ಆಫ್ರಿಕಾ ಅಲ್ಪ ಮೊತ್ತಕ್ಕೆ ಆಲೌಟ್: ಭಜ್ಜಿ ವಿಶ್ವ ದಾಖಲೆ ಅಳಿಸಿಹಾಕಿದ ರಬಾಡ..!

SL vs SA Rabada Breaks Harbhajan Singh World Record
Highlights

ದಕ್ಷಿಣ ಆಫ್ರಿಕಾ-ಶ್ರೀಲಂಕಾ ನಡುವಿನ ಮೊದಲ ಟೆಸ್ಟ್ ಪಂದ್ಯ ಕೇವಲ ಮೂರೇ ದಿನಕ್ಕೆ ಮುಕ್ತಾಯವಾಗಿದ್ದು, ಲಂಕಾ 278 ರನ್’ಗಳ ಭರ್ಜರಿ ಜಯ ದಾಖಲಿಸಿದೆ. ಈ ಮೂಲಕ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆ ಕಾಯ್ದುಕೊಂಡಿದೆ.

ಗಾಲೆ[ಜು.14]: ದಕ್ಷಿಣ ಆಫ್ರಿಕಾ-ಶ್ರೀಲಂಕಾ ನಡುವಿನ ಮೊದಲ ಟೆಸ್ಟ್ ಪಂದ್ಯ ಕೇವಲ ಮೂರೇ ದಿನಕ್ಕೆ ಮುಕ್ತಾಯವಾಗಿದ್ದು, ಲಂಕಾ 278 ರನ್’ಗಳ ಭರ್ಜರಿ ಜಯ ದಾಖಲಿಸಿದೆ. ಈ ಮೂಲಕ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆ ಕಾಯ್ದುಕೊಂಡಿದೆ.
ಎರಡನೇ ಇನ್ನಿಂಗ್ಸ್’ನಲ್ಲಿ ಕೇವಲ 73 ರನ್’ಗಳಿಗೆ ಸರ್ವಪತನ ಕಂಡ ಆಫ್ರಿಕಾ ಹೀನಾಯ ಸೋಲು ಕಂಡಿತು. ಈ ಪಂದ್ಯದಲ್ಲಿ ಹಲವು ದಾಖಲೆಗಳು ನಿರ್ಮಾಣವಾದವು. ಯಾವ್ಯಾವ ದಾಖಲೆಗಳು ನಿರ್ಮಾಣವಾದವು ಎನ್ನುವುದನ್ನು ನೀವೇ ನೋಡಿ:

1. ಡೇಲ್ ಸ್ಟೇನ್ ಟೆಸ್ಟ್ ಕ್ರಿಕೆಟ್’ನಲ್ಲಿ ದಕ್ಷಿಣ ಆಫ್ರಿಕಾ ಪರ ಗರಿಷ್ಠ ವಿಕೆಟ್ ಪಡೆದ ಬೌಲರ್’ಗಳ ಪಟ್ಟಿಯಲ್ಲಿ ಶಾನ್ ಪೊಲ್ಲಾಕ್ ಅವರೊಂದಿಗೆ ಜಂಟಿ ಅಗ್ರಸ್ಥಾನ ಹಂಚಿಕೊಂಡಿದ್ದಾರೆ. ಸ್ಟೇನ್ ಖಾತೆಯಲ್ಲೀಗ 421 ವಿಕೆಟ್’ಗಳಿವೆ.

2. ಕಗಿಸೋ ರಬಾಡ ಇದೀಗ ಭಾರತ ತಂಡದ ಹರ್ಭಜನ್ ಸಿಂಗ್ ಹೆಸರಿನಲ್ಲಿದ್ದ ಅಪರೂಪದ ವಿಶ್ವದಾಖಲೆಯನ್ನು ಅಳಿಸಿಹಾಕಿದ್ದಾರೆ. ಇದೀಗ ಟೆಸ್ಟ್ ಕ್ರಿಕೆಟ್’ನಲ್ಲಿ 150 ವಿಕೆಟ್ ಕಬಳಿಸಿದ ಅತಿ ಕಿರಿಯ ಬೌಲರ್ ಎನ್ನುವ ಹೆಗ್ಗಳಿಕೆ ರಬಾಡ ಪಾಲಾಗಿದೆ. ರಬಾಡ 23 ವರ್ಷ 50 ದಿನಗಳಲ್ಲಿ ಈ ಸಾಧನೆ ಮಾಡಿದ್ದರೆ, ಈ ಮೊದಲು ಭಜ್ಜಿ 23 ವರ್ಷ 106 ದಿನಗಳಲ್ಲಿ 150 ವಿಕೆಟ್ ಕಬಳಿಸಿದ್ದರು.

3. ಇದೇ ಮೊದಲ ಬಾರಿಗೆ ಶ್ರೀಲಂಕಾ ಎದುರಾಳಿ ತಂಡವನ್ನು 200 ರನ್ ಒಳಗೆ ನಿಯಂತ್ರಿಸಿ 20 ವಿಕೆಟ್ ಕಬಳಿಸಿದ ದಾಖಲೆ ಬರೆದಿದೆ [ 126 ಮತ್ತು 73] 

4. ಮೊದಲೆರಡು ಟೆಸ್ಟ್ ಪಂದ್ಯ ಮುನ್ನಡೆಸಿ ತಂಡಕ್ಕೆ ಗೆಲುವು ತಂದಿಟ್ಟ ಲಂಕಾದ ನಾಲ್ಕನೇ ನಾಯಕ ಎನ್ನುವ ಕೀರ್ತಿಗೆ ಸುರಂಗಾ ಲಕ್ಮಲ್ ಭಾಜನರಾಗಿದ್ದಾರೆ. ಈ ಮೊದಲು ಮಹೇಲಾ ಜಯವರ್ಧನೆ, ಕುಮಾರ ಸಂಗಕ್ಕರ ಹಾಗೂ ರಂಗನಾ ಹೆರಾತ್ ಮೊದಲೆರಡು ಪಂದ್ಯಗಳಲ್ಲಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದರು.

ಮೊದಲು ಬ್ಯಾಟಿಂಗ್ ಮಾಡಿದ್ದ ಶ್ರೀಲಂಕಾ ಆರಂಭಿಕ ಬ್ಯಾಟ್ಸ್’ಮನ್ ದಿಮುತ್ ಕರುಣಾರತ್ನೆ ಬಾರಿಸಿದ ಅಜೇಯ 158 ರನ್’ಗಳ ನೆರವಿನಿಂದ ಮೊದಲ ಇನ್ನಿಂಗ್ಸ್’ನಲ್ಲಿ 287 ರನ್ ಕಲೆ ಹಾಕಿತ್ತು. ಇದಕ್ಕುತ್ತರವಾಗಿ ದಕ್ಷಿಣ ಆಫ್ರಿಕಾ ಕೇವಲ 126 ರನ್ ಬಾರಿಸಿತು. ಬಳಿಕ ಎರಡನೇ ಇನ್ನಿಂಗ್ಸ್’ನಲ್ಲಿ ಲಂಕಾ 190 ರನ್’ಗಳಿಗೆ ಆಲೌಟ್ ಆಯಿತು. ಗೆಲ್ಲಲು 352 ರನ್’ಗಳ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ಕೇವಲ 73 ರನ್’ಗಳಿಗೆ ಸರ್ವಪತನ ಕಾಣುವುದರ ಮೂಲಕ ಹೀನಾಯ ಸೋಲು ಕಂಡಿತು. ದಿಲ್’ರುವಾನ 32 ರನ್ ನೀಡಿ 6 ವಿಕೆಟ್ ಕಬಳಿಸುವ ಮೂಲಕ ಆಫ್ರಿಕಾ ಪತನದಲ್ಲಿ ಪ್ರಮುಖ ಪಾತ್ರವಹಿಸಿದ್ದರು.
 

loader