ಶುಕ್ರವಾರ ನಡೆಯಲಿರುವ ಎರಡನೇ ಸೆಮಿಫೈನಲ್‌'ನಲ್ಲಿ ಎಂ.ಎಸ್. ಧೋನಿ ಸಾರಥ್ಯದ ಜಾರ್ಖಂಡ್ ಮತ್ತು ಪ.ಬಂಗಾಳ ಕಾದಾಡಲಿವೆ.

ನವದೆಹಲಿ(ಮಾ.16): ನಾಯಕ ವಿಜಯ್ ಶಂಕರ್ (53*) ಹಾಗೂ ವಿಕೆಟ್‌'ಕೀಪರ್ ದಿನೇಶ್ ಕಾರ್ತಿಕ್ (77) ದಾಖಲಿಸಿದ ಅರ್ಧಶತಕಗಳ ನೆರವಿನಿಂದ ಪ್ರತಿಷ್ಠಿತ ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ತಮಿಳುನಾಡು ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟಿದೆ.

ಇಲ್ಲಿನ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಗೆಲುವಿಗೆ ಬರೋಡ ನೀಡಿದ್ದ 220 ರನ್ ಗುರಿಯನ್ನು ಇನ್ನೂ 15 ಎಸೆತಗಳು ಬಾಕಿ ಇರುವಂತೆಯೇ ಕೇವಲ 4 ವಿಕೆಟ್ ಕಳೆದುಕೊಂಡು ತಮಿಳುನಾಡು ಜಯದ ನಗೆ ಬೀರಿತು.

ಮೊದಲು ಬ್ಯಾಟ್ ಮಾಡಿದ ಬರೋಡ ಆರಂಭಿಕರಾದ ಕೇದಾರ್ ದೇವ್‌'ಧರ್ (46), ಆದಿತ್ಯ ವಾಘ್ಮೋಡ್ (45), ಕೃನಾಲ್ ಪಾಂಡ್ಯ (30), ಇರ್ಫಾನ್ ಪಠಾಣ್ (27) ಹಾಗೂ ಪಿನಾಲ್ ಶಾ ಕಲೆಹಾಕಿದ 36 ರನ್‌'ಗಳ ನೆರವಿನೊಂದಿಗೆ 49.3 ಓವರ್‌ಗಳಲ್ಲಿ 219ಕ್ಕೆ ರನ್‌'ಗೆ ಆಲೌಟ್ ಆಯಿತು.

ಬಳಿಕ ಬ್ಯಾಟ್ ಮಾಡಿದ ತಮಿಳುನಾಡು ಆರಂಭದಲ್ಲಿ ತಡವರಿಸಿದರೂ, ದಿನೇಶ್ ಕಾರ್ತಿಕ್ ಮತ್ತು ವಿಜಯ್ ಶಂಕರ್ ಅವರ ಜವಾಬ್ದಾರಿಯುತ ಆಟದಿಂದ ಪುಟಿದೆದ್ದಿತು. ಕಾರ್ತಿಕ್ ಔಟಾದ ಬಳಿಕ ವಾಷಿಂಗ್ಟನ್ ಸುಂದರ್ (23) ಅವರೊಂದಿಗೆ ಐದನೇ ವಿಕೆಟ್‌'ಗೆ ಮುರಿಯದ 37 ರನ್ ಪೇರಿಸಿದ ವಿಜಯ್ ತಂಡಕ್ಕೆ ಭವ್ಯ ಜಯ ತಂದಿತ್ತರು.

ಇದೀಗ ಇದೇ ಮೈದಾನದಲ್ಲಿ ಶುಕ್ರವಾರ ನಡೆಯಲಿರುವ ಎರಡನೇ ಸೆಮಿಫೈನಲ್‌'ನಲ್ಲಿ ಎಂ.ಎಸ್. ಧೋನಿ ಸಾರಥ್ಯದ ಜಾರ್ಖಂಡ್ ಮತ್ತು ಪ.ಬಂಗಾಳ ಕಾದಾಡಲಿವೆ.

ಸಂಕ್ಷಿಪ್ತ ಸ್ಕೋರ್

ಬರೋಡ: 49.3 ಓವರ್‌'ಗಳಲ್ಲಿ 219

(ದೇವ್‌ಧರ್ 46, ವಾಘ್ಮೋಡ್ 45; ಸಾಯಿ ಕಿಶೋರ್ 59/4)

ತಮಿಳುನಾಡು: 47.3 ಓವರ್‌ಗಳಲ್ಲಿ 4 ವಿಕೆಟ್‌ಗೆ 220

(ದಿನೇಶ್ ಕಾರ್ತಿಕ್ 77, ವಿಜಯ್ ಶಂಕರ್ 53* ಅತೀತ್ ಸೇಠ್ 36/3)

ಫಲಿತಾಂಶ: ತಮಿಳುನಾಡಿಗೆ 6 ವಿಕೆಟ್ ಗೆಲುವು

ಪಂದ್ಯಶ್ರೇಷ್ಠ: ದಿನೇಶ್ ಕಾರ್ತಿಕ್