ಸಿಡ್ನಿ[ಜ.04]: ಚೇತೇಶ್ವರ್ ಪೂಜಾರ ದ್ವಿಶತಕ ವಂಚಿತ ಬ್ಯಾಟಿಂಗ್ ಹಾಗೂ ವಿಕೆಟ್’ಕೀಪರ್ ಬ್ಯಾಟ್ಸ್’ಮನ್ ರಿಷಭ್ ಪಂತ್ ಅಜೇಯ ಶತಕದ ನೆರವಿನಿಂದ ಸಿಡ್ನಿ ಟೆಸ್ಟ್’ನಲ್ಲಿ ಭಾರತ 6 ವಿಕೆಟ್ ಕಳೆದುಕೊಂಡು 509 ರನ್ ಬಾರಿಸಿದ್ದು ಬೃಹತ್ ಮೊತ್ತದತ್ತ ಮುನ್ನುಗ್ಗುತ್ತಿದೆ.

ಮೊದಲ ದಿನದಂತ್ಯಕ್ಕೆ 303 ರನ್’ಗಳಿಗೆ 4 ವಿಕೆಟ್ ಕಳೆದುಕೊಂಡು, ಎರಡನೇ ದಿನ ಇನ್ನಿಂಗ್ಸ್ ಆರಂಭಿಸಿದ ಭಾರತ ಆರಂಭದಲ್ಲೇ ವಿಕೆಟ್ ಕಳೆದುಕೊಂಡಿತು. 5ನೇ ವಿಕೆಟ್’ಗೆ ಹನುಮ ವಿಹಾರಿ-ಪೂಜಾರ ಜೋಡಿ 101 ರನ್’ಗಳ ಜತೆಯಾಟವಾಡಿತು. ವಿಹಾರಿ 42 ರನ್ ಬಾರಿಸಿ ಲಯನ್’ಗೆ ಎರಡನೇ ಬಲಿಯಾದರು. ಆ ಬಳಿಕ ಪಂತ್ ಜತೆ ಪೂಜಾರ 89 ರನ್’ಗಳ ಜತೆಯಾಟವಾಡುವ ಮೂಲಕ ತಂಡದ ಮೊತ್ತವನ್ನು ನಾನೂರರ ಗಡಿ ದಾಟಿಸಿತು. 193 ರನ್ ಬಾರಿಸಿ ಪೂಜಾರ, ನೇಥನ್ ಲಯನ್’ಗೆ ವಿಕೆಟ್ ಒಪ್ಪಿಸಿದರು. ಇದೀಗ ಜಡೇಜಾ-ಪಂತ್ ಜೋಡಿ 91 ರನ್’ಗಳ ಜತೆಯಾಟ ನಿರ್ವಹಿಸಿದೆ.

ಭಾರತ ಪರ ಪಂತ್ 100 ಹಾಗೂ ಜಡೇಜಾ 31 ರನ್ ಬಾರಿಸಿದ್ದಾರೆ. ಇದು ರಿಷಭ್ ಪಂತ್ ಟೆಸ್ಟ್ ಕ್ರಿಕೆಟ್’ನಲ್ಲಿ ಎರಡನೇ ಶತಕವಾಗಿದೆ. ಆಸಿಸ್ ಪರ ಇಂದು ನೇಥನ್ ಲಯನ್ 2 ವಿಕೆಟ್ ಕಬಳಿಸಿದ್ದಾರೆ.