ದೆಹಲಿ(ಸೆ. 18): ಡೇವಿಸ್ ಕಪ್ ವರ್ಲ್ಡ್ ಗ್ರೂಪ್ ಪ್ಲೇ ಆಫ್ ಪಂದ್ಯದಲ್ಲಿ ಸ್ಪೇನ್ ವಿರುದ್ಧ ಭಾರತ ವೈಟ್ ವಾಶ್ ಆಗಿದೆ. ಇಂದು ನಡೆದ ಎರಡೂ ರಿವರ್ಸ್ ಸಿಂಗಲ್ಸ್ ಪಂದ್ಯಗಳನ್ನು ಭಾರತ ಸೋತಿದೆ. ಮೊದಲ ರಿವರ್ಸ್ ಪಂದ್ಯದಲ್ಲಿ ಸುಮಿತ್ ನಗಾಲ್ ಅವರು ಮಾರ್ಕ್ ಲೋಪೆಜ್ ಎದುರು 3-6, 6-1, 3-6ರಿಂದ ವೀರೋಚಿತ ಸೋಲನುಭವಿಸಿದರು. ಎರಡನೇ ರಿವರ್ಸ್ ಸಿಂಗಲ್ಸ್'ನಲ್ಲಿ ಡೇವಿಡ್ ಫೆರೆರ್ ವಿರುದ್ಧ ರಾಮಕುಮಾರ್ ರಾಮನಾಥನ್ 2-6, 2-6 ನೇರ ಸೆಟ್'ಗಳಿಂದ ಪರಾಭವಗೊಂಡರು. ಎರಡೂ ಆಟಗಳಲ್ಲಿ ಭಾರತೀಯರು ಗೆಲ್ಲುವ ನಿರೀಕ್ಷೆ ಯಾವುದೂ ಇರಲಿಲ್ಲ.

ಆದರೆ, ಭಾರತಕ್ಕೆ ಸಮಾಧಾನ ತಂದ ವಿಷಯವೆಂದರೆ ಸುಮೀತ್ ನಗಾಲ್ ಅವರ ಆಟ. ಮೊದಲ ಸೆಟನ್ನು ಸೋತರೂ ಎರಡನೇ ಸೆಟ್'ನಲ್ಲಿ ತಿರುಗಿ ಬಿದ್ದ ನಗಾಲ್ 6-1ರಿಂದ ಜಯಿಸಿದರು. ಅಷ್ಟು ಮಾತ್ರವಲ್ಲ, ನಿರ್ಣಾಯಕ ಮೂರನೇ ಸೆಟ್'ನ ಮೊದಲ 3 ಗೇಮ್ ಕೂಡ ನಗಾಲ್ ಪಾಲಾದವು. ಸುಮೀತ್ ನಗಾಲ್ ಇನ್ನೇನು ಗೆಲುವು ಖಾತ್ರಿ ಮಾಡಿಕೊಂಡರು ಎನ್ನುವಷ್ಟರಲ್ಲಿ ಮಾರ್ಕ್ ಲೋಪೆಜ್ ತಮ್ಮ ಆಟದ ಮಟ್ಟವನ್ನು ಹೆಚ್ಚಿಸಿಕೊಂಡು ತಿರುಗಿಬಿದ್ದರು. ಸತತ 6 ಗೇಮ್'ಗಳನ್ನು ಗೆದ್ದು ಸುಮೀತ್ ಅವರ ಐತಿಹಾಸಿಕ ಗೆಲವಿನ ಆಸೆಗೆ ತಣ್ಣೀರೆರಚಿದರು.

ಸ್ಪೇನ್ ಟೆನಿಸ್ ತಂಡ ಭಾರತ ವಿರುದ್ಧದ ಈ ಗೆಲುವಿನೊಂದಿಗೆ ಮತ್ತೆ ವಿಶ್ವ ಗುಂಪಿಗೆ ಎಂಟ್ರಿ ಪಡೆದಿದೆ. ಇತ್ತ ವರ್ಲ್ಡ್ ಗ್ರೂಪ್ ಪ್ರವೇಶಿಸುವ ಭಾರತದ ಆಸೆ ಕೈಗೂಡಲಿಲ್ಲ. ಭಾರತವಿನ್ನು ಏಷ್ಯಾ/ಓಷಾನಿಯಾ ಗುಂಪಿನ ಮೂಲಕ ಮತ್ತೊಮ್ಮೆ ವಿಶ್ವಗುಂಪಿಗೆ ಅರ್ಹತೆ ಪಡೆಯಲು ಪ್ರಯತ್ನಿಸಬೇಕಿದೆ.

(ಫೋಟೋ: ಸುಮೀತ್ ನಗಾಲ್ ಅವರದ್ದು)