ಪಂದ್ಯದ ಆರಂಭದಿಂದಲೂ ಪ್ರಭಾವಿ ಆಟವಾಡಿದ ಸಿಂಧು ಮೊದಲ ಗೇಮ್‌'ನಲ್ಲಿ 8 ಮತ್ತು ಎರಡನೇ ಗೇಮ್‌'ನಲ್ಲಿ 7 ಅಂಕಗಳ ಅಂತರ ಕಾಯ್ದುಕೊಂಡಿದ್ದರು.
ಲಖನೌ(ಜ.29): ರಿಯೊ ಒಲಿಂಪಿಕ್ಸ್ ಕೂಟದ ರಜತ ಪದಕ ವಿಜೇತೆ ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು, ಸೈಯದ್ ಮೋದಿ ಗ್ರ್ಯಾನ್ ಪ್ರಿ ಗೋಲ್ಡ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಇದರೊಂದಿಗೆ ಸಿಂಧು ಚೀನಾ ಓಪನ್ ಬಳಿಕ ಪ್ರೀಮಿಯರ್ ಸೂಪರ್ ಸೀರಿಸ್'ನ ಚೊಚ್ಚಲ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.
ಇಲ್ಲಿನ ಬಾಬು ಬನರಾಸಿ ದಾಸ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಸಿಂಧು 21-13, 21-14 ಗೇಮ್'ಗಳಿಂದ ಇಂಡೋನೇಷಿಯಾದ ಗ್ರಿಗೋರಿಯಾ ಮರಿಸ್ಕಾ ಎದುರು ಗೆಲವು ಸಾಧಿಸಿದರು.
ಪಂದ್ಯದ ಆರಂಭದಿಂದಲೂ ಪ್ರಭಾವಿ ಆಟವಾಡಿದ ಸಿಂಧು ಮೊದಲ ಗೇಮ್'ನಲ್ಲಿ 8 ಮತ್ತು ಎರಡನೇ ಗೇಮ್'ನಲ್ಲಿ 7 ಅಂಕಗಳ ಅಂತರ ಕಾಯ್ದುಕೊಂಡಿದ್ದರು. ಪಂದ್ಯದುದ್ದಕ್ಕೂ ಆಕ್ರಮಣಕಾರಿ ಆಟದಿಂದ ಎದುರಾಳಿ ಆಟಗಾರ್ತಿಯನ್ನು ಕಾಡಿದ ಸಿಂಧು ಪ್ರಾಬಲ್ಯ ಮೆರೆದು ಟ್ರೋಫಿ ಜಯಿಸಿದರು.
ಇನ್ನು ಪುರುಷರ ಸಿಂಗಲ್ಸ್ ವಿಭಾಗದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಭಾರತದ ಸಮೀರ್ ವರ್ಮ 21-19, 21-16ಗೇಮ್'ಗಳಿಂದ ತಮ್ಮವರೇ ಆದ ಸಾಯಿ ಪ್ರಣೀತ್ ಎದುರು ಗೆಲವು ಪಡೆದರು.
ಮಿಶ್ರ ಡಬಲ್ಸ್ ವಿಭಾಗದಲ್ಲಿ ಭಾರತದ ಪ್ರಣವ್ ಚೋಪ್ರಾ ಮತ್ತು ಸಿಕ್ಕಿ ರೆಡ್ಡಿ ಜೋಡಿ 22-20, 21-10 ಗೇಮ್'ಗಳಿಂದ ತಮ್ಮದೇ ದೇಶದ ಸ್ಪರ್ಧಿಗಳಾದ ಸುಮಿತ್ ರೆಡ್ಡಿ ಮತ್ತು ಅಶ್ವಿನಿ ಪೊನ್ನಪ್ಪ ಜೋಡಿ ಎದುರು ಗೆಲವು ಸಾಧಿಸಿ ಟ್ರೋಫಿ ತಮ್ಮದಾಗಿಸಿಕೊಂಡರು.
