ಬರ್ಮಿಂಗ್‌ಹ್ಯಾಮ್‌(ಆ.01): ಐಸಿಸಿ ಏಕದಿನ ವಿಶ್ವಕಪ್‌ ಗೆದ್ದ ಬಳಿಕ ಇಂಗ್ಲೆಂಡ್‌ ಕ್ರಿಕೆಟ್‌ ತಂಡ ಮತ್ತೊಂದು ಪ್ರತಿಷ್ಠಿತ ಸರಣಿ ಗೆಲ್ಲುವ ಉತ್ಸಾಹದಲ್ಲಿದೆ. ವಿಶ್ವಕಪ್‌ನಷ್ಟೇ ಮಹತ್ವ ಹೊಂದಿರುವ ಆ್ಯಷಸ್‌ ಟೆಸ್ಟ್‌ ಸರಣಿ ಗುರುವಾರ ಆರಂಭಗೊಳ್ಳಲಿದ್ದು, ಇಲ್ಲಿನ ಎಡ್ಜ್‌ಬಾಸ್ಟನ್‌ ಕ್ರೀಡಾಂಗಣ ಮೊದಲ ಪಂದ್ಯಕ್ಕೆ ವೇದಿಕೆಯಾಗಲಿದೆ.

ಈ ಟೆಸ್ಟ್‌ನೊಂದಿಗೆ ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ಗೂ ಅಧಿಕೃತವಾಗಿ ಚಾಲನೆ ದೊರೆಯಲಿದೆ. 5 ಪಂದ್ಯಗಳ ಸರಣಿ ಆಗಿರುವ ಕಾರಣ ಪ್ರತಿ ಟೆಸ್ಟ್‌ ಗೆಲುವಿಗೆ 24 ಅಂಕ ಸಿಗಲಿದೆ. ಪಂದ್ಯ ಡ್ರಾ ಆದರೆ ಉಭಯ ತಂಡಗಳಿಗೂ ತಲಾ 8 ಅಂಕ ಸಿಗಲಿದ್ದು, ಟೈ ಆದರೆ ಎರಡೂ ತಂಡಗಳು ತಲಾ 12 ಅಂಕ ಪಡೆಯಲಿವೆ.

ಆ್ಯಷಸ್‌ 2019 ಸರಣಿ ಆಸ್ಟ್ರೇಲಿಯಾ ತಂಡ ಪ್ರಕಟ

ಇಂಗ್ಲೆಂಡ್‌ಗೆ ತವರಿನಲ್ಲಿ ಪ್ರಾಬಲ್ಯ ಮೆರೆಯುವ ತವಕವಾದರೆ, ಟಿಮ್‌ ಪೈನ್‌ ನಾಯಕತ್ವದಲ್ಲಿ ಸರಣಿ ಗೆದ್ದು ಚೆಂಡು ವಿರೂಪ ಪ್ರಕರಣವನ್ನು ಸಂಪೂರ್ಣವಾಗಿ ಮರೆಯುವ ಗುರಿ ಆಸ್ಪ್ರೇಲಿಯಾದ್ದಾಗಿದೆ.

ಚೆಂಡು ವಿರೂಪ ಪ್ರಕರಣದಲ್ಲಿ ಸಿಕ್ಕಿಹಾಕಿಕೊಂಡು ನಿಷೇಧ ಅನುಭವಿಸಿದ್ದ ಸ್ಟೀವ್‌ ಸ್ಮಿತ್‌, ಡೇವಿಡ್‌ ವಾರ್ನರ್‌ ಹಾಗೂ ಕ್ಯಾಮರೂನ್‌ ಬ್ಯಾನ್‌ಕ್ರಾಫ್ಟ್‌ ನಿಷೇಧದ ಬಳಿಕ ಮೊದಲ ಬಾರಿಗೆ ಟೆಸ್ಟ್‌ ಆಡಲಿದ್ದು, ಈ ಮೂವರನ್ನೂ ಇಂಗ್ಲೆಂಡ್‌ ಅಭಿಮಾನಿಗಳು ಕಿಚ್ಚಾಯಿಸುವುದು ಖಚಿತ.

ಆಸ್ಪ್ರೇಲಿಯಾ ತಂಡ ಇಂಗ್ಲೆಂಡ್‌ ನೆಲದಲ್ಲಿ ಆ್ಯಷಸ್‌ ಸರಣಿ ಗೆದ್ದು ಬರೋಬ್ಬರಿ 19 ವರ್ಷಗಳಾಗಿವೆ. ಹೀಗಾಗಿ ಸಹಜವಾಗಿಯೇ ತಂಡ ಒತ್ತಡದಲ್ಲಿದೆ. ತನ್ನ ತಾರ ಬ್ಯಾಟ್ಸ್‌ಮನ್‌ಗಳಾದ ವಾರ್ನರ್‌, ಸ್ಮಿತ್‌ ಮೇಲೆ ಭಾರೀ ನಿರೀಕ್ಷೆ ಇರಿಸಿದೆ.

ಮತ್ತೊಂದೆಡೆ ಇಂಗ್ಲೆಂಡ್‌ ತಂಡದಲ್ಲಿ ಹಲವು ಹೊಸ ಆಟಗಾರರಿಗೆ ಸ್ಥಾನ ನೀಡಲಾಗಿದೆ. ಪ್ರಮುಖವಾಗಿ ಬ್ಯಾಟಿಂಗ್‌ ವಿಭಾಗದಲ್ಲಿ ಅನನುಭವಿಗಳಿದ್ದಾರೆ. ಜೇಸನ್‌ ರಾಯ್‌, ಜೋ ಡೆನ್ಲಿ, ರೋರಿ ಬನ್ಸ್‌ರ್‍, ಆಸ್ಪ್ರೇಲಿಯಾದ ಬಲಿಷ್ಠ ವೇಗದ ಬೌಲಿಂಗ್‌ ದಾಳಿಯನ್ನು ಸಮರ್ಥವಾಗಿ ಎದುರಿಸಬಲ್ಲರೆ ಎನ್ನುವ ಬಗ್ಗೆ ಕುತೂಹಲವಿದೆ.

ಜೋ ರೂಟ್‌, ಜೋಸ್‌ ಬಟ್ಲರ್‌, ಜಾನಿ ಬೇರ್‌ಸ್ಟೋವ್‌ ಮೇಲೆ ಭಾರೀ ಒತ್ತಡವಿದೆ. ಕಳೆದ ವಾರ ಐರ್ಲೆಂಡ್‌ ವಿರುದ್ಧ ನಡೆದ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್‌ ಕೇವಲ 85 ರನ್‌ಗೆ ಆಲೌಟ್‌ ಆಗಿತ್ತು. ಮತ್ತೊಮ್ಮೆ ಬ್ಯಾಟಿಂಗ್‌ ಕ್ರಮಾಂಕ ಅದೇ ರೀತಿ ಕುಸಿತ ಕಾಣಬಹುದು ಎನ್ನುವ ಆತಂಕ ಇಂಗ್ಲೆಂಡ್‌ ಅಭಿಮಾನಿಗಳಲ್ಲಿದೆ.

ಜೇಮ್ಸ್‌ ಆ್ಯಂಡರ್‌ಸನ್‌, ಸ್ಟುವರ್ಟ್‌ ಬ್ರಾಡ್‌ ಹಾಗೂ ಕ್ರಿಸ್‌ ವೋಕ್ಸ್‌ ವೇಗದ ಬೌಲಿಂಗ್‌ ಹೊಣೆ ಹೊರಲಿದ್ದಾರೆ. ಎರಡೂ ತಂಡಗಳು ಬಲಿಷ್ಠ ವೇಗಿಗಳನ್ನು ಹೊಂದಿದ್ದು, ರನ್‌ ಗಳಿಸಲು ಬ್ಯಾಟ್ಸ್‌ಮನ್‌ಗಳು ಹೆಚ್ಚಿನ ಪರಿಶ್ರಮ ವಹಿಸಬೇಕಾಗುತ್ತದೆ.

ಆಟಗಾರರ ಪಟ್ಟಿ

ಇಂಗ್ಲೆಂಡ್‌: ಜೇನಸ್‌ ರಾಯ್‌, ರೋರಿ ಬನ್ಸ್‌ರ್‍, ಜೋ ರೂಟ್‌(ನಾಯಕ), ಜೋ ಡೆನ್ಲಿ, ಜೋಸ್‌ ಬಟ್ಲರ್‌, ಬೆನ್‌ ಸ್ಟೋಕ್ಸ್‌, ಜಾನಿ ಬೇರ್‌ಸ್ಟೋವ್‌, ಮೋಯಿನ್‌ ಅಲಿ, ಕ್ರಿಸ್‌ ವೋಕ್ಸ್‌, ಸ್ಟುವರ್ಟ್‌ ಬ್ರಾಡ್‌, ಜೇಮ್ಸ್‌ ಆ್ಯಂಡರ್‌ಸನ್‌.

ಆಸ್ಪ್ರೇಲಿಯಾ(ಸಂಭವನೀಯ): ವಾರ್ನರ್‌, ಬ್ಯಾನ್‌ಕ್ರಾಫ್ಟ್‌, ಉಸ್ಮಾನ್‌ ಖವಾಜ, ಸ್ಟೀವ್‌ ಸ್ಮಿತ್‌, ಟ್ರಾವಿಸ್‌ ಹೆಡ್‌, ಮ್ಯಾಥ್ಯೂ ವೇಡ್‌, ಟಿಮ್‌ ಪೈನ್‌(ನಾಯಕ), ಪ್ಯಾಟ್‌ ಕಮಿನ್ಸ್‌, ಜೇಮ್ಸ್‌ ಪ್ಯಾಟಿನ್ಸನ್‌, ನೇಥನ್‌ ಲಯನ್‌, ಪೀಟರ್‌ ಸಿಡ್ಲ್‌.

ಟೆಸ್ಟ್‌ ಚಾಂಪಿಯನ್‌ಶಿಪ್‌: ಫೈನಲ್‌ ಡ್ರಾ, ಟೈಗೊಂಡರೆ ಟ್ರೋಫಿ ಹಂಚಿಕೆ

2021ರ ಜೂನ್‌ನಲ್ಲಿ ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನ ಫೈನಲ್‌ ಪಂದ್ಯ ನಡೆಯಲಿದ್ದು, ಲೀಗ್‌ ಹಂತದಲ್ಲಿ ಅಗ್ರ 2 ಸ್ಥಾನಗಳನ್ನು ಪಡೆಯಲಿರುವ ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ. ಒಂದೊಮ್ಮೆ ಫೈನಲ್‌ ಪಂದ್ಯ ಡ್ರಾ ಇಲ್ಲವೇ ಟೈಗೊಂಡರೆ ಟ್ರೋಫಿ ಹಂಚಲಾಗುತ್ತದೆ ಎಂದು ಐಸಿಸಿ ತಿಳಿಸಿದೆ.