ಅವಮಾನದ ಸಂಗತಿ, ಫೋಟೋ ಸಲುವಾಗಿ ಸುನೀಲ್ ಛೇಟ್ರಿಯನ್ನೇ ತಳ್ಳಿದ ಪಶ್ಚಿಮ ಬಂಗಾಳ ರಾಜ್ಯಪಾಲ!
ಪಶ್ಚಿಮ ಬಂಗಾಳದ ಗವರ್ನರ್ ಲಾ. ಗಣೇಶನ್ ಅಯ್ಯರ್ ಅವರು ಪಂದ್ಯದ ನಂತರ ಟ್ರೋಫಿ ಪ್ರದಾನ ಸಮಾರಂಭದ ವೇಳೆ, ಫೋಟೋ ಚೆನ್ನಾಗಿ ಬರಬೇಕು ಎನ್ನುವ ಕಾರಣಕ್ಕೆ ವಿಜೇತ ತಂಡದ ನಾಯಕ ಹಾಗೂ ಭಾರತದ ಸ್ಟಾರ್ ಫುಟ್‌ಬಾಲ್ ಆಟಗಾರ ಸುನೀಲ್ ಛೇಟ್ರಿಯವರನ್ನು ತಳ್ಳಿದ ಘಟನೆ ನಡೆದಿದೆ. ಈ ವಿಡಿಯೋ ವೈರಲ್ ಆದ ಬಳಿಕ, ಪಶ್ಚಿಮ ಬಂಗಾಳ ರಾಜ್ಯಪಾಲರ ವಿರುದ್ಧ ಕ್ರೀಡಾಭಿಮಾನಿಗಳು ಆಕ್ರೋಶ ವ್ಯಕ್ತಪಡಸಿದ್ದಾರೆ.
ಕೋಲ್ಕತ್ತಾ (ಸೆ. 19): ಬೆಂಗಳೂರು ಎಫ್‌ಸಿ ತಂಡ ಭಾನುವಾರ ಕೋಲ್ಕತ್ತಾದ ವಿವೇಕಾನಂದ ಯುವ ಭಾರತಿ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಮುಂಬೈ ಸಿಟಿ ಎಫ್‌ಸಿಯನ್ನು 2-1 ಗೋಲುಗಳಿಂದ ಸೋಲಿಸಿ 2022ರ ಸಾಲಿನ ಡುರಾಂಡ್ ಕಪ್ ಪ್ರಶಸ್ತಿಯನ್ನು ಜಯಿಸಿ ಇತಿಹಾಸ ನಿರ್ಮಿಸಿತು. ಬೆಂಗಳೂರು ಎಫ್‌ಸಿ ತಮ್ಮ ಇತಿಹಾಸದಲ್ಲಿ ಮೊದಲ ಬಾರಿಗೆ ಡುರಾಂಡ್ ಕಪ್, ಶಿಮ್ಲಾ ಟ್ರೋಫಿ ಮತ್ತು ಪ್ರೆಸಿಡೆಂಟ್ಸ್ ಕಪ್ ಅನ್ನು ಗೆದ್ದುಕೊಂಡಿದ್ದರಿಂದ ಬಿಎಫ್‌ಸಿ ಪಾಲಿಗೆ ಸ್ಮರಣೀಯ ರಾತ್ರಿ ಎನಿಸಿತ್ತು. ಬೆಂಗಳೂರು ಕ್ಲಬ್ ಇತ್ತೀಚಿನ ದಿನಗಳಲ್ಲಿ ಐ-ಲೀಗ್ (2014 ಮತ್ತು 2016), ಫೆಡರೇಶನ್ ಕಪ್ (2015 ಮತ್ತು 2017), ಸೂಪರ್ ಕಪ್ (2018) ಮತ್ತು ಇಂಡಿಯನ್ ಸೂಪರ್ ಲೀಗ್ (2019) ನಲ್ಲಿ ಪ್ರಶಸ್ತಿ ಜಯಗಳಿಸುವ ಮೂಲಕ ಭಾರತೀಯ ದೇಶೀಯ ಸ್ಪರ್ಧೆಗಳಲ್ಲಿ ಉತ್ತಮ ಪ್ರದರ್ಶನ ನೀಡಿದೆ. ಡುರಾಂಡ್ ಕಪ್ ಗೆದ್ದ ಬಳಿಕ ಬೆಂಗಳೂರು ಎಫ್ ಸಿ ತಂಡದ ನಾಯಕ ಸುನೀಲ್ ಛೇಟ್ರಿ ಪದಕ ವೇದಿಕೆ ಏರಿದ್ದರು. ಈ ವೇಳೆ ಅವರಿಗೆ ಟೂರ್ನಿಯ ಪ್ರಾಯೋಜಕರು ಟ್ರೋಫಿಯನ್ನು ಹಸ್ತಾಂತರ ಮಾಡಿದರು. ಈ ಹಂತದಲ್ಲಿ ಟ್ರೋಫಿಗೆ ಕೈ ಹಿಡಿದು ನಿಂತಿದ್ದ ಪಶ್ಚಿಮ ಬಂಗಾಳದ ಗವರ್ನರ್ ಲಾ.ಗಣೇಶನ್ ಅಯ್ಯರ್ ಎದುರುಗಡೆಯಿದ್ದ ಫೋಟೋಗ್ರಾಫರ್‌ಗಳಿಗೆ ತಾವು ಸರಿಯಾಗಿ ಕಾಣುತ್ತಿಲ್ಲ ಎಂದನಿಸಿದೆ. ಅದಕ್ಕಾಗಿ ಸ್ವತಃ ಸುನೀಲ್ ಛೇಟ್ರಿಯನ್ನೇ ಸ್ವಲ್ಪ ಹಿಂದಕ್ಕೆ ಸರಿಸಿದಿ ಘಟನೆ ನಡೆದಿದೆ. ಈ ಘಟನೆಯನ್ನು ಯಾರೋ ವಿಡಿಯೋ ಮಾಡಿದ್ದು, ಕ್ರೀಡೆಗೆ ಇದೊಂದು ಅವಮಾನದ ಸಂಗತಿ ಎಂದು ಪೋಸ್ಟ್ ಮಾಡಿದ್ದಾರೆ. ಇದರ ಬೆನ್ನಲ್ಲಿಯೇ ಹಾಲಿ ಹಾಗೂ ಮಾಜಿ ಕ್ರೀಡಾಪಟುಗಳು ಪಶ್ಚಿಮ ಬಂಗಾಳ ಗವರ್ನರ್ ಅವರ ವರ್ತನೆಯನ್ನು ಟೀಕಿಸಿದ್ದಾರೆ.
ಸಮಾರಂಭದಲ್ಲಿ ಗಣೇಶನ್ ಉಪಸ್ಥಿತರಿದ್ದು, ಛೇಟ್ರಿ ಟ್ರೋಫಿಯನ್ನು ಸ್ವೀಕರಿಸಿದಾಗ ಹಿಂದೆ ನಿಂತಿದ್ದರು, ಟ್ರೋಫಿಯನ್ನು ಸ್ವೀಕರಿಸಿದ ನಂತರ ಭಾರತೀಯ ಫುಟ್‌ಬಾಲ್ ದಂತಕಥೆಗಳು ಕ್ಯಾಮೆರಾಗಳಿಗೆ ಪೋಸ್ ನೀಡಿದರು. ಈ ವೇಳೆ ಗಣೇಶನ್, ಛೇಟ್ರಿಯವರನ್ನು ಪಕ್ಕಕ್ಕೆ ಸರಿಸಿದ್ದಾರೆ. ರಾಜ್ಯಪಾಲರ ಈ ಕೃತ್ಯಕ್ಕೆ ಟ್ವಿಟರ್‌ನಲ್ಲಿ ಕ್ರೀಡಾಪಟುಗಳು ಮತ್ತು ಅಭಿಮಾನಿಗಳಿಂದ ದೊಡ್ಡ ಮಟ್ಟದ ಟೀಕೆ ಎದುರಿಸಿದರು.
Durand Cup 2022: ಚೊಚ್ಚಲ ಬಾರಿಗೆ ಫೈನಲ್ ಪ್ರವೇಶಿಸಿ ಇತಿಹಾಸ ಬರೆದ ಬಿಎಫ್‌ಸಿ
ಟೀಮ್ ಇಂಡಿಯಾ ಮಾಜಿ ಬ್ಯಾಟ್ಸ್‌ಮನ್ ರಾಬಿನ್ ಉತ್ತಪ್ಪ ಕೂ ಈ ಘಟನೆಯನ್ನು ಟೀಕಿಸಿದ್ದು, “ಅದು ಎಲ್ಲಾ ರೀತಿಯ ತಪ್ಪು!! ಕ್ಷಮಿಸಿ @chetrisunil11 ನೀವು ಇದಕ್ಕಿಂತ ಎಷ್ಟೋ ಉತ್ತಮಕ್ಕೆ ಅರ್ಹರು!!" ಎಂದು ಬರೆದಿದ್ದಾರೆ. ಟೀಮ್ ಇಂಡಿಯಾದ ಮತ್ತೊಬ್ಬ ಬ್ಯಾಟ್ಸ್‌ಮನ್ ಆಕಾಶ್ ಚೋಪ್ರಾ ಕೂಡ ಘಟನೆಯನ್ನು ಖಂಡಿಸಿದ್ದು ಇದನ್ನು "ಅವಮಾನಕರ" ಎಂದು ಬರೆದಿದ್ದಾರೆ.
ಐದು ಸೆಕೆಂಡ್‌ಗಳಲ್ಲಿ ಭಾರತೀಯ ಕ್ರೀಡೆಯಲ್ಲಿ ತಪ್ಪಾಗಿರುವ ಎಲ್ಲವನ್ನೂ ತೋರಿಸುತ್ತವೆ. ಬಹುಶಃ ಸುನೀಲ್ ಛೇಟ್ರಿಯಾಗಲಿ, ಬೆಂಗಳೂರು ಎಫ್‌ಸಿಯಾಗಲಿ ಡುರಾಂಡ್ ಕಪ್ ಗೆದ್ದಿದ್ದಲ್ಲ, ಈ ರಾಜಕಾರಣಿಗಳೆ ಗೆದ್ದಿರುವ ರೀತಿ ಕಾಣುತ್ತಿದೆ ಎಂದು ಕ್ರೀಡಾಪತ್ರಕರ್ತ ಜಾಯ್ ಭಟ್ಟಾಚಾರ್ಯ (@joybhattacharj) ಬರೆದಿದ್ದಾರೆ.
ಕಪ್ ನಮ್ದೆ: ಗೋವಾ ಮಣಿಸಿ ISL ಪ್ರಶಸ್ತಿ ಗೆದ್ದ ಬೆಂಗಳೂರು FC!
ಇನ್ನು ಇದೇ ರೀತಿಯ ಘಟನೆ ಶಿವ ಶಕ್ತಿ ನಾರಾಯಣ್ ವಿರುದ್ಧವೂ ನಡೆದಿತ್ತು. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರೆಸಿಡೆಂಟ್ಸ್ ಕಪ್ ಸ್ವೀಕರಿಸುವ ವೇಳೆ, ಪಶ್ಚಿಮ ಬಂಗಾಳದ ಕ್ರೀಡಾ ಸಚಿವ ಅರೂಪ್ ಬಿಸ್ವಾಸ್ ಅವರನ್ನು ಪಕ್ಕ ತಳ್ಳಿದ್ದ ಘಟನೆ ನಡೆದಿತ್ತು. ಶಿವ ಶಕ್ತಿ ಮತ್ತು ಬ್ರೆಜಿಲಿಯನ್ ಅಲನ್ ಕೋಸ್ಟಾ ಬೆಂಗಳೂರು ಎಫ್‌ಸಿ (ಬಿಎಫ್‌ಸಿ) ವಿಜೇತ ತಂಡದ ಪರವಾಗಿ ಗೋಲು ಗಳಿಸಿದರೆ, ಅಪುಯಾ ಮುಂಬೈ ಸಿಟಿ ಎಫ್‌ಸಿ (ಎಂಸಿಎಫ್‌ಸಿ) ಪರ ಏಕೈಕ ಗೋಲು ಬಾರಿಸಿದರು. ಪಂದ್ಯದಲ್ಲಿ ಸುನೀಲ್ ಛೇಟ್ರಿಗೂ ಗೋಲು ಬಾರಿಸುವ ಹಲವು ಅವಕಾಶಗಳಿದ್ದವು. 69ನೇ ನಿಮಿಷದಲ್ಲಿ ಸುನೀಲ್ ಛೇಟ್ರಿ ಎಡಗಾಲಿನಿಂದ ಒದ್ದ ಚೆಂಡು ಗೋಲು ಪೆಟ್ಟಿಗೆ ಸೇರಲು ವಿಫಲವಾದರೆ, 87ನೇ ನಿಮಿಷದಲ್ಲಿ ಅವರು ಬಾರಿಸಿದ ಚೆಂಡು ನೇರವಾಗಿ ಗೋಲ್‌ಕೀಪರ್ ಬಳಿ ಸೇರಿತು.