ಪಂದ್ಯದ ಕೊನೆಯ ಕೆಲ ನಿಮಿಷಗಳಲ್ಲಿ ಬುಲ್ಸ್ ಮಾಡಿಕೊಂಡ ಎಡವಟ್ಟಿನಿಂದಾಗಿ ಪಂದ್ಯವನ್ನು ಕೈಚೆಲ್ಲಬೇಕಾಯಿತು.
ನಾಗ್ಪುರ(ಆ.10): ರೋಹಿತ್ ಕುಮಾರ್ ಅವರ ಪ್ರಭಾವಿ ಆಟದ ಹೊರತಾಗಿಯೂ, ತಮಿಳ್ ತಲೈವಾಸ್ ತಂಡ ಸಂಘಟಿತ ಪ್ರದರ್ಶನದೆದುರು ಬೆಂಗಳೂರು ಬುಲ್ಸ್ ನಿರಾಸೆ ಅನುಭವಿಸಿತು. ಈ ಮೂಲಕ ತವರಿನ ಚರಣಕ್ಕೆ ಸೋಲಿನೊಂದಿಗೆ ವಿದಾಯ ಹೇಳಿತು.
ಇಲ್ಲಿನ ಮಂಕಾಪುರ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಬಿ ವಲಯದ ಪಂದ್ಯದಲ್ಲಿ ಅಜಯ್ ಠಾಕೂರ್ ನೇತೃತ್ವದ ತಮಿಳ್ ತಲೈವಾಸ್ ಪಡೆ 29-24 ಅಂಕಗಳ ಅಂತರಲ್ಲಿ ಜಯದ ನಿಟ್ಟುಸಿರು ಬಿಟ್ಟಿತು. ಈ ಜಯದ ಮೂಲಕ ಟೂರ್ನಿಯಲ್ಲಿ ಮೊದಲ ಜಯ ದಾಖಲಿಸಿತು. ತಲೈವಾಸ್'ಗೆ ಪ್ರಪಂಜನ್ ಮೊದಲ ಅಂಕ ತಂದುಕೊಟ್ಟರೆ, 3ನೇ ನಿಮಿಷದಲ್ಲಿ ಅಜಯ್ ಕುಮಾರ್ ಬುಲ್ಸ್ ಅಂಕ ಖಾತೆ ತೆರೆಯಲು ನೆರವಾದರು. ಮೊದಲೆರಡು ಪಂದ್ಯಗಳಲ್ಲಿ ಸೋತು ಸಾಕಷ್ಟು ಒತ್ತಡದಲ್ಲಿದ್ದ ತಲೈವಾಸ್ ಪಡೆ ಆರಂಭದಲ್ಲೇ ಆಕ್ರಮಣಕಾರಿ ಆಟವಾಡುವ ಮನ್ಸೂಚನೆ ನೀಡಿತು. ಮೊದಲಾರ್ಧ ಮುಕ್ತಾಯದ ವೇಳೆಗೆ ತಲೈವಾಸ್ ಪಡೆ 12-8 ಅಂಕಗಳಿಂದ ಮುನ್ನಡೆ ಸಾಧಿಸಿತ್ತು.
ನಾಲ್ಕು ಅಂಕಗಳ ಹಿನ್ನಡೆಯೊಂದಿಗೆ ದ್ವಿತಿಯಾರ್ಧ ಆರಂಭಿಸಿದ ಬುಲ್ಸ್'ಗೆ ಕನ್ನಡಿಗ ಹರೀಶ್ ನಾಯ್ಕ್ ತಂಡಕ್ಕೆ ಒಂದಂಕ ತಂದಿತ್ತರು. ಆದರೆ ಪ್ರಪಂಜನ್ ಆಕ್ರಮಣಕಾರಿಯಾಟದಿಂದ 21ನೇ ನಿಮಿಷದಲ್ಲಿ ಬುಲ್ಸ್ ಆಲೌಟ್ ಆಯಿತು.
ಇನ್ನೇನು ಪಂದ್ಯ ಬುಲ್ಸ್ ಕೈಜಾರಿತು ಎನ್ನುವಷ್ಟರಲ್ಲಿ ಮಿಂಚಿನ ದಾಳಿ ನಡೆಸಿದ ರೋಹಿತ್ ಕುಮಾರ್ ಬುಲ್ಸ್ ಅಂತರವನ್ನು 19-21ಕ್ಕೆ ತಗ್ಗಿಸಿದರು. ಆದರೆ ಪಂದ್ಯದ ಕೊನೆಯ ಕೆಲ ನಿಮಿಷಗಳಲ್ಲಿ ಬುಲ್ಸ್ ಮಾಡಿಕೊಂಡ ಎಡವಟ್ಟಿನಿಂದಾಗಿ ಪಂದ್ಯವನ್ನು ಕೈಚೆಲ್ಲಬೇಕಾಯಿತು.
