269 ರನ್‌'ಗಳಿಂದ ಮೊದಲ ಇನ್ನಿಂಗ್ಸ್ ಮುಂದುವರಿಸಿದ ದ.ಆಫ್ರಿಕಾ, 2ನೇ ದಿನದಾಟದಲ್ಲಿ ಕೇವಲ 66 ರನ್‌ಗಳಿಸುವಷ್ಟರಲ್ಲಿ ಉಳಿದ 4 ವಿಕೆಟ್‌ಗಳನ್ನು ಕಳೆದುಕೊಂಡಿತು.

ಸೆಂಚೂರಿಯನ್(ಜ.14): ನಾಯಕ ವಿರಾಟ್ ಕೊಹ್ಲಿ ಸಮಯೋಚಿತ ಅಜೇಯ ಅರ್ಧಶತಕದ ನೆರವಿನಿಂದ ಭಾರತ, ದಕ್ಷಿಣ ಆಫ್ರಿಕಾ ವಿರುದ್ಧದ 2ನೇ ಟೆಸ್ಟ್‌'ನ 2ನೇ ದಿನದಾಟದಂತ್ಯಕ್ಕೆ 5 ವಿಕೆಟ್ ನಷ್ಟಕ್ಕೆ 183 ರನ್‌'ಗಳಿಸಿದ್ದು, ಇನ್ನೂ 152 ರನ್‌'ಗಳ ಹಿನ್ನಡೆ ಅನುಭವಿಸಿದೆ.

ದಕ್ಷಿಣ ಆಫ್ರಿಕಾವನ್ನು 335 ರನ್'ಗಳಿಗೆ ಕಟ್ಟಿಹಾಕಿ ಮೊದಲ ಇನ್ನಿಂಗ್ಸ್ ಆರಂಭಿಸಿದ ಭಾರತ ತಂಡಕ್ಕೆ ಆಫ್ರಿಕಾದ ವೇಗಿಗಳು ಆರಂಭಿಕ ಆಘಾತ ನೀಡಿದರು. ಮೊದಲ ಪಂದ್ಯದಲ್ಲಿ ಕಳಪೆ ಪ್ರದರ್ಶನ ತೋರಿದ್ದ ಆರಂಭಿಕ ಶಿಖರ್ ಧವನ್ ಬದಲಿಗೆ ತಂಡದಲ್ಲಿ ಸ್ಥಾನ ಪಡೆದಿದ್ದ ಕರ್ನಾಟಕದ ಆಟಗಾರ ಕೆ.ಎಲ್. ರಾಹುಲ್ ಮೊದಲ ವಿಕೆಟ್ ರೂಪದಲ್ಲಿ ಪೆವಿಲಿಯನ್ ಸೇರಿದರು. ರಾಹುಲ್, ನಾಯಕ ಕೊಹ್ಲಿ ವಿಶ್ವಾಸವನ್ನು ಉಳಿಸಿಕೊಳ್ಳುವಲ್ಲಿ ವಿಫಲರಾದರು. ರಾಹುಲ್ (10) ರನ್‌ಗಳಿಸಿ ಮಾರ್ಕೆಲ್ ಬೌಲಿಂಗ್‌'ನಲ್ಲಿ ಅವರಿಗೆ ಕ್ಯಾಚ್ ನೀಡಿ ಔಟಾದರು. ನಂತರದ ಎಸೆತದಲ್ಲಿ ಚೇತೇಶ್ವರ್ ಪೂಜಾರ (೦) ಇಲ್ಲದ ರನ್ ಕದಿಯಲು ಹೋಗಿ ರನೌಟ್‌ಗೆ ಬಲಿಯಾದರು. ಭಾರತ ಕೇವಲ 28 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

ಈ ವೇಳೆ ಜತೆಯಾದ ಆರಂಭಿಕ ಮುರಳಿ ವಿಜಯ್ ಹಾಗೂ ನಾಯಕ ವಿರಾಟ್ ಕೊಹ್ಲಿ ತಂಡಕ್ಕೆ ಚೇತರಿಕೆ ನೀಡಿದರು. ಆಫ್ರಿಕಾ ಬೌಲರ್‌'ಗಳನ್ನು ದಿಟ್ಟವಾಗಿ ಎದುರಿಸಿದ ಈ ಜೋಡಿ 3ನೇ ವಿಕೆಟ್‌'ಗೆ 79 ರನ್‌'ಗಳ ಜತೆಯಾಟ ನಿರ್ವಹಿಸಿತು. ತಾಳ್ಮೆಯ ಬ್ಯಾಟಿಂಗ್ ಮಾಡಿದ ವಿಜಯ್ 126 ಎಸೆತಗಳಲ್ಲಿ 6 ಬೌಂಡರಿ ಸಹಿತ (46) ರನ್‌ಗಳಿಸಿದರು. ವಿಜಯ್ ಕೇವಲ 4 ರನ್‌'ಗಳಿಂದ ಟೆಸ್ಟ್‌'ನಲ್ಲಿ 16ನೇ ಅರ್ಧಶತಕದಿಂದ ವಂಚಿತರಾದರು. ಬಳಿಕ ಬಂದ ರೋಹಿತ್ ಶರ್ಮಾ (10), ಪಾರ್ಥೀವ್ ಪಟೇಲ್ (19) ರನ್‌'ಗಳಿಗೆ ಔಟ್ ಆಗಿ ನಿರಾಸೆ ಮೂಡಿಸಿದರು. ಕೊಹ್ಲಿ ಮತ್ತು ಹಾರ್ದಿಕ್ ಪಾಂಡ್ಯ 3ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಇದಕ್ಕೂ ಮುನ್ನ 269 ರನ್‌'ಗಳಿಂದ ಮೊದಲ ಇನ್ನಿಂಗ್ಸ್ ಮುಂದುವರಿಸಿದ ದ.ಆಫ್ರಿಕಾ, 2ನೇ ದಿನದಾಟದಲ್ಲಿ ಕೇವಲ 66 ರನ್‌ಗಳಿಸುವಷ್ಟರಲ್ಲಿ ಉಳಿದ 4 ವಿಕೆಟ್‌ಗಳನ್ನು ಕಳೆದುಕೊಂಡಿತು. ಇದರಲ್ಲಿ ವೇಗದ ಬೌಲರ್ ಇಶಾಂತ್ ಶರ್ಮಾ 2, ಮೊಹಮ್ಮದ್ ಶಮಿ ಮತ್ತು ಅಶ್ವಿನ್ ತಲಾ 1 ವಿಕೆಟ್ ಕಿತ್ತರು.

ಸಂಕ್ಷಿಪ್ತ ಸ್ಕೋರ್:

ದಕ್ಷಿಣ ಆಫ್ರಿಕಾ: 335/10

ಮಾರ್ಕ್'ರಮ್: 94

ಅಶ್ವಿನ್: 113/4

ಭಾರತ: 183/5

ವಿರಾಟ್ ಕೊಹ್ಲಿ: 85

(2ನೇ ದಿನದಂತ್ಯಕ್ಕೆ)