ಇಂದಿನಿಂದ ಆರಂಭವಾಗಿರುವ ಐಸಿಸಿಯ ಕಾರ್ಯಕಾರಿ ಸಭೆಯಲ್ಲಿ 25 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಬಿಸಿಸಿಐ ಮೂಕಪ್ರೇಕ್ಷಕ ಪಾತ್ರ ವಹಿಸಿದೆ.
ನವದೆಹಲಿ(ಫೆ.03): ಅಂತಾರಾಷ್ಟ್ರೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಐಸಿಸಿ) ತರಲು ಉದ್ದೇಶಿಸಿರುವ ಪ್ರಮುಖ ಬದಲಾವಣೆಗಳಿಂದ ನಲುಗಿಹೋಗಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಡೆಯ ಅಸ್ತ್ರವೆಂಬಂತೆ ಇದೇ ಜೂನ್'ನಲ್ಲಿ ಲಂಡನ್'ನಲ್ಲಿ ನಡೆಯಲಿರುವ ಪ್ರತಿಷ್ಠಿತ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯಿಂದ ಹಿಂದೆ ಸರಿಯಲು ನಿರ್ಧರಿಸಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ತಿಳಿಸಿದೆ.
ಇಂದಿನಿಂದ ಆರಂಭವಾಗಿರುವ ಐಸಿಸಿಯ ಕಾರ್ಯಕಾರಿ ಸಭೆಯಲ್ಲಿ 25 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಬಿಸಿಸಿಐ ಮೂಕಪ್ರೇಕ್ಷಕ ಪಾತ್ರ ವಹಿಸಿದೆ. ಸಭೆಯಲ್ಲಿ ಬಿಸಿಸಿಐನ ಪ್ರತಿನಿಧಿಗಳಾಗಿ ಐಡಿಎಫ್‌ಸಿ ಎಂಡಿ ಮತ್ತು ಸಿಇಒ ವಿಕ್ರಂ ಲಿಮಯೆ, ಬಿಸಿಸಿಐ ಕಾರ್ಯದರ್ಶಿ ಅಮಿತಾಬ್ ಚೌಧರಿ ಮತ್ತು ಖಜಾಂಚಿ ಅನಿರುದ್ಧ ಭಾಗವಹಿಸಿದ್ದಾರೆ.
ಬಿಗ್ ತ್ರೀಗೆ ಇತಿಶ್ರೀ?
ಐಸಿಸಿಯ ಸ್ವತಂತ್ರ ಮುಖ್ಯಸ್ಥರಾಗಿ ಆಯ್ಕೆಯಾದಾಗಿನಿಂದ ಬಿಸಿಸಿಐ ವಿರುದ್ಧವೇ ಸೆಟೆದು ನಿಂತಂತಿರುವ ಶಶಾಂಕ್ ಮನೋಹರ್ ವಿಶ್ವ ಕ್ರಿಕೆಟ್ ಸದಸ್ಯ ರಾಷ್ಟ್ರಗಳಿಗೆ ಸಮಾನ ಪಾಲು ನೀಡಲು ನಿಶ್ಚಯಿಸಿದ್ದಾರೆ. ಐಸಿಸಿ ಮಾಜಿ ಅಧ್ಯಕ್ಷ ಎನ್. ಶ್ರೀನಿವಾಸನ್ ಅಧಿಕಾರದ ವೇಳೆ ಅಸ್ತಿತ್ವಕ್ಕೆ ಬಂದಿದ್ದ ಬಿಗ್ ತ್ರೀ (ಭಾರತ, ಇಂಗ್ಲೆಂಡ್, ಆಸ್ಟ್ರೇಲಿಯಾ) ವ್ಯವಸ್ಥೆಯು ಈ ಮೂರು ರಾಷ್ಟ್ರಗಳಿಗೆ ಐಸಿಸಿ ಆದಾಯದ ಸಿಂಹಪಾಲು ಸಲ್ಲುತ್ತಿದೆ. ಪ್ರಸಕ್ತ ಬಿಸಿಸಿಐ, ಐಸಿಸಿ ಆದಾಯದಲ್ಲಿ ಶೇ. 20.3ರಷ್ಟನ್ನು ಭಾರತವೇ ಪಡೆಯುತ್ತಿದ್ದು, ಒಂದೊಮ್ಮೆ ಬಿಗ್ ತ್ರೀ ವ್ಯವಸ್ಥೆ ರದ್ದಾದರೆ, ಅರ್ಧದಷ್ಟು ಮೊತ್ತವನ್ನು ಬಿಸಿಸಿಐ ಕಳೆದುಕೊಳ್ಳಲಿದೆ.
