ಅಂತಿಮವಾಗಿ ಭಾರತ ತಂಡ 172 ರನ್'ಗಳಿಗೆ ಆಲ್'ಔಟ್ ಆಯಿತು. ಶ್ರೀಲಂಕಾ ಪರ ಲಕ್ಮಲ್ 26/4, ಗಮಗೆ 59/2, ಶಾನಕ 36/2 ಹಾಗೂ ಪರೇರಾ 19/2 ವಿಕೇಟ್ ಗಳಿಸಿ ಯಶಸ್ವಿ ಬೌಲರ್ ಎನಿಸಿದರು.

ಕೋಲ್ಕೊತ್ತಾ(ನ.18): ಭಾರತ ಹಾಗೂ ಶ್ರೀಲಂಕಾ ನಡುವೆ ಈಡನ್ ಗಾರ್ಡ್'ನ್'ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್'ನ ಮೂರನೆ ದಿನವಾದ ಇಂದು ಮಳೆರಾಯ ಬಿಡುವು ಕೊಟ್ಟಿದ್ದು ಲಂಕಾ ಪಡೆಗೆ ವರದಾನವಾಯಿತು.

ಎರಡನೆ ದಿನವಾದ ನಿನ್ನೆ ಮಳೆಯಿಂದಾಗಿ 32.5 ಓವರ್'ಗಳಲ್ಲಿ 74/5 ಗಳಿಸಿದ್ದ ಟೀಂ ಇಂಡಿಯಾ ಇಂದು 15 ನಿಮಿಷ ಮೊದಲೇ ಇನ್ನಿಂಗ್ಸ್ ಆರಂಭಿಸಿತು. ಆಟ ಆರಂಭಿಸಿ 5 ಓವರ್'ಗಳಲ್ಲೇ ಅರ್ಧ ಶತಕ ಗಳಿಸಿದ ಪೂಜಾರ ಗಮಗೆ ಬೌಲಿಂಗ್'ನಲ್ಲಿ ಬೋಲ್ಡ್ ಆದರು. ಕೀಪರ್ ಸಹಾ ಹಾಗೂ ರವೀಂದ್ರ ಜಡೇಜಾ 7ನೇ ವಿಕೇಟ್'ಗೆ 48 ರನ್ ಜೊತೆಯಾಟದಲ್ಲಿ ಕೆಲ ಹೊತ್ತು ಮಿಂಚಿದರೂ ಜಡೇಜಾ ಪೆರೇರಾಗೆ ಎಲ್'ಬಿ ಆಗುವುದರೊಂದಿಗೆ ಇಬ್ಬರ ಜೊತೆಯಾಟ ಕೊನೆಗೊಂಡಿತು.

ನಂತರ ಅದೇ ಓವರ್'ನಲ್ಲಿ ಸಹಾ ಕೂಡ ಪೆವಿಲಿಯನ್'ಗೆ ತೆರಳಿಸಿದರು. ವೇಗಿ ಶಮಿ ಸ್ವಲ್ಪ ಹೊತ್ತು ಮಿಂಚಿದರೆ ಭುವನೇಶ್ವರ್ ಕುಮಾರ್ ಹಾಗೂ ಉಮೇಶ್ ಯಾದವ್ ಬಹಳ ಕಾಲ ಕ್ರೀಸ್'ನಲ್ಲಿ ಉಳಿಯಲಿಲ್ಲ. ಅಂತಿಮವಾಗಿ ಭಾರತ ತಂಡ 172 ರನ್'ಗಳಿಗೆ ಆಲ್'ಔಟ್ ಆಯಿತು. ಶ್ರೀಲಂಕಾ ಪರ ಲಕ್ಮಲ್ 26/4, ಗಮಗೆ 59/2, ಶಾನಕ 36/2 ಹಾಗೂ ಪರೇರಾ 19/2 ವಿಕೇಟ್ ಗಳಿಸಿ ಯಶಸ್ವಿ ಬೌಲರ್ ಎನಿಸಿದರು.

ತಿರಿಮಾನ್ನೆ, ಮ್ಯಾಥ್ಯೂಸ್ ಅರ್ಧ ಶತಕ

ಮೊದಲ ಇನ್ನಿಂಗ್ಸ್ ಶುರು ಮಾಡಿದ ಶ್ರೀಲಂಕಾ ಪಡೆ 5 ಓವರ್'ನಲ್ಲಿಯೇ ಮೊದಲ ವಿಕೇಟ್ ಕಳೆದುಕೊಂಡಿತು. ಭುವನೇಶ್ವರ್ ಬೌಲಿಂಗ್'ನಲ್ಲಿ ಆರಂಭಿಕ ಆಟಗಾರ ಕರುಣಾರತ್ನೆ(8) ಎಲ್'ಬಿಡಬ್ಲ್ಯುಆದರು. ಮತ್ತೊಬ್ಬ ಆರಂಭಿಕ ಆಟಗಾರ ಸಮರವಿಕ್ರಮಾ ಕೂಡ ಭುವಿ ಬೌಲಿಂಗ್'ನಲ್ಲಿ ವಿಕೆಟ್ ಕೀಪರ್ ಸಹಾ'ಗೆ ಕ್ಯಾಚಿತ್ತು ಪೆವಿಲಿಯನ್'ಗೆ ತೆರಳಿದರು.

ಮೂರನೇ ವಿಕೆಟ್ ಜೊತೆಯಾಟ ಆರಂಭಿಸಿದ ತಿರಮಾನ್ನೆ(51) ಹಾಗೂ ಮ್ಯಾಥ್ಯೂಸ್(52) ಇಬ್ಬರು ಅರ್ಧ ಶತಕ ಬಾರಿಸಿ ಉಮೇಶ್ ಯಾದವ್'ಗೆ ಔಟ್ ಆದರು. ದಿನದಾಟದ ಕೊನೆಯಲ್ಲಿ ಚಂಡಿಮಾಲ್ (13) ಹಾಗೂ ದಿಕ್'ವೆಲ್ಲಾ(14) ಅಜೇಯರಾಗಿ ಆಡುತ್ತಿದ್ದರು. 45.4 ಓವರ್'ಗಳಲ್ಲಿ 4 ವಿಕೇಟ್ ನಷ್ಟಕ್ಕೆ 165 ರನ್ ಗಳಿಸಿದ ಶ್ರೀಲಂಕಾ ಇನ್ನಿಂಗ್ಸ್ ಮುನ್ನಡೆಗೆ ಕೇವಲ 7 ರನ್ ಅಷ್ಟೆ ಬಾಕಿಯಿದೆ. ಭಾರತದ ಪರ ಭುವಿ ಹಾಗೂ ಉಮೇಶ್ ಯಾದವ್ ತಲಾ 2 ವಿಕೇಟ್ ಪಡೆದರು.

ಸ್ಕೋರ್

ಭಾರತ 59.3 ಓವರ್'ಗಳಲ್ಲಿ 172

(ಪೂಜಾರಾ 52, ಸಾಹ 29, ಶಮಿ 24, ಲಕ್ಮಲ್ 26/4, ಶಾನಕ 36/2, ಪೆರೇರಾ 19/2, ಗಮಗೆ 59/2)

ಶ್ರೀಲಂಕಾ 45.4 ಓವರ್'ಗಳಲ್ಲಿ 165/4

(ಮ್ಯಾಥ್ಯೂಸ್ 52 ತಿರಿಮಾನ್ನೆ 51, ಬಿ. ಕುಮಾರ್ 49/2, ಉಮೆಶ್ ಯಾದವ್ 50/2)