"ಒಬ್ಬ ಆಟಗಾರನಾಗಿ ಅನಿಲ್ ಕುಂಬ್ಳೆ ಮಾಡಿರುವ ಸಾಧನೆಯನ್ನು ನೋಡಿರಿ. ಕಳೆದ ಒಂದು ವರ್ಷದಲ್ಲಿ ಅವರ ಅಡಿಯಲ್ಲಿ ಟೀಮ್ ಇಂಡಿಯಾ ಸಾಧಿಸಿರುವುದನ್ನು ಗಮನಿಸಿರಿ. ಇದು ಅದ್ಭುತ ಎನ್ನದೇ ಬೇರೆ ವಿಧಿಯಿಲ್ಲ," ಎಂದು ಗವಾಸ್ಕರ್ ಹೇಳಿದ್ದಾರೆ.

ನವದೆಹಲಿ(ಜೂನ್ 21): ತಾವು ಹೇಳಿದಂತೆ ಕೇಳುವ ಕೋಚ್ ಬೇಕು ಎನ್ನುವ ಆಟಗಾರರನ್ನೇ ತಂಡದಿಂದ ಹೊರಹಾಕಬೇಕು - ಇದು ಮಾಜಿ ಕ್ರಿಕೆಟಿಗ ಸುನೀನ್ ಗವಾಸ್ಕರ್ ಹೇಳಿದ ಆಕ್ರೋಶದ ಮಾತುಗಳು. ತಂಡದ ನಾಯಕ ಮತ್ತು ಕೆಲ ಆಟಗಾರರ ಅಸಮಾಧಾನದಿಂದ ಅನಿಲ್ ಕುಂಬ್ಳೆ ರಾಜೀನಾಮೆ ನೀಡಿದ್ದಕ್ಕೆ ಗವಾಸ್ಕರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

"ನಿಮಗೆ ಮೆತ್ತಗಿರುವವರು ಬೇಕೆನಿಸುತ್ತದೆ. 'ಓಕೆ ಬಾಯ್ಸ್, ನಿಮಗೆ ಹುಷಾರಿಲ್ಲವಲ್ಲ, ಇವತ್ತು ಪ್ರಾಕ್ಟೀಸ್'ಗೆ ಬರಬೇಡಿ, ಆರಾಮವಾಗಿ ಶಾಪಿಂಗ್ ಮಾಡಿಕೊಂಡು ಇರಿ,' ಎಂದು ಹೇಳುವ ವ್ಯಕ್ತಿ ನಿಮಗೆ ಬೇಕು ಅಲ್ಲವಾ? ಅನಿಲ್ ಕುಂಬ್ಳೆಯಂಥ ನಿಷ್ಠುರ, ಕಾಯಕವ್ಯಕ್ತಿ ಬಗ್ಗೆ ಯಾರಾದರೂ ಆಟಗಾರರು ದೂರು ನೀಡುತ್ತಿದ್ದಾರೆಂದರೆ, ಅಂಥ ಆಟಗಾರರನ್ನು ತಂಡದಿಂದಲೇ ಕೈಬಿಡಬೇಕಾಗುತ್ತದೆ," ಎಂದು ಸುನೀಲ್ ಗವಾಸ್ಕರ್ ನಿಷ್ಠುರವಾಗಿ ಹೇಳಿದ್ದಾರೆ.

"ಒಬ್ಬ ಆಟಗಾರನಾಗಿ ಅನಿಲ್ ಕುಂಬ್ಳೆ ಮಾಡಿರುವ ಸಾಧನೆಯನ್ನು ನೋಡಿರಿ. ಕಳೆದ ಒಂದು ವರ್ಷದಲ್ಲಿ ಅವರ ಅಡಿಯಲ್ಲಿ ಟೀಮ್ ಇಂಡಿಯಾ ಸಾಧಿಸಿರುವುದನ್ನು ಗಮನಿಸಿರಿ. ಇದು ಅದ್ಭುತ ಎನ್ನದೇ ಬೇರೆ ವಿಧಿಯಿಲ್ಲ," ಎಂದು ಗವಾಸ್ಕರ್ ಹೇಳಿದ್ದಾರೆ.

ದುರದೃಷ್ಟವಶಾತ್, ಈಗ ನಡೆದಿರುವ ಬೆಳವಣಿಗೆಯು ಬೇರೆಯೇ ಸೂಚನೆಯನ್ನು ನೀಡುತ್ತದೆ ಎಂದು ಗವಾಸ್ಕರ್ ಹೇಳುತ್ತಾರೆ. "ಆಟಗಾರರಿಗೆ ತಲೆಬಾಗುವಂತಹ, ಅವರು ಹೇಳಿದಂತೆ ಕೇಳುವ ಕೋಚ್ ಭಾರತಕ್ಕೆ ಬೇಕೆನ್ನುವ ಅರ್ಥ ಬರುತ್ತಿದೆ. ಇದು ಸರಿಯಲ್ಲ," ಎಂದು ಗವಾಸ್ಕರ್ ವಿಷಾದಿಸಿದ್ದಾರೆ.