Asianet Suvarna News Asianet Suvarna News

ಹರಿಣಗಳನ್ನು ಮತ್ತೊಮ್ಮೆ ಶಿಕಾರಿ ಮಾಡಿದ ಕೊಹ್ಲಿ ಬಾಯ್ಸ್; ವಿರಾಟ್ ಖಾತೆಗೆ ಮತ್ತೊಂದು ಶತಕ

ನಾಯಕ ವಿರಾಟ್ ಕೊಹ್ಲಿ(129 ರನ್, 96 ಎಸೆತ, 19ಬೌ, 2 ಸಿಕ್ಸರ್) ಬಾರಿಸಿದ ಮನಮೋಹಕ ಶತಕ ಹಾಗೂ ಅಜಿಂಕ್ಯ ರಹಾನೆಯ(34) ಸಮಯೋಚಿನ ಬ್ಯಾಟಿಂಗ್ ನೆರವಿನಿಂದ ಇನ್ನೂ ಓವರ್ 17.5 ಓವರ್ ಬಾಕಿಯಿರುವಾಗಲೇ ಟೀಂ ಇಂಡಿಯಾ ಸರಣಿ ಗೆಲುವಿನ ಕೇಕೆ ಹಾಕಿದೆ.

Team India Won Final ODI Match Against South Africa

ಸೆಂಚೂರಿಯನ್(ಫೆ.16) ವಿರಾಟ್ ಕೊಹ್ಲಿ ಬಾರಿಸಿದ ಅಜೇಯ ಶತಕದ ನೆರವಿನಿಂದ ಟೀಂ ಇಂಡಿಯಾ 8 ವಿಕೆಟ್'ಗಳ ಭರ್ಜರಿ ಜಯ ದಾಖಲಿಸಿದೆ. ಈ ಮೂಲಕ 6 ಪಂದ್ಯಗಳ ಸರಣಿಯಲ್ಲಿ ಟೀಂ ಇಂಡಿಯಾ 5-1 ಅಂತರದಲ್ಲಿ ಸರಣಿ ಗೆಲುವಿನ ನಗೆ ಬೀರಿದೆ. ಟೂರ್ನಿಯುದ್ದಕ್ಕೂ ಅದ್ಭುತ ಪ್ರದರ್ಶನ ತೋರಿದ ನಾಯಕ ವಿರಾಟ್ ಕೊಹ್ಲಿ(558 ರನ್) ಸರಣಿ ಶ್ರೇಷ್ಠ ಹಾಗೂ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಆಫ್ರಿಕಾ ತಂಡವನ್ನು ಕೇವಲ 204 ರನ್'ಗಳಿಗೆ ಕಟ್ಟಿಹಾಕಿದ ಭಾರತ ಬ್ಯಾಟಿಂಗ್'ನಲ್ಲೂ ಅದ್ಭುತ ಪ್ರದರ್ಶನ ತೋರಿತು. ಆರಂಭದಲ್ಲಿ ಟೀಂ ಇಂಡಿಯಾ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ವಿಕೆಟ್ ವಿಕೆಟ್ ಕಳೆದುಕೊಂಡಿತಾದರೂ, ನಾಯಕ ವಿರಾಟ್ ಕೊಹ್ಲಿ(129 ರನ್, 96 ಎಸೆತ, 19ಬೌ, 2 ಸಿಕ್ಸರ್) ಬಾರಿಸಿದ ಮನಮೋಹಕ ಶತಕ ಹಾಗೂ ಅಜಿಂಕ್ಯ ರಹಾನೆಯ(34) ಸಮಯೋಚಿನ ಬ್ಯಾಟಿಂಗ್ ನೆರವಿನಿಂದ ಇನ್ನೂ ಓವರ್ 17.5 ಓವರ್ ಬಾಕಿಯಿರುವಾಗಲೇ ಟೀಂ ಇಂಡಿಯಾ ಸರಣಿ ಗೆಲುವಿನ ಕೇಕೆ ಹಾಕಿದೆ.

ಕೊಹ್ಲಿ-ರಹಾನೆ ಜುಗಲ್'ಬಂದಿ: ತಂಡದ ಮೊತ್ತ 19 ರನ್'ಗಳಿದ್ದಾಗ ಕಳೆದ ಪಂದ್ಯದ ಹೀರೋ ರೋಹಿತ್ ಶರ್ಮಾ ಎನ್ಜಿಡಿಗೆ ವಿಕೆಟ್ ಒಪ್ಪಿಸಿದರು. ಆ ಬಳಿಕ ಎರಡನೇ ವಿಕೆಟ್'ಗೆ ಧವನ್ ಹಾಗೂ ಕೊಹ್ಲಿ 59 ರನ್'ಗಳ ಜತೆಯಾಟವಾಡಿರು. ಧವನ್ ಕೂಡಾ 18 ರನ್ ಬಾರಿಸಿ ಎನ್ಜಿಡಿಗೆ ಎರಡನೇ ಬಲಿಯಾದರು. ಆ ಬಳಿಕ ರಹಾನೆಯೊಂದಿಗೆ ಇನಿಂಗ್ಸ್ ಕಟ್ಟಿದ ಕೊಹ್ಲಿ ಆಫ್ರಿಕಾ ಬೌಲರ್'ಗಳನ್ನು ಮನಬಂದಂತೆ ದಂಡಿಸಿದರು. ವೃತ್ತಿ ಜೀವನದ 35ನೇ ಏಕದಿನ ಶತಕ ಸಿಡಿಸುವುದರೊಂದಿಗೆ ಇದೇ ಸರಣಿಯಲ್ಲಿ ಮೂರನೇ ಶತಕ ಸಿಡಿಸಿದ ಸಾಧನೆ ಮಾಡಿದರು.

ಇದಕ್ಕೂ ಮೊದಲು ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಭಾರತ ವೇಗಿ ಶಾರ್ದೂಲ್ ಠಾಕೂರ್ ಮಾರಕ ದಾಳಿಗೆ ತತ್ತರಿಸಿತು. ಮುಂಬೈ ವೇಗಿ ಶಾರ್ದೂಲ್ ಠಾಕೂರ್ 4 ವಿಕೆಟ್ ಕಳಿಸುವ ಮೂಲಕ ಗಮನ ಸೆಳೆದರೆ, ಬುಮ್ರಾ ಹಾಗೂ ಚಾಹಲ್ ತಲಾ 2 ವಿಕೆಟ್ ಪಡೆದರು. ಜೊಂಡೊ ಅರ್ಧ ಶತಕ ಸಿಡಿಸಿದ್ದು ಹೊರತು ಪಡಿಸಿದರೆ ಮತ್ತೆ ಯಾವ ಬ್ಯಾಟ್ಸ್'ಮನ್'ಗಳಿಂದಲೂ ನಿರೀಕ್ಷಿತ ಪ್ರದರ್ಶನ ಮೂಡಿಬರಲಿಲ್ಲ.

ಸಂಕ್ಷಿಪ್ತ ಸ್ಕೋರ್:

ದಕ್ಷಿಣ ಆಫ್ರಿಕಾ: 204/10

ಜೊಂಡೊ: 54

ಶಾರ್ದೂಲ್ ಠಾಕೂರ್: 52/4

ಭಾರತ: 206/2

ಕೊಹ್ಲಿ: 129*

ಎನ್ಜಿಡಿ: 54/2

Follow Us:
Download App:
  • android
  • ios