"

ನವದೆಹಲಿ[ಸೆ.13]: ದೇಶದಲ್ಲಿರುವ ಲಕ್ಷಾಂತರ ಕ್ರಿಕೆಟ್ ಆಟಗಾರರು ಒಮ್ಮೆಯಾದರು ಭಾರತ ತಂಡವನ್ನು ಪ್ರತಿನಿಧಿಸಬೇಕು ಎಂದು ತುದಿಗಾಲಿನಲ್ಲಿ ನಿಂತಿರುತ್ತಾರೆ. ಅವರಲ್ಲಿ ಬೆರಳೆಣಿಕೆ ಮಂದಿ ಮಾತ್ರ ತಮ್ಮ ಕನಸನ್ನು ನನಸು ಮಾಡಿಕೊಳ್ಳುತ್ತಾರೆ. ಅಂತಹದ್ದರಲ್ಲಿ ತಾನಾಡಿದ ಮೈದಾನದಲ್ಲೇ ಸ್ಟ್ಯಾಂಡ್’ವೊಂದಕ್ಕೆ ತನ್ನದೇ ಹೆಸರಿಟ್ಟರೆ ಹೇಗಿರಬೇಡ..? ಹೌದು, ನಾವೀಗ ಹೇಳಲು ಹೊರಟಿರುವುದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬದುಕಿನ ಕಥೆಯನ್ನು.

ಕೋಟ್ಲಾ ಈಗ ಜೇಟ್ಲಿ ಕ್ರೀಡಾಂಗಣ; ಸಮಾರಂಭದಲ್ಲಿ ಕೊಹ್ಲಿ, ಅಮಿತ್ ಶಾ!

ಡೆಲ್ಲಿ ಕ್ರಿಕೆಟ್ ಸಂಸ್ಥೆ ಫಿರೋಜ್ ಶಾ ಕೋಟ್ಲಾ ಮೈದಾನಕ್ಕೆ ಅರುಣ್ ಜೇಟ್ಲಿ ಮೈದಾನ ಎಂದು ಮರುನಾಮಕರಣ ಮಾಡಿದ ಬೆನ್ನಲ್ಲೇ ವಿರಾಟ್ ಸಾಧನೆ ಗುರುತಿಸಿ ಗೌರವ ಸೂಚಕವಾಗಿ ಮೈದಾನದ ಒಂದು ಸ್ಟ್ಯಾಂಡ್’ಗೆ ವಿರಾಟ್ ಕೊಹ್ಲಿ ಸ್ಟ್ಯಾಂಡ್ ಎಂದು ಮರುನಾಮಕರಣ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ವಿರಾಟ್ ಕೊಹ್ಲಿ, ನಾನು ಇಂತಹದ್ದೊಂದು ದೊಡ್ಡ ಗೌರವಕ್ಕೆ ಪಾತ್ರರಾಗುತ್ತೇನೆ ಎಂದು ಭಾವಿಸಿರಲಿಲ್ಲ  ನನ್ನ ಕುಟುಂಬದೆದುರು ಹೇಗೆ ಮಾತನಾಡಬೇಕು ಎಂದು ತಿಳಿಯುತ್ತಿಲ್ಲ ಎಂದರು. ಇದೇ ವೇಳೆ ಕನ್ನಡಿಗ ಜಾವಗಲ್ ಶ್ರೀನಾಥ್ ಬಳಿ ಹಸ್ತಾಕ್ಷರ ಕೇಳಿದ ನೆನಪನ್ನು ಹಂಚಿಕೊಂಡಿದ್ದಾರೆ. 

ಅದು 2001[2000] ಜಿಂಬಾಬ್ವೆ ವಿರುದ್ಧದ ಪಂದ್ಯದ ಸಂದರ್ಭದಲ್ಲಿ ನನ್ನ ಬಾಲ್ಯದ ಕೋಚ್ ರಾಜ್ ಕುಮಾರ್ ಶರ್ಮಾ ನನಗೆ 2 ಟಿಕೆಟ್ ನೀಡಿದ್ದರು. ನನಗೀಗಲೂ ನೆನಪಿದೆ, ಗ್ಯಾಲರಿ ಗ್ರಿಲ್ ಸಮೀಪವಿದ್ದ ಜಾವಗಲ್ ಶ್ರೀನಾಥ್ ಬಳಿ ಆಟೋಗ್ರಾಫ್ ಕೇಳಿದ್ದೆ. ನಾವೀಗ ಎಷ್ಟು ದೂರ ಬಂದಿದ್ದೇವೆ ಎಂದು ಅಣ್ಣನ ಬಳಿ ಮಾತನಾಡಿದೆ ಎಂದು ವಿರಾಟ್ ಆ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಇಂದು ಇದೇ ಮೈದಾನದಲ್ಲಿ ನನ್ನ ಹೆಸರಿನಲ್ಲಿ ಸ್ಟ್ಯಾಂಡ್ ನಿರ್ಮಾಣವಾಗಿರುವುದು ಅತಿದೊಡ್ಡ ಗೌರವ ಎಂದು ವಿರಾಟ್ ಹೇಳಿದ್ದಾರೆ. 

ಇತ್ತೀಚೆಗಷ್ಟೇ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡುವುದರ ಮೂಲಕ ಭಾರತ ಪರ ಅತಿ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಗೆಲ್ಲಿಸಿಕೊಟ್ಟ ನಾಯಕ ಎನ್ನುವ ಕೀರ್ತಿಗೆ ವಿರಾಟ್ ಪಾತ್ರರಾಗಿದ್ದರು.