂದಿಯನ್ನೆಲ್ಲಾ ಗುಹೆಯಿಂದ ಹೊರಗೆ ಕರೆಸಲಾಗಿದೆ.
ಈ ನಡುವೆ, ಥಾಯ್ಲೆಂಡ್‌ನಲ್ಲಿ ದಟ್ಟವಾದ ಮೋಡ ಆವರಿಸಿದೆ. ಭಾರಿ ಮಳೆ ಸುರಿದು, ಗುಹೆಯಲ್ಲಿ ಅಧಿಕ ಪ್ರಮಾಣದಲ್ಲಿ ನೀರು ತುಂಬಿಕೊಂಡರೆ ಮಕ್ಕಳ ರಕ್ಷಣಾ ಕಾರ್ಯಾಚರಣೆಗೆ ಬಹುದೊಡ್ಡ ಅಡ್ಡಿ ಎದುರಾಗಲಿದೆ. ಏತನ್ಮಧ್ಯೆ, ಗುಹೆಯಿಂದ ಈಗಾಗಲೇ 130 ದಶಲಕ್ಷ ಲೀಟರ್ ನೀರನ್ನು ಹೊರಹಾಕಲಾಗಿದೆ. ಇದರಿಂದಾಗಿ ಕೆಲವೆಡೆ ನೀರು ಖಾಲಿಯಾಗಿದೆ. ಗುಹೆಯಿಂದ ಹೊರಬರಲು ಮಕ್ಕಳಿಗೆ 11 ಸಮಯ ಹಿಡಿಯುತ್ತಿದ್ದದ್ದು ಈಗ ಆರು ತಾಸಿಗೆ ಇಳಿದಿದೆ. ಮಳೆ ಸುರಿದರೆ ಮಾತ್ರ ಕಷ್ಟವಾಗಲಿದೆ.
‘ವೈಲ್ಡ್ ಬೋರ್’ ಎಂಬ ಫುಟ್‌ಬಾಲ್ ತಂಡದ 12 ಮಕ್ಕಳು ಅಭ್ಯಾಸ ಮುಗಿಸಿ ಜೂ.23ರಂದು ಈ ತಮ್ಮ ಕೋಚ್ ಜತೆ ಈ ಗುಹೆ ಪ್ರವೇಶಿಸಿದ್ದರು. ವಾಪಸ್ ಬರುವಷ್ಟರಲ್ಲಿ ಗುಹೆಯೊಳಗೆ ಪ್ರವಾಹದ ನೀರು ತುಂಬಿಕೊಂಡಿತ್ತು. ಹೀಗಾಗಿ ಅವರು ಗುಹೆಯಲ್ಲಿ ಸಿಲುಕಿಕೊಂಡಿದ್ದಾರೆ.
