ಚೆನ್ನೈ(ಸೆ.30): ದೀಪಕ್ ಹೂಡಾ ಪ್ರಭಾವಿ ಪ್ರದರ್ಶನದ ನೆರವಿನಿಂದ ಪುಣೇರಿ ಪಲ್ಟಾನ್ 34-33 ಅಂಕಗಳ ಅಂತರದಲ್ಲಿ ಯುಪಿ ಯೋಧಾ ವಿರುದ್ಧ ರೋಚಕ ಜಯ ಸಾಧಿಸಿತು.

ಇಲ್ಲಿನ ಜವಾಹರ್‌ ಲಾಲ್ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಅಂತರ್ ವಲಯ ಚಾಲೆಂಜ್ ವಿಭಾಗದ ಮೊದಲ ಪಂದ್ಯದಲ್ಲಿ ಗೆಲುವಿಗಾಗಿ ಉಭಯ ತಂಡಗಳು ಸಾಕಷ್ಟು ಬೆವರು ಹರಿಸಿದರು. ಆದರೆ ಕೊನೆ ಕ್ಷಣದಲ್ಲಿ ಮಿಂಚಿನ ದಾಳಿ ನಡೆಸಿದ ದೀಪಕ್ ನಿವಾಸ್ ಹೂಡಾ ಯುಪಿ ಯೋಧಾಗೆ ಶಾಕ್ ನೀಡುವಲ್ಲಿ ಯಶಸ್ವಿಯಾದರು.

ಮೊದಲಾರ್ಧದಲ್ಲಿ ಉಭಯ ತಂಡಗಳು ಜಿದ್ದಾಜಿದ್ದಿನಿಂದ ಹೋರಾಟ ನಡೆಸಿದವು. ಮೊದಲಾರ್ಧದ ಕೊನೆಯ 1 ನಿಮಿಷವಿದ್ದಾಗ ಯುಪಿ ಯೋಧಾ ತಂಡ ಆಲೌಟ್ ಆಯಿತು. ಪಂದ್ಯದ ಪ್ರಥಮಾರ್ಧದಲ್ಲಿ 18-14 ಅಂಕಗಳಿಂದ ಪುಣೇರಿ ಪಲ್ಟನ್ ತಂಡ ಮುನ್ನಡೆ ಸಾಧಿಸಿತ್ತು.

ದ್ವಿತೀಯಾರ್ಧದ ವೇಳೆ ಆಕ್ರಮಣಕಾರಿ ಆಟಕ್ಕೆ ಮೊರೆಯಾದ ಉಭಯ ತಂಡಗಳ ಆಟಗಾರರು ಆಟದ ರೋಚಕತೆಯನ್ನು ಮತ್ತಷ್ಟು ಹೆಚ್ಚಿಸಿದರು. ದ್ವಿತೀಯಾರ್ಧದ 14ನೇ ನಿಮಿಷದಲ್ಲಿ ಯುಪಿ ಯೋಧಾವನ್ನು ಆಲೌಟ್ ಮಾಡುವ ಮೂಲಕ ಪುಣೇರಿ ಅಂಕಗಳ ಅಂತರವನ್ನು 28-17 ಹೆಚ್ಚಿಸಿಕೊಂಡಿತು. ಈ ವೇಳೆ ಉತ್ತಮ ರೈಡಿಂಗ್‌ಗಳ ನಡೆಸಿದ ನಿತಿನ್ ತೋಮರ್ ಯೋಧಾ ಖಾತೆಗೆ ಅಂಕ ತುಂಬುತ್ತಾ ಸಾಗಿದರು. ಅಂತಿಮ ನಿಮಿಷದಲ್ಲಿ ಎರಡೂ ತಂಡಗಳು 33-33 ಅಂಕ ಸಂಪಾದಿಸಿದ್ದವು. ಈ ವೇಳೆ ನಿತಿನ್ ತೋಮರ್‌'ರನ್ನು ಔಟ್ ಮಾಡಿದ ಪುಣೇರಿ ಆಟಗಾರರು ಒಂದು ಅಂಕ ಸಂಪಾದಿಸಿ ಅಂಕಗಳ ಅಂತರವನ್ನು 34-33 ಕ್ಕೇರಿಸಿಕೊಂಡರು. ಕಡೇ ರೈಡ್'ನಲ್ಲಿ ಚಾಣಾಕ್ಷವಾಗಿ ರೈಡ್ ಮಾಡಿದ ಹೂಡಾ ಪಂದ್ಯವನ್ನು ತಮ್ಮ ಪರ ವಾಲುವಂತೆ ಮಾಡಿದರು.