ವಿಶಾಖಪಟ್ಟಣಂ[ಅ.05]: ಹಿಟ್ ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್ ನಲ್ಲಿ ಆರಂಭಿಕನಾಗಿ ಭರ್ಜರಿಯಾಗಿಯೇ ಹೊಸ ಇನಿಂಗ್ಸ್ ಆರಂಭಿಸಿದ್ದಾರೆ. ಆರಂಭಿಕನಾಗಿ ಬಡ್ತಿಪಡೆದ ಮೊದಲ ಟೆಸ್ಟ್ ಪಂದ್ಯದಲ್ಲೇ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ತೋರಿದ್ದಾರೆ. ಮೊದಲ ಇನಿಂಗ್ಸ್ ನಲ್ಲಿ 244 ಎಸೆತಗಳನ್ನು ಎದುರಿಸಿ 23 ಬೌಂಡರಿ ಹಾಗೂ 6 ಸಿಕ್ಸರ್ ನೆರವಿನಿಂದ 176 ರನ್ ಚಚ್ಚಿದ್ದ ರೋಹಿತ್, ಇದೀಗ ಎರಡನೇ ಇನಿಂಗ್ಸ್’ನಲ್ಲೂ 133 ಎಸೆತಗಳಲ್ಲಿ 9 ಬೌಂಡರಿ ಹಾಗೂ ಸಿಕ್ಸರ್ ನೆರವಿನೊಂದಿಗೆ ಭರ್ಜರಿ ಶತಕ ಸಿಡಿಸಿದ್ದಾರೆ. ಇದರ ಜತೆಗೆ ಹಿಟ್ ಮ್ಯಾನ್ ಸಿಕ್ಸರ್ ಕಿಂಗ್ ಎನ್ನುವ ಅಪರೂಪದ ದಾಖಲೆಯನ್ನು ಬರೆದಿದ್ದಾರೆ.

ವೈಜಾಗ್ ಟೆಸ್ಟ್ ಆಡುತ್ತಿರುವ ರಹಾನೆಗಿದು ಗುಡ್ ನ್ಯೂಸ್..!
 
ಹೌದು, ಮೊದಲ ಇನಿಂಗ್ಸ್’ನಲ್ಲಿ 6 ಸಿಕ್ಸರ್ ಚಚ್ಚಿದ್ದ ರೋಹಿತ್ ಎರಡನೇ ಇನಿಂಗ್ಸ್’ನಲ್ಲೂ ಸಿಕ್ಸರ್ ಆರ್ಭಟ ಮುಂದುವರೆಸಿದ್ದಾರೆ. ಡೇನ್ ಪಿಯೆಟ್ ಎಸೆದ 20ನೇ ಓವರ್’ನಲ್ಲಿ ಚೆಂಡನ್ನು ಸಿಕ್ಸರ್’ಗಟ್ಟುವ ಮೂಲಕ ಟೆಸ್ಟ್ ಪಂದ್ಯವೊಂದರಲ್ಲಿ ಭಾರತ ಪರ ಗರಿಷ್ಠ ಸಿಕ್ಸರ್ ಸಿಡಿಸಿದ ಬ್ಯಾಟ್ಸ್;ಮನ್ ಎನ್ನುವ ದಾಖಲೆ ಬರೆದರು. ಈ ಮೂಲಕ 25 ವರ್ಷಗಳ ಹಿಂದೆ ನವಜೋತ್ ಸಿಂಗ್ ಸಿಧು ಹೆಸರಿನಲ್ಲಿದ್ದ ದಾಖಲೆಯನ್ನು ಅಳಿಸಿ ಹಾಕಿದ್ದಾರೆ. 1994ರಲ್ಲಿ ಲಖನೌದಲ್ಲಿ ನಡೆದ ಟೆಸ್ಟ್ ಪಂದ್ಯವೊಂದರಲ್ಲಿ 8 ಸಿಕ್ಸರ್ ಸಿಡಿಸಿದ್ದರು. ಇದೀಗ ರೋಹಿತ್ ಶರ್ಮಾ 10* ಸಿಕ್ಸರ್ ಸಿಡಿಸಿದ್ದು, ಈ ಪಟ್ಟಿಗೆ ಇನ್ನೂ ಕೆಲವು ಸಿಕ್ಸರ್’ಗಳು ಸೇರ್ಪಡೆಯಾಗುವ ಸಾಧ್ಯತೆಯಿದೆ.

ರೋಹಿತ್ ಒಂದು ಶತಕ; ಹಲವಾರು ದಾಖಲೆ ನಿರ್ಮಾಣ..!

ಹಿಟ್ ಮ್ಯಾನ್ ರೋಹಿತ್ ಇದರೊಂದಿಗೆ ಟೆಸ್ಟ್, ಏಕದಿನ ಹಾಗೂ ಟಿ20 ಪಂದ್ಯವೊಂದರಲ್ಲಿ ಭಾರತ ಪರ ಗರಿಷ್ಠ ಸಿಕ್ಸರ್ ಬಾರಿಸಿದ ಆಟಗಾರ ಎನ್ನುವ ಕೀರ್ತಿಗೆ ಭಾಜನರಾಗಿದ್ದಾರೆ. 2013ರಲ್ಲಿ ಬೆಂಗಳೂರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ 16 ಸಿಕ್ಸರ್ ಚಚ್ಚಿದ್ದರು. ಇನ್ನು ರೋಹಿತ್ 2017ರಲ್ಲಿ ಶ್ರೀಲಂಕಾ ವಿರುದ್ಧ ನಡೆದ ಟಿ20 ಪಂದ್ಯವೊಂದರಲ್ಲಿ 10 ಸಿಕ್ಸರ್ ಬಾರಿಸಿದ್ದರು. ಇದೀಗ ಟೆಸ್ಟ್ ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 10* ಸಿಕ್ಸರ್ ಸಿಡಿಸಿದ್ದಾರೆ.