ರಾಹುಲ್ ಬದಲು ರೋಹಿತ್ ಟೆಸ್ಟ್ ಓಪನರ್?
ಪದೇ ಪದೇ ಕಳಪೆ ಪ್ರದರ್ಶನ, ಸಿಕ್ಕ ಅವಕಾಶ ಬಳಸಿಕೊಳ್ಳಲು ವಿಫಲವಾಗಿರುವ ಕೆ.ಎಲ್ ರಾಹುಲ್ ಅವರನ್ನು ಟೆಸ್ಟ್ ತಂಡದಿಂದ ಕೊಕ್ ನೀಡುವ ಸಾಧ್ಯತೆ ಹೆಚ್ಚಾಗಿದೆ. ರಾಹುಲ್ ಬದಲು ಅನುಭವಿ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಅವರನ್ನು ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿಯಲ್ಲಿ ಆರಂಭಿಕನಾಗಿ ಕಣಕ್ಕಿಳಿಸುವ ಸಾಧ್ಯತೆಯಿದೆ. ಈ ಕುರಿತ ಸುಳಿವನ್ನು ಸ್ವತಃ ಆಯ್ಕೆ ಸಮಿತಿ ಅಧ್ಯಕ್ಷ ಎಂ.ಎಸ್.ಕೆ. ಪ್ರಸಾದ್ ನೀಡಿದ್ದಾರೆ.
"
ನವದೆಹಲಿ[ಸೆ.11]: ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಭರ್ಜರಿ ಆರಂಭ ಪಡೆದಿರುವ ಭಾರತ ತಂಡಕ್ಕೆ, ದಕ್ಷಿಣ ಆಫ್ರಿಕಾ ವಿರುದ್ಧ ತವರಿನಲ್ಲಿ ನಡೆಯಲಿರುವ ಸರಣಿಗೂ ಮುನ್ನ ಕಳವಳ ಶುರುವಾಗಿದೆ. ಆರಂಭಿಕ ಬ್ಯಾಟ್ಸ್‌ಮನ್ ಕೆ.ಎಲ್.ರಾಹುಲ್ ಸತತ ವೈಫಲ್ಯ ಕಾಣುತ್ತಿದ್ದು, ಅವರನ್ನು ಮುಂದುವರಿಸಬೇಕೋ ಬೇಡವೋ ಎನ್ನುವ ಗೊಂದಲ ಆಯ್ಕೆ ಸಮಿತಿಯನ್ನು ಕಾಡುತ್ತಿದೆ. ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥ ಎಂ.ಎಸ್.ಕೆ.ಪ್ರಸಾದ್, ರಾಹುಲ್ ಲಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ರೋಹಿತ್ ಶರ್ಮಾ ಅವರನ್ನು ಆರಂಭಿಕನನ್ನಾಗಿ ಪರಿಗಣಿಸುವುದಾಗಿ ಹೇಳಿದ್ದಾರೆ.
KL ರಾಹುಲ್ ಫ್ಲಾಪ್: ಸ್ಥಾನ ತುಂಬಲು ರೆಡಿಯಾದ ಮೂವರು ಕ್ರಿಕೆಟಿಗರು..!
ವಿಶ್ವ ಚಾಂಪಿಯನ್ಶಿಪ್ನಲ್ಲಿ ಪ್ರತಿ ಪಂದ್ಯವೂ ಮಹತ್ವದಾಗಿದ್ದು, ಭಾರತ ಯಾವ ಎದುರಾಳಿಯನ್ನೂ ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ. ಹೀಗಾಗಿ, ಪ್ರತಿಯೊಂದು ಸಮಸ್ಯೆಗೂ ಶೀಘ್ರದಲ್ಲಿ ಸೂಕ್ತ ಪರಿಹಾರ ಹುಡುಕಿಕೊಳ್ಳುವ ಅನಿವಾರ್ಯತೆ ಎದುರಾಗಿದೆ.
ಅವಕಾಶ ಬಳಸಿಕೊಳ್ಳದ ರಾಹುಲ್
ವೆಸ್ಟ್‌ಇಂಡೀಸ್ ಪ್ರವಾಸದಲ್ಲಿ ಟೀಂ ಇಂಡಿಯಾ ಬ್ಯಾಟ್ಸ್‌ಮನ್‌ಗಳು ಅಮೋಘ ಪ್ರದರ್ಶನ ತೋರಿದರೂ, ಕರ್ನಾಟಕದ ರಾಹುಲ್ ಮಾತ್ರ ನಿರೀಕ್ಷಿತ ಪ್ರದರ್ಶನ ತೋರಲಿಲ್ಲ. 4 ಇನ್ನಿಂಗ್ಸ್‌ಗಳಲ್ಲಿ ಅವರು ಗಳಿಸಿದ್ದು ಕೇವಲ 101 ರನ್. ಕಳೆದೊಂದು ವರ್ಷದಲ್ಲಿ ರಾಹುಲ್ ಒಂದೂ ಅರ್ಧಶತಕ ಬಾರಿಸಿಲ್ಲ.
ಟೀಂ ಇಂಡಿಯಾ ಕೋಚ್ ಶಾಸ್ತ್ರಿ ಸ್ಯಾಲರಿ ; ಬೆಚ್ಚಿ ಬೀಳಬೇಡಿ ಸ್ಲಿಪ್ ನೋಡಿ!
ಜೂನ್ 2018ರಲ್ಲಿ ಆಫ್ಘಾನಿಸ್ತಾನ ವಿರುದ್ಧ 54, 2018ರ ಸೆಪ್ಟೆಂಬರ್‌ನಲ್ಲಿ ಇಂಗ್ಲೆಂಡ್ ವಿರುದ್ಧ 149 ರನ್ ಗಳಿಸಿದ್ದನ್ನು ಹೊರತು ಪಡಿಸಿದರೆ, ರಾಹುಲ್ ರನ್ ಗಳಿಸಲು ಪರದಾಡಿದ್ದಾರೆ. ಕಳೆದೆರಡು ವರ್ಷಗಳಲ್ಲಿ ಅವರಿಂದ ಕೇವಲ 1 ಶತಕ, 1 ಅರ್ಧಶತಕ ದಾಖಲಾಗಿದೆ. ಆಸ್ಪ್ರೇಲಿಯಾ, ಇಂಗ್ಲೆಂಡ್ ಪ್ರವಾಸಗಳಲ್ಲೂ ವೈಫಲ್ಯ ಕಂಡ ರಾಹುಲ್ ಸ್ಥಿರ ಪ್ರದರ್ಶನ ತೋರಲು ನಿರಂತರವಾಗಿ ವೈಫಲ್ಯ ಅನುಭವಿಸುತ್ತಿದ್ದಾರೆ. ಎಷ್ಟೇ ಅವಕಾಶ ಸಿಕ್ಕರೂ, ಅವುಗಳನ್ನು ಬಳಸಿಕೊಂಡು ಖಾಯಂ ಆರಂಭಿಕನಾಗಿ ಉಳಿಯಲು ಸಾಧ್ಯವಾಗುತ್ತಿಲ್ಲ. ರಾಹುಲ್‌ಗೆ ಮತ್ತಷ್ಟು ಅವಕಾಶ ನೀಡುವುದರಲ್ಲಿ ಅರ್ಥವಿಲ್ಲ ಎನ್ನುವ ಚರ್ಚೆ ಆಯ್ಕೆ ಸಮಿತಿ ಸಭೆಗಳಲ್ಲಿ ಕೇಳಿ ಬರುತ್ತಿದೆ ಎನ್ನಲಾಗಿದೆ.