1984ರ ನಂತರ ಆಸ್ಟ್ರೇಲಿಯಾ ತಂಡ ಇದೇ ಮೊದಲ ಬಾರಿಗೆ 6 ಆಟಗಾರರ ಬದಲಾವಣೆ ಮಾಡಿದೆ.

ಅಡಿಲೇಡ್(ನ.21): ಆಟಗಾರರ ನಡುವಿನ ಬಿಕ್ಕಟ್ಟಿನ ಜತೆಯಲ್ಲಿ ಆಸ್ಟ್ರೇಲಿಯಾ ತಂಡದಿಂದ ಆರು ಮಂದಿ ಕ್ರಿಕೆಟಿಗರಿಗೆ ಆಡಳಿತ ಮಂಡಳಿ ಕೊಕ್ ನೀಡಿದ್ದು, ಇಂಗ್ಲೀಷ್ ಮೂಲದ ಆರಂಭಿಕ ಆಟಗಾರ ಮ್ಯಾಟ್ ರೆನ್ಶೋ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಸಫಲರಾಗಿದ್ದಾರೆ.

ತವರಿನಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಕಳಪೆ ಪ್ರದರ್ಶನದಿಂದ ಕಂಗೆಟ್ಟಿರುವ ಆಸ್ಟ್ರೇಲಿಯಾ ತಂಡದಲ್ಲಿ ಭಾರೀ ಬದಲಾವಣೆ ಮಾಡಿದೆ. ಇದೇ ಗುರುವಾರದಿಂದ ಆರಂಭವಾಗುವ ಮೂರನೇ ಮತ್ತು ಸರಣಿಯ ಕೊನೆಯ ಪಂದ್ಯಕ್ಕೆ ಆಸ್ಟ್ರೇಲಿಯಾ ತಂಡದಲ್ಲಿನ ಆರು ಆಟಗಾರರಿಗೆ ವಿಶ್ರಾಂತಿ ನೀಡಿದ್ದು, ಬದಲಿ ಆಟಗಾರರನ್ನು ಸೇರಿಸಿಕೊಂಡಿದೆ. ಇಲ್ಲಿನ ಅಡಿಲೇಡ್ ಓವಲ್ ಕ್ರೀಡಾಂಗಣದಲ್ಲಿ ನಡೆಯುವ ಹೊನಲು-ಬೆಳಕಿನ ಪಂದ್ಯಕ್ಕೆ ಆಸೀಸ್ ಹೆಚ್ಚಿನ ಮಹತ್ವ ನೀಡಿದೆ. ಆದರೆ ಟೆಸ್ಟ್ ಸರಣಿಯಲ್ಲಿ ಈಗಾಗಲೇ ಪ್ರವಾಸಿ ದಕ್ಷಿಣ ಆಫ್ರಿಕಾ ಮೊದಲ ಎರಡು ಪಂದ್ಯಗಳನ್ನು ಜಯಿಸಿ 2-0ಯಿಂದ ಮುನ್ನಡೆ ಸಾಧಿಸಿದೆ.

ಆಯ್ಕೆ ಸಮಿತಿ 20 ವರ್ಷದ ಕ್ವೀನ್ಸ್‌ಲ್ಯಾಂಡ್ ತಂಡದ ಆರಂಭಿಕ ರೆನ್ಶೋ ಅಲ್ಲದೇ ಪೀಟರ್ ಹ್ಯಾಂಡ್ಸ್‌ಕಂಬ್ ಮತ್ತು ನಿಕ್ ಮ್ಯಾಡಿಸನ್ ಅವರನ್ನು ಆಸೀಸ್‌'ನ 12 ಮಂದಿ ಆಟಗಾರರ ತಂಡದಲ್ಲಿ ಸ್ಥಾನ ಕಲ್ಪಿಸಿದೆ. ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌'ಗೆ ಪಾದಾರ್ಪಣೆ ಮಾಡಲಿದ್ದಾರೆ. ವೇಗದ ಬೌಲರ್ ಚಾಡ್ ಸೈರಸ್ ಮತ್ತು ಜಾಕ್ಸನ್ ಬರ್ಡ್ ರಾಷ್ಟ್ರೀಯ ತಂಡಕ್ಕೆ ಮರಳಿದ್ದಾರೆ. ಪೀಟರ್ ನೆವಿಲ್ ಹೊರಹೋಗಿದ್ದರಿಂದ ಮ್ಯಾಥ್ಯೂ ವೇಡ್ ಹೆಗಲಿಗೆ ವಿಕೆಟ್ ಕೀಪಿಂಗ್ ಜವಾಬ್ದಾರಿ ಬಿದ್ದಿದೆ.

1984ರ ನಂತರ ಆಸ್ಟ್ರೇಲಿಯಾ ತಂಡ ಇದೇ ಮೊದಲ ಬಾರಿಗೆ 6 ಆಟಗಾರರ ಬದಲಾವಣೆ ಮಾಡಿದೆ. ಜೋ ಬರ್ನ್ಸ್, ಆಡಮ್ ವೋಜಸ್, ಕಾಲಮ್ ರ್ಗ್ಯೂಸನ್, ನೆವಿಲ್ ಮತ್ತು ಜೊ ಮಿನ್ನೆ ಅವರನ್ನು ತಂಡದಿಂದ ಕೈಬಿಡಲಾಗಿದೆ. ಹೋಬಾರ್ಟ್‌ನಲ್ಲಿ ನಡೆದಿದ್ದ ದ. ಆಫ್ರಿಕಾ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಆಸೀಸ್ ಇನಿಂಗ್ಸ್ ಮತ್ತು 80ರನ್‌'ಗಳ ಅಂತರದಲ್ಲಿ ಸೋಲು ಕಂಡಿತ್ತು. ಆಲ್ರೌಂಡರ್ ಮಿಚೆಲ್ ಮಾರ್ಶ್, ವೋಜಸ್ ಗಾಯದ ಸಮಸ್ಯೆ ಬಳಲುತ್ತಿರುವುದರಿಂದ ಟೆಸ್ಟ್‌'ಗೆ ಪರಿಗಣಿಸಲಿಲ್ಲ ಎಂದು ನೂತನ ಆಯ್ಕೆ ಸಮಿತಿ ಮುಖ್ಯಸ್ಥ ಟ್ರೆವೋರ್ ಹಾನ್ಸ್ ಹೇಳಿದ್ದಾರೆ.

ಆಸ್ಟ್ರೇಲಿಯಾ ತಂಡ

ಸ್ಟೀವ್ ಸ್ಮಿತ್ (ನಾಯಕ), ಜಾಕ್ಸನ್ ಬರ್ಡ್, ಪೀಟರ್ ಹ್ಯಾಂಡ್ಸ್‌ಕಂಬ್, ಜೋಶ್ ಹ್ಯಾಜೆಲ್‌ವುಡ್, ಉಸ್ಮಾನ್ ಖವಾಜ, ನಥಾನ್ ಲಿಯಾನ್, ನಿಕ್ ಮ್ಯಾಡಿಸನ್, ಮ್ಯಾಟ್ ರೆನ್ಶೋ, ಚಾಡ್ ಸೈರಸ್, ಮಿಚೆಲ್ ಸ್ಟಾರ್ಕ್, ಮ್ಯಾಥ್ಯೂ ವೇಡ್, ಡೇವಿಡ್ ವಾರ್ನರ್