ಈ ಹಿಂದೆ ನಡೆದಿದ್ದ ಬೆಲ್ಜಿಯಂ ಮತ್ತು ಪೋಲೆಂಡ್ ಅಂತಾರಾಷ್ಟ್ರೀಯ ಚಾಲೆಂಜರ್ಸ್‌ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ರನ್ನರ್ ಅಪ್‌ಗೆ ತೃಪ್ತಿಪಟ್ಟಿದ್ದ ಸೌರಭ್, ಚೈನೀಸ್ ತೈಪೆ ಟೂರ್ನಿಯಲ್ಲಿ ಟ್ರೋಫಿ ಗೆಲ್ಲುವಲ್ಲಿ ಸಫಲರಾಗಿದ್ದಾರೆ.
ತೈಪೆ ಸಿಟಿ(ಅ.16): ಭಾರತದ ಉದಯೋನ್ಮುಖ ಆಟಗಾರ ಸೌರಭ್ ವರ್ಮಾ, ಚೈನೀಸ್ ತೈಪೆ ಗ್ರ್ಯಾನ್ ಪ್ರೀ ಬ್ಯಾಡ್ಮಿಂಟನ್ ಪಂದ್ಯಾವಳಿಯ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಚಾಂಪಿಯನ್ ಪ್ರಶಸ್ತಿ ಪಡೆದಿದ್ದಾರೆ.
ಇಲ್ಲಿನ ಬ್ಯಾಡ್ಮಿಂಟನ್ ಕೋರ್ಟ್ನಲ್ಲಿ ಇಂದು ನಡೆದ ಸಿಂಗಲ್ಸ್ ವಿಭಾಗದ ಫೈನಲ್ ಪಂದ್ಯದಲ್ಲಿ ಭಾರತದ ಸೌರಭ್ 12-10, 12-10, 3-3 ಗೇಮ್ಗಳಿಂದ ಮಲೇಷ್ಯಾದ ಡರೇನ್ ಲೀವ್ ಎದುರು ಗೆಲುವು ಸಾಸಿದರು. 2011ರ ರಾಷ್ಟ್ರೀಯ ಚಾಂಪಿಯನ್ ಸೌರಭ್, ಮಲೇಷ್ಯಾದ ಆಟಗಾರನ ಎದುರು ಮೊದಲ ಎರಡು ಗೇಮ್ಗಳಲ್ಲಿ 2 ಅಂಕಗಳಿಂದ ಮುನ್ನಡೆ ಸಾಧಿಸಿದ್ದರು. ನಂತರದ ಗೇಮ್ನಲ್ಲಿ 3-3ರಿಂದ ಸಮಬಲ ಸಾಧಿಸಿದ್ದ ವೇಳೆಯಲ್ಲಿ ಡರೇನ್ ಭುಜದ ನೋವಿಗೆ ತುತ್ತಾಗಿದ್ದರಿಂದ ಪಂದ್ಯದಿಂದ ಹೊರ ನಡೆದರು. ಮೊದಲ ಎರಡು ಗೇಮ್ಗಳನ್ನು ಜಯಿಸಿದ ಆಧಾರದಲ್ಲಿ ಸೌರಭ್ ಅವರನ್ನು ವಿಜಯಿ ಎಂದು ಘೋಷಿಸಲಾಯಿತು.
ಈ ಹಿಂದೆ ನಡೆದಿದ್ದ ಬೆಲ್ಜಿಯಂ ಮತ್ತು ಪೋಲೆಂಡ್ ಅಂತಾರಾಷ್ಟ್ರೀಯ ಚಾಲೆಂಜರ್ಸ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ರನ್ನರ್ ಅಪ್ಗೆ ತೃಪ್ತಿಪಟ್ಟಿದ್ದ ಸೌರಭ್, ಚೈನೀಸ್ ತೈಪೆ ಟೂರ್ನಿಯಲ್ಲಿ ಟ್ರೋಫಿ ಗೆಲ್ಲುವಲ್ಲಿ ಸಫಲರಾಗಿದ್ದಾರೆ. ಪಂದ್ಯದ ಮೊದಲ ಗೇಮ್ನ ಆರಂಭದಲ್ಲಿ 5-3ರಿಂದ ಮುನ್ನಡೆ ಪಡೆದಿದ್ದ ಸೌರಭ್ಗೆ ನಂತರದ ಆಟದಲ್ಲಿ ಮಲೇಷ್ಯಾದ ಡರೇನ್ ಸತತ 5 ಅಂಕ ಪಡೆದು 8-5ರಿಂದ ಹಿಂದಿಕ್ಕಿದರು. ನಂತರದ ಆಟದಲ್ಲಿ ಸುಧಾರಿಸಿದ ಸೌರಭ್ 7-10ರಿಂದ ಹಿನ್ನಡೆ ಅನುಭವಿಸಿದರೂ, ಅಂತಿಮ ಕ್ಷಣದಲ್ಲಿ ಸತತ 5 ಅಂಕ ಪಡೆದು 12-10ರಿಂದ ಮೇಲುಗೈ ಸಾಧಿಸಿದರು.
ಎರಡನೇ ಗೇಮ್ನಲ್ಲಿ ಪ್ರಬಲ ಸರ್ವ್ಗಳ ಮೂಲಕ ಗಮನಸೆಳೆದ ಸೌರಭ್, ಮಲೇಷ್ಯಾ ಆಟಗಾರನಿಗೆ ಮುನ್ನಡೆಯಲು ಅವಕಾಶ ನೀಡದೆ, ಉತ್ತಮ ಮುನ್ನಡೆ ಕಾಯ್ದುಕೊಂಡರು. 3ನೇ ಗೇಮ್ನಲ್ಲಿ 3-3 ಅಂಕಗಳಿಸಿದ್ದಾಗ ಡರೇನ್ ನಿವೃತ್ತಿ ಪಡೆದು, ಸೌರಭ್ಗೆ ಜಯ ನೀಡಿದರು. ಸೌರಭ್ ಕಳೆದ ವರ್ಷದ ಬಹುತೇಕ ಸಮಯ ಮೊಣಕೈ ಮತ್ತು ಮಂಡಿರಜ್ಜು ಗಾಯದ ಸಮಸ್ಯೆಗೆ ತುತ್ತಾಗಿ ವಿಶ್ರಾಂತಿಯಲ್ಲಿಯೇ ಕಾಲ ಕಳೆದಿದ್ದರು. ಇದೀಗ ಪ್ರಸಕ್ತ ವರ್ಷ ಗಣನೀಯ ಯಶಸ್ಸಿನೊಂದಿಗೆ ಟ್ರೋಫಿಗಳನ್ನು ಜಯಿಸಿದ್ದಾರೆ.
