ಕೇಪ್’ಟೌನ್[ಏ.19]: ಬ್ರೈನ್ ಟ್ಯೂಮರ್[ಕ್ಯಾನ್ಸರ್]ನಿಂದ ಬಳಲುತ್ತಿದ್ದ ದಕ್ಷಿಣ ಆಫ್ರಿಕಾ ಮೂಲದ ಸ್ಕಾಟ್’ಲ್ಯಾಂಡ್ ಕ್ರಿಕೆಟಿಗ ಕಾನ್ ಡೇ ವೆಟ್ ಡೇ ಲಾಂಗೇ ತಮ್ಮ 38ನೇ ವಯಸ್ಸಿಗೆ ಕೊನೆಯುಸಿರೆಳೆದಿದ್ದಾರೆ. ಆಲ್ರೌಂಡರ್ ನಿಧನಕ್ಕೆ ದಕ್ಷಿಣ ಆಫ್ರಿಕಾ ತಂಡದ ನಾಯಕ ಫಾಫ್ ಡು ಪ್ಲೆಸಿಸ್ ಸೇರಿದಂತೆ ಕ್ರಿಕೆಟ್ ಜಗತ್ತು ಕಣ್ಣೀರಿಟ್ಟಿದೆ. ದಕ್ಷಿಣ ಆಫ್ರಿಕಾದ ಕೇಪ್ ಪ್ರಾವಿನೆನ್ಸ್’ನ ಬೆಲ್’ವಿಲ್ಲೇನಲ್ಲಿ ಜನಿಸಿದ ಕಾನ್ ಡೇ ವೆಟ್ ಡೇ ಲಾಂಗೇ 2015-17ರವರೆಗೆ ಸ್ಕಾಟ್’ಲ್ಯಾಂಡ್ ತಂಡವನ್ನು ಪ್ರತಿನಿಧಿಸಿದ್ದರು. 

ಕಳೆದೊಂದು ವರ್ಷದಿಂದಲೂ ಕ್ಯಾನ್ಸರ್’ನೊಂದಿಗೆ ಸೆಣೆಸುತ್ತಿದ್ದ ಕಾನ್ ಡೇ ವೆಟ್ ಡೇ ಲಾಂಗೇ ಗುರುವಾರ ಕೊನೆಯುಸಿರೆಳೆದಿದ್ದಾರೆ. ಸ್ಕಾಟ್’ಲ್ಯಾಂಡ್ ಪರ 21 ಅಂತರಾಷ್ಟ್ರೀಯ ಪಂದ್ಯವನ್ನಾಡಿದ್ದ ಕಾನ್ ಡೇ ವೆಟ್ ಡೇ ಲಾಂಗೇ 2017ರ ನವೆಂಬರ್’ನಲ್ಲಿ ಕಡೆಯ ಅಂತರಾಷ್ಟ್ರೀಯ ಪಂದ್ಯವನ್ನಾಡಿದ್ದರು. 2017ರ ಜನವರಿಯಲ್ಲಿ ಯುಎಇ ವಿರುದ್ಧ ನಡೆದ ಟಿ20 ಸರಣಿಗೆ ಉಪನಾಯಕನಾಗಿಯೂ ಆಯ್ಕೆಯಾಗಿದ್ದರು. ಎಡಗೈ ಸ್ಪಿನ್ನರ್ ಕಾನ್ ಡೇ ವೆಟ್ ಡೇ ಲಾಂಗೇ ಪ್ರಥಮ ದರ್ಜೆ ಕ್ರಿಕೆಟ್ ವೃತ್ತಿ ಜೀವನದಲ್ಲಿ 183 ವಿಕೆಟ್ ಕಬಳಿಸಿದ್ದರು. ಇನ್ನು ಬ್ಯಾಟಿಂಗ್’ನಲ್ಲಿ 4500ಕ್ಕೂ ಅಧಿಕ ರನ್ ಬಾರಿಸಿದ್ದರು.

ಕಾನ್ ಡೇ ವೆಟ್ ಡೇ ಲಾಂಗೇ ನಿಧನಕ್ಕೆ ಫಾಫ್ ಡು ಪ್ಲೆಸಿಸ್, ಆ್ಯಂಡ್ರೂ ಹಾಲ್, ಡೇವಿಡ್ ವಿಲ್ಲೀ ಸೇರಿದಂತೆ ಹಲವು ಅಂತರಾಷ್ಟ್ರೀಯ ಕ್ರಿಕೆಟಿಗರು ಕಂಬನಿ ಮಿಡಿದಿದ್ದಾರೆ.