4ನೇ ವಿಕೆಟ್‌ಗೆ ಕುಸಾಲ್ ಮೆಂಡಿಸ್ ಜತೆಯಾದ ಉಪುಲ್ ತರಂಗಾ ನಿಧಾನಗತಿಯ ಬ್ಯಾಟಿಂಗ್‌ನಿಂದ ತಂಡಕ್ಕೆ ನೆರವಾದರು.

ಬುಲವಾಯೊ(ನ.28): ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಸಂಘಟಿತ ಪ್ರದರ್ಶನ ತೋರಿದ ಶ್ರೀಲಂಕಾ ತಂಡ, ತ್ರಿಕೋನ ಏಕದಿನ ಸರಣಿಯ ಫೈನಲ್ ಪಂದ್ಯದಲ್ಲಿ ಜಿಂಬಾಬ್ವೆ ತಂಡದ ಎದುರು 6 ವಿಕೆಟ್‌ಗಳ ಗೆಲುವು ಸಾಧಿಸಿದೆ.

ಇಲ್ಲಿನ ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಜಿಂಬಾಬ್ವೆ 36.3 ಓವರ್‌ಗಳಲ್ಲಿ 160ರನ್‌'ಗಳಿಗೆ ಆಲೌಟ್ ಆಯಿತು. ನಂತರ ಬ್ಯಾಟಿಂಗ್ ಮಾಡಿದ ಶ್ರೀಲಂಕಾ 37.3 ಓವರ್‌'ಗಳಲ್ಲಿ 4ವಿಕೆಟ್‌ಗೆ 166ರನ್‌'ಗಳಿಸಿ ಜಯ ಪಡೆಯಿತು.

ಸಾಧಾರಣ ಗುರಿ ಬೆನ್ನಟ್ಟಿದ ಶ್ರೀಲಂಕಾ ತಂಡಕ್ಕೆ ಆರಂಭದಲ್ಲಿ ಬ್ರಿಯಾನ್ ವೆಟ್ಟೋರಿ ಶಾಕ್ ನೀಡಿದರು. ಲಂಕಾ ತಂಡ 42ರನ್‌'ಗಳಿಸುವಷ್ಟರಲ್ಲಿ ಅಗ್ರ ಕ್ರಮಾಂಕದ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ನಂತರ 4ನೇ ವಿಕೆಟ್‌ಗೆ ಕುಸಾಲ್ ಮೆಂಡಿಸ್ ಜತೆಯಾದ ಉಪುಲ್ ತರಂಗಾ ನಿಧಾನಗತಿಯ ಬ್ಯಾಟಿಂಗ್‌ನಿಂದ ತಂಡಕ್ಕೆ ನೆರವಾದರು. ಈ ಜೋಡಿ 75 ರನ್‌ಗಳ ಜತೆಯಾಟ ನಿರ್ವಹಿಸಿ ತಂಡವನ್ನು ಜಯದ ಸನಿಹಕ್ಕೆ ತಂದಿತು. ಈ ವೇಳೆ ಕುಸಾಲ್ (57) ದೊಡ್ಡ ಹೊಡೆತಕ್ಕೆ ಕೈ ಹಾಕಿ ಕ್ರೀಮರ್ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿದರು. ಮುರಿಯದ 5 ವಿಕೆಟ್‌ಗೆ ಉಪುಲ್ ತರಂಗಾ (57) ಮತ್ತು ಅಸೆಲಾ ಗುಣರತ್ನೆ (16)ರನ್‌ಗಳಿಸಿ ಗೆಲುವು ತಂದುಕೊಟ್ಟರು. ಜಿಂಬಾಬ್ವೆ ಪರ ಬ್ರಿಯಾನ್ 3, ಕ್ರೀಮರ್ 1 ವಿಕೆಟ್ ಪಡೆದರು.

ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ಜಿಂಬಾಬ್ವೆ ಕೂಡ ಉತ್ತಮ ಆರಂಭ ಪಡೆಯಲಿಲ್ಲ. ಮಧ್ಯಮ ಕ್ರಮಾಂಕದಲ್ಲಿ ಮುಸಕಂಡಾ (36), ಇರ್ವೀನ್ (25), ಸೀನ್ ವಿಲಿಯಮ್ಸ್ (35) ರನ್‌'ಗಳಿಸಿದ್ದು ಹೊರತುಪಡಿಸಿದರೆ, ಇನ್ನುಳಿದ ಬ್ಯಾಟ್ಸ್‌ಮನ್‌ಗಳು ನಿರೀಕ್ಷಿತ ಮಟ್ಟದ ಬ್ಯಾಟಿಂಗ್ ಪ್ರದರ್ಶಿಸುವಲ್ಲಿ ವಿಫಲರಾದರು. ಅಂತಿಮವಾಗಿ ಕೇವಲ 160ರನ್‌'ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು. ಶ್ರೀಲಂಕಾ ಪರ ಗುಣರತ್ನೆ, ವಾಂಡರ್ಸೆ ತಲಾ 3, ಸಚಿತಾ ಪತ್ರಿನಾ 2 ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರ್

ಜಿಂಬಾಬ್ವೆ 36.3 ಓವರ್‌ಗಳಲ್ಲಿ 160

(ಮುಸಕಂಡಾ 36, ವಿಲಿಯಮ್ಸ್ 35, ಅಸೆಲಾ ಗುಣರತ್ನೆ 10ಕ್ಕೆ3)

ಶ್ರೀಲಂಕಾ 37.3 ಓವರ್‌ಗಳಲ್ಲಿ 4 ವಿಕೆಟ್‌ಗೆ 166

(ಕುಸಾಲ್ 57, ಉಪುಲ್ 57, ಬ್ರಿಯಾನ್ 52ಕ್ಕೆ3)