ಇಫೋ(ಮಲೇಷ್ಯಾ): ಮನ್‌ದೀಪ್‌ ಸಿಂಗ್‌ ಹ್ಯಾಟ್ರಿಕ್‌ ಗೋಲಿನ ನೆರವಿನಿಂದ ಕೆನಡಾ ವಿರುದ್ಧ 7-3 ಗೋಲುಗಳ ಭರ್ಜರಿ ಗೆಲುವು ಸಾಧಿಸಿದ ಭಾರತ, ಇಲ್ಲಿ ನಡೆಯುತ್ತಿರುವ ಅಜ್ಲಾನ್‌ ಶಾ ಹಾಕಿ ಟೂರ್ನಿಯ ಫೈನಲ್‌ ಪ್ರವೇಶಿಸಿದೆ. 

ಬುಧವಾರ ನಡೆದ ಪಂದ್ಯ ಭಾರತದ ಪಾಲಿಗೆ ನಿರ್ಣಾಯಕ ಎನಿಸಿತ್ತು. ಉತ್ತಮ ಗೋಲಿನ ಅಂತರದಲ್ಲಿ ಗೆಲುವು ಸಾಧಿಸಬೇಕಿದ್ದ ಭಾರತ, ಆರಂಭದಿಂದಲೂ ಆಕ್ರಮಣಕಾರಿ ಆಟವಾಡಿತು. ವರುಣ್‌ ಕುಮಾರ್‌ 12ನೇ ನಿಮಿಷದಲ್ಲಿ ಗೋಲು ಬಾರಿಸಿ ತಂಡಕ್ಕೆ ಮುನ್ನಡೆ ಒದಗಿಸಿದರು. 24 ವರ್ಷದ ಮನ್‌ದೀಪ್‌ (20, 27 ಹಾಗೂ 29ನೇ ನಿಮಿಷ) ಆಕರ್ಷಕ ಗೋಲುಗಳನ್ನು ಬಾರಿಸಿ ಮೊದಲಾರ್ಧದ ಮುಕ್ತಾಯಕ್ಕೆ ಭಾರತ 4-0 ಮುನ್ನಡೆ ಪಡೆಯಲು ನೆರವಾದರು.

ಹಾಕಿ: ಮಲೇಷ್ಯಾ ವಿರುದ್ಧ ಗೆದ್ದ ಭಾರತ

35ನೇ ನಿಮಿಷದಲ್ಲಿ ಮಾರ್ಕ್ ಪಿಯರ್ಸನ್‌ ಬಾರಿಸಿದ ಗೋಲಿನ ನೆರವಿನಿಂದ ಕೆನಡಾ ಖಾತೆ ತೆರೆಯಿತು. ಅಮಿತ್‌ ರೋಹಿದಾಸ್‌ (39ನೇ ನಿ.), ವಿವೇಕ್‌ ಪ್ರಸಾದ್‌ (55ನೇ ನಿ.) ಹಾಗೂ ನೀಲಕಂಠ ಶರ್ಮಾ (58ನೇ ನಿ.) ಭಾರತದ ಗೆಲುವಿನ ಅಂತರವನ್ನು ಹೆಚ್ಚಿಸಿದರು. ಕೆನಡಾ ಪರ ಇನ್ನೆರಡು ಗೋಲುಗಳನ್ನು ಫಿನ್‌ ಬೂಥ್ರಾಯ್ಡ್‌ (50ನೇ ನಿ.) ಹಾಗೂ ಜೇಮ್ಸ್‌ ವಾಲೆಸ್‌ (57ನೇ ನಿ.) ಗಳಿಸಿದರು. 

4 ಪಂದ್ಯಗಳಲ್ಲಿ ಅಜೇಯವಾಗಿ ಉಳಿದಿರುವ ಭಾರತ, 10 ಅಂಕ ಗಳಿಸಿ ಮಾ.30ರಂದು ನಡೆಯಲಿರುವ ಫೈನಲ್‌ನಲ್ಲಿ ಕೊರಿಯಾವನ್ನು ಎದುರಿಸಲಿದೆ. ಶುಕ್ರವಾರ ನಡೆಯಲಿರುವ ಲೀಗ್‌ ಹಂತದ ಅಂತಿಮ ಪಂದ್ಯದಲ್ಲಿ ಭಾರತ ತಂಡ ಪೋಲೆಂಡ್‌ ಸವಾಲನ್ನು ಸ್ವೀಕರಿಸಲಿದೆ.