ನ್ಯೂಯಾರ್ಕ್(ಆ.28): ಟೆನಿಸ್‌ ಮಾಂತ್ರಿಕ ಸ್ವಿಜರ್‌ಲೆಂಡ್‌ನ ರೋಜರ್‌ ಫೆಡ​ರರ್‌ ವಿರುದ್ಧ ಆಡುವ ಅವ​ಕಾಶ ಸಿಗು​ವುದೇ ದೊಡ್ಡ ವಿಷಯ. ಹೀಗಿ​ದ್ದಾಗ, ಫೆಡ​ರರ್‌ ವಿರುದ್ಧ ಯುಎಸ್‌ ಓಪನ್‌ ಗ್ರ್ಯಾಂಡ್‌ಸ್ಲಾಂ ಪಂದ್ಯ​ದಲ್ಲಿ ಕಣ​ಕ್ಕಿ​ಳಿದು ಮೊದಲ ಸೆಟ್‌ ಜಯಿ​ಸಿದ ಸಾಧನೆಯನ್ನು ಭಾರ​ತದ ಯುವ ಟೆನಿ​ಸಿಗ ಸುಮಿತ್‌ ನಗಾಲ್‌ ಮಾಡಿ​ದರು. ಮಂಗ​ಳ​ವಾ​ರ ಬೆಳಗ್ಗೆ ನಡೆದ ಪುರು​ಷರ ಸಿಂಗಲ್ಸ್‌ ಮೊದಲ ಸುತ್ತಿನ ಪಂದ್ಯ​ದಲ್ಲಿ ಸುಮಿತ್‌, 6-4, 1-6, 2-6, 4-6 ಸೆಟ್‌ಗಳಲ್ಲಿ ವೀರೋ​ಚಿತ ಸೋಲು ಕಂಡ​ರೂ, ಫೆಡ​ರರ್‌ರಿಂದ ಬೆನ್ನು ತಟ್ಟಿ​ಸಿ​ಕೊಂಡರು. ‘ಈ​ತ ವಿಶೇಷ ಪ್ರತಿಭೆ. ಅವರ ವೃತ್ತಿ​ಬ​ದುಕು ಉಜ್ವ​ಲ​ವಾ​ಗಿ​ರ​ಲಿದೆ ಎಂದು ಅನಿ​ಸು​ತ್ತಿದೆ’ ಎಂದು ಪಂದ್ಯದ ಬಳಿಕ ಫೆಡ​ರರ್‌ ಹೇಳಿ​ದರು.

ಇದನ್ನೂ ಓದಿ: ರೋಜರ್ ಫೆಡರರ್ ಬಗೆಗೆ ನಿಮಗೆ ಗೊತ್ತಿರದ 5 ಸಂಗತಿಗಳಿವು

ಮತ್ತೊಂದು ಮೊದಲ ಸುತ್ತಿನ ಪಂದ್ಯ​ದಲ್ಲಿ ಪ್ರಜ್ನೇಶ್‌ ಗುಣೇ​ಶ್ವ​ರನ್‌, ವಿಶ್ವ ನಂ.5 ರಷ್ಯಾದ ಡಾನಿಲ್‌ ಮೆಡ್ವೆ​ಡೆವ್‌ ವಿರುದ್ಧ 4-6, 1-6, 2-6 ಸೆಟ್‌ಗಳಲ್ಲಿ ಪರಾ​ಭ​ವ​ಗೊಂಡು ಹೊರ​ಬಿ​ದ್ದರು.

ಶರ​ಪೋ​ವಾಗೆ ಸೋಲು​: ಮಹಿಳಾ ಸಿಂಗಲ್ಸ್‌ನ ಮೊದಲ ಸುತ್ತಿ​ನಲ್ಲೇ ತಾರಾ ಆಟ​ಗಾ​ರ್ತಿ​ಯ​ರಾದ ಸೆರೆನಾ ವಿಲಿ​ಯಮ್ಸ್‌ ಹಾಗೂ ಮರಿಯಾ ಶರ​ಪೋವಾ ಮುಖಾ​ಮುಖಿ​ಯಾ​ಗಿ​ದ್ದರು. ಶರ​ಪೋವಾ ವಿರುದ್ಧ ಸೆರೆನಾ 6-1, 6-1ರ ಸುಲಭ ಗೆಲುವು ಸಾಧಿಸಿ 2ನೇ ಸುತ್ತಿ​ಗೇ​ರಿ​ದರು. ಪುರು​ಷರ ಸಿಂಗಲ್ಸ್‌ ಮೊದಲ ಸುತ್ತಿ​ನಲ್ಲಿ ವಿಶ್ವ ನಂ.1 ನೋವಾಕ್‌ ಜೋಕೋ​ವಿ​ಚ್‌ ಸಹ ಸುಲಭ ಜಯ ಪಡೆ​ದರು.