Asianet Suvarna News Asianet Suvarna News

ಏಷ್ಯಾಕಪ್'ಗೆ ಭಾರತ ಲಗ್ಗೆ; ಇದು ಬೆಸ್ಟ್ ಟೀಮ್ ಎಂದ ಕೋಚ್

ಸುನೀಲ್ ಛೇಟ್ರಿ ನೇತೃತ್ವದ ಹಾಲಿ ಭಾರತ ಫುಟ್ಬಾಲ್ ತಂಡವನ್ನು ಕೋಚ್ ಸ್ಟೀಫನ್ ಕಾನ್'ಸ್ಟಂಟೈನ್ ಮನಸಾರೆ ಪ್ರಶಂಸಿಸಿದ್ದಾರೆ. ಭಾರತದ ಫುಟ್ಬಾಲ್ ಇತಿಹಾಸದಲ್ಲೇ ಇದು ಅತ್ಯುತ್ತಮ ತಂಡಗಳಲ್ಲೊಂದಾಗಿದೆ ಎಂದವರು ಅಭಿಪ್ರಾಯಪಟ್ಟಿದ್ದಾರೆ. ತರಬೇತಿಯಲ್ಲಾಗಲೀ, ಅಭ್ಯಾಸದಲ್ಲಾಗಲೀ ತಾವು ಏನೇ ಹೇಳಿದರೂ ಚಾಚೂ ತಪ್ಪದೇ ಆಟಗಾರರು ಪಾಲಿಸಿದ್ದಾರೆ.

stephen constantine says this is one of best indian teams as they beat macau to qualify for afc cup

ಬೆಂಗಳೂರು: 2011ರ ಬಳಿಕ ಮೊದಲ ಬಾರಿಗೆ ಭಾರತ ಫುಟ್ಬಾಲ್ ತಂಡ ಎಎಫ್'ಸಿ ಏಷ್ಯಾಕಪ್‌'ಗೆ ಅರ್ಹತೆ ಪಡೆದುಕೊಂಡಿದೆ. 2019 ರಲ್ಲಿ ಯುಎಇನಲ್ಲಿ ನಡೆಯಲಿರುವ ಏಷ್ಯಾಕಪ್'ನಲ್ಲಿ ತಂಡ ಕಣಕ್ಕಿಳಿಯಲಿದೆ. ಅರ್ಹತಾ ಸುತ್ತಿನ 4ನೇ ಪಂದ್ಯದಲ್ಲಿ ಭಾರತ 4-1 ಗೋಲುಗಳಿಂದ ಮಕಾವ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿತು. ಇಲ್ಲಿನ ಕಂಠೀರವ ಕ್ರೀಡಾಂಗಣದಲ್ಲಿ ನಿನ್ನೆ ರಾತ್ರಿ ನಡೆದ ಪಂದ್ಯದಲ್ಲಿ ಭಾರತ ಸರ್ವಾಂಗೀಣ ಆಟ ಪ್ರದರ್ಶಿಸಿತು. ‘ಎ’ ಗುಂಪಿನಲ್ಲಿರುವ ಭಾರತ ಈ ಪಂದ್ಯಕ್ಕೂ ಮುನ್ನ ಸತತ 3 ಪಂದ್ಯಗಳನ್ನು ಗೆದ್ದು ಅಜೇಯವಾಗಿ ಉಳಿದಿತ್ತು. ಈ ಗೆಲುವು ಏಷ್ಯಾಕಪ್‌'ಗೆ ಅರ್ಹತೆಯನ್ನು ಖಚಿತಪಡಿಸಿತು. ಅರ್ಹತಾ ಸುತ್ತಿ ನಲ್ಲಿ ಇನ್ನೂ 2 ಪಂದ್ಯ ಬಾಕಿ ಉಳಿದಿದ್ದು, ಭಾರತ ತನ್ನ ಬೆಂಚ್ ಬಲ ಹೆಚ್ಚಿಸಿಕೊಳ್ಳಲು ಅವಕಾಶ ಸಿಕ್ಕಂತಾಗಿದೆ.

ಗೋಲಿನ ಖಾತೆ ತೆರೆದ ರೌಲಿನ್: ಆರಂಭದಿಂದಲೂ ಆಕ್ರಮಣಕಾರಿ ಆಟಕ್ಕೆ ಮುಂದಾದ ಭಾರತಕ್ಕೆ 28ನೇ ನಿಮಿಷದಲ್ಲಿ ರೌಲಿನ್ ಬೋರಸ್ ಮೊದಲ ಗೋಲು ತಂದುಕೊಟ್ಟರು. ಆದರೆ 37ನೇ ನಿಮಿಷದಲ್ಲಿ ಮಕಾವ್ ಸಮಬಲ ಸಾಧಿಸಿತು. ಮೊದಲಾರ್ಧ ಮುಕ್ತಾಯಕ್ಕೆ ಉಭಯ ತಂಡಗಳು ತಲಾ ಒಂದು ಗೋಲು ಗಳಿಸಿದವು.

ದ್ವಿತೀಯಾರ್ಧದಲ್ಲಿ ಪ್ರಚಂಡ ಆಟ: ಪಂದ್ಯದ 2ನೇ ಅವಧಿಯಲ್ಲಿ ಭಾರತದ ವೇಗಕ್ಕೆ ಮಕಾವ್ ತಲೆಬಾಗಿತು. ಕೆಲ ಅವಕಾಶಗಳು ತಪ್ಪಿದ ಬಳಿಕ 60ನೇ ನಿಮಿಷದಲ್ಲಿ ನಾಯಕ ಸುನಿಲ್ ಚೆಟ್ರಿ ಭಾರತ ಪರ 2ನೇ ಗೋಲು ಬಾರಿಸಿದರು. ಇದರೊಂದಿಗೆ ಭಾರತ ಮತ್ತೊಮ್ಮೆ ಮುನ್ನಡೆ ಸಾಧಿಸಿತು. ಇಲ್ಲಿಂದಾಚೆಗೆ ಮಕಾವ್ ಪುಟಿದೇಳಲು ಭಾರತ ಅವಕಾಶ ನೀಡಲಿಲ್ಲ. ಭಾರತ ಸತತವಾಗಿ ಹೇರಿದ ಒತ್ತಡ, ಮಕಾವ್ ಸ್ವಂತ ಗೋಲು ಬಾರಿಸಲು ಕಾರಣವಾಯಿತು. 70ನೇ ನಿಮಿಷದಲ್ಲಿ ಆತಿಥೇಯರು 3-1ರ ಮುನ್ನಡೆ ಪಡೆದುಕೊಂಡರು. 90ನೇ ನಿಮಿಷದಲ್ಲಿ ಗೋಲು ಬಾರಿಸಿದ ಜೆಜೆ ಲಾಲ್ಪೆಕ್ಲುಹಾ ಭಾರತ 4-1ರ ಜಯ ಸಾಧಿಸಿ ಸಂಭ್ರಮಿಸಲು ಕಾರಣರಾದರು.

ಹೊಸ ಇತಿಹಾಸ:
ಫುಟ್ಬಾಲ್ ಇತಿಹಾಸದಲ್ಲಿ ಭಾರತವು ಏಷ್ಯಾ ಕಪ್ ಟೂರ್ನಿಯಲ್ಲಿ ನಾಲ್ಕನೇ ಬಾರಿ ಆಡಲಿದೆ. 1964ರಲ್ಲಿ ಮೊದಲ ಬಾರಿ ಆಡಿದ್ದ ಭಾರತ ಆಗ ರನ್ನರ್'ಅಪ್ ಆಗಿತ್ತು. ಆ ಬಳಿಕ 1984 ಮತ್ತು 2011 ರಲ್ಲಿ ಆಡಿತಾದರೂ ಗ್ರೂಪ್ ಹಂತದಿಂದಲೇ ನಿರ್ಗಮಿಸಿತ್ತು. ಆದರೆ, ಅರ್ಹತಾ ಟೂರ್ನಿ ಮೂಲಕವೇ ಏಷ್ಯಾಕಪ್'ಗೆ ಭಾರತ ಕ್ವಾಲಿಫೈ ಆಗಿದ್ದು ಇದೇ ಮೊದಲು. ಅಲ್ಲದೇ, ಇನ್ನೂ ಎರಡು ಲೀಗ್ ಪಂದ್ಯ ಬಾಕಿ ಇರುವಂತೆಯೇ ಅರ್ಹತೆ ಪಡೆದದ್ದೂ ಇದೇ ಮೊದಲ ಬಾರಿ. ಸತತ 4 ಪಂದ್ಯ ಗೆದ್ದಿರುವ ಭಾರತ ತಂಡಕ್ಕೆ ಕಿರ್ಗಿಸ್ತಾನ್ ಮತ್ತು ಮಯನ್ಮಾರ್ ವಿರುದ್ಧ ಪಂದ್ಯಗಳು ಬಾಕಿ ಇವೆ. ಅವೆರಡೂ ಪಂದ್ಯಗಳನ್ನ ಗೆದ್ದು ಟೂರ್ನಿಯಲ್ಲಿ ಅಜೇಯವಾಗಿ ಉಳಿಯುವುದು ಕೋಚ್ ಸ್ಟೀಫನ್ ಕಾನ್ಸ್'ಟಂಟೈನ್ ಗುರಿಯಾಗಿದೆ.

ಇದೆ ಬೆಸ್ಟ್ ಟೀಮ್:
ಸುನೀಲ್ ಛೇಟ್ರಿ ನೇತೃತ್ವದ ಹಾಲಿ ಭಾರತ ಫುಟ್ಬಾಲ್ ತಂಡವನ್ನು ಕೋಚ್ ಸ್ಟೀಫನ್ ಕಾನ್'ಸ್ಟಂಟೈನ್ ಮನಸಾರೆ ಪ್ರಶಂಸಿಸಿದ್ದಾರೆ. ಭಾರತದ ಫುಟ್ಬಾಲ್ ಇತಿಹಾಸದಲ್ಲೇ ಇದು ಅತ್ಯುತ್ತಮ ತಂಡಗಳಲ್ಲೊಂದಾಗಿದೆ ಎಂದವರು ಅಭಿಪ್ರಾಯಪಟ್ಟಿದ್ದಾರೆ. ತರಬೇತಿಯಲ್ಲಾಗಲೀ, ಅಭ್ಯಾಸದಲ್ಲಾಗಲೀ ತಾವು ಏನೇ ಹೇಳಿದರೂ ಚಾಚೂ ತಪ್ಪದೇ ಆಟಗಾರರು ಪಾಲಿಸಿದ್ದಾರೆ. ಈ ಯಶಸ್ಸಿಗೆ ಕೋಚಿಂಗ್ ಸ್ಟಾಫ್'ನ ಶ್ರಮ, ಫುಟ್ಬಾಲ್ ಕ್ಲಬ್'ಗಳ ಸಹಕಾರ ಪ್ರತಿಯೊಬ್ಬರೂ ಕಾರಣ. ಇದು ತಂಡಕ್ಕೆ ಸಿಕ್ಕಿದ ಯಶಸ್ಸು ಮಾತ್ರವಲ್ಲ, ಇಡೀ ದೇಶಕ್ಕೆ ಸಂದ ಕೀರ್ತಿ ಎಂದು ಕೋಚ್ ಸಂತಸ ವ್ಯಕ್ತಪಡಿಸಿದ್ದಾರೆ.

ರ್ಯಾಂಕಿಂಗ್'ನಲ್ಲಿ ಮೇಲೆ:
ಸ್ಟೀಫನ್ ಕೋಚಿಂಗ್ ಗರಡಿಯಲ್ಲಿ ಪಳಗುತ್ತಿರುವ ಭಾರತ ಫುಟ್ಬಾಲ್ ತಂಡ ವಿಶ್ವ ರ್ಯಾಂಕಿಂಗ್'ನಲ್ಲೂ ಟಾಪ್ 100 ಪಟ್ಟಿಗೆ ಲಗ್ಗೆ ಹಾಕಿತ್ತು. ಸದ್ಯ, ಪಟ್ಟಿಯಲ್ಲಿ 109ನೇ ಸ್ಥಾನದಲ್ಲಿರುವ ಭಾರತ ತಂಡವು ಮೆಕಾವೋ ಮೇಲಿನ ಗೆಲುವಿನಿಂದ 7 ಸ್ಥಾನ ಮೇಲೇರುವ ಸಾಧ್ಯತೆ ಇದೆ. ಟೂರ್ನಿಯ ಇನ್ನೂ ಎರಡು ಪಂದ್ಯಗಳನ್ನು ಗೆದ್ದರೆ ಮತ್ತೊಮ್ಮೆ ಟಾಪ್-100 ಪಟ್ಟಿಗೆ ಭಾರತ ಲಗ್ಗೆ ಹಾಕುವ ಅವಕಾಶವಿದೆ.

epaperkannadaprabha.com

Follow Us:
Download App:
  • android
  • ios