ನವದೆಹಲಿ(ಅ.03): ಕ್ರಿಕೆಟ್’ಗೆ ವಿದಾಯ ಹೇಳಿ ಟ್ವಿಟ್ಟರ್’ನಲ್ಲಿ ಸಾಕಷ್ಟು ಗಮನ ಸೆಳೆಯುತ್ತಿರುವ ವಿರೇಂದ್ರ ಸೆಹ್ವಾಗ್, ಕೋಲ್ಕತಾ ಟೆಸ್ಟ್’ನಲ್ಲಿ ವೀಕ್ಷಕ ವಿವರಣೆ ನೀಡುವಾಗ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

ಭಾರತ ಹಾಗೂ ನ್ಯೂಜಿಲ್ಯಾಂಡ್ ನಡುವಿನ ಎರಡನೇ ಟೆಸ್ಟ್’ನ ನಾಲ್ಕನೇ ದಿನ ದೀಪ್’ದಾಸ್ ಗುಪ್ತಾ ಹಾಗೂ ಸೆಹ್ವಾಗ್ ವೀಕ್ಷಕ ವಿವರಣೆ ನೀಡುತ್ತಿದ್ದರು. ಈ ವೇಳೆ ಗುಪ್ತಾ ಸೆಹ್ವಾಗ್’ಗೆ ನಿಮ್ಮ ನೆಚ್ಚಿನ ನಾಯಕ ಯಾರು ಎಂದು ಕೇಳಿದರು. ಇದಕ್ಕೆ ಯಾವುದೇ ಮುಚ್ಚುಮರೆಯಿಲ್ಲದೆ ಉತ್ತರಿಸಿದ ದೆಹಲಿ ಬ್ಯಾಟ್ಸ್’ಮನ್ ಸೌರವ್ ಗಂಗೂಲಿ ಹಾಗೂ ಅನಿಲ್ ಕುಂಬ್ಳೆ ನನ್ನ ನೆಚ್ಚಿನ ನಾಯಕರು ಎಂದು ಹೇಳಿದ್ದಾರೆ.

ಗಂಗೂಲಿ ನಾಯಕರಾಗಿರುವವರೆಗೂ ಸದಾ ನನ್ನ ಬೆಂಬಲಕ್ಕೆ ನಿಂತಿದ್ದರು. ಇನ್ನು ನಾನು ತಂಡದಿಂದ ಹೊರಬಿದ್ದಾಗ ಕುಂಬ್ಳೆ ಕೂಡ ನನ್ನ ಪರ ಬೆಂಬಲಿಸುತ್ತಿದ್ದರು. ಇವರಿಬ್ಬರು ನನ್ನ ಪಾಲಿನ ನೆಚ್ಚಿನ ನಾಯಕರು ಎಂದು ಸೆಹ್ವಾಗ್ ಹೇಳಿದ್ದಾರೆ.

ಧೋನಿ ಐಸಿಸಿ ಟ್ರೋಫಿಗಳನ್ನು ಗೆದ್ದುಕೊಟ್ಟಿದ್ದರೂ, ಸೌರವ್ ಗಂಗೂಲಿ ತಂಡದ ಆಟಗಾರರಿಗೆ ಸದಾ ಹುರಿದುಂಬಿಸುತ್ತಿದ್ದ ಅವರ ನಾಯಕತ್ವ ಗುಣವೇ ಅವರನ್ನು ಭಾರತದ ಶ್ರೇಷ್ಟ ನಾಯಕನನ್ನಾಗಿ ಬೆಳೆಯಲು ಸಹಕಾರಿಯಾಗಿದೆ ಎಂದು ಸೆಹ್ವಾಗ್ ಅಭಿಪ್ರಾಯಪಟ್ಟಿದ್ದಾರೆ.