ಇಂದಿನಿಂದ ವಿಶ್ವಬ್ಯಾಡ್ಮಿಂಟನ್ ಚಾಂಪಿಯನ್’ಶಿಪ್ ಆರಂಭ

Sindhu, Nehwal Srikanth to carry India hope at BWF World Championships
Highlights

ಕಳೆದ ವರ್ಷದ ವಿಶ್ವ ಚಾಂಪಿಯನ್‌ಶಿಪ್ ಫೈನಲ್’ನಲ್ಲಿ ಜಪಾನ್‌ನ ನೋಜೋಮಿ ಒಕುಹಾರಾ ವಿರುದ್ಧ ಸಿಂಧು ಸುಮಾರು 110 ನಿಮಿಷ ಹೋರಾಟ ನಡೆಸಿದ್ದರೂ ಯಶ ಲಭಿಸಿರಲಿಲ್ಲ. ಕಳೆದ ವರ್ಷ 6 ಪ್ರತಿಷ್ಠಿತ ಟೂರ್ನಿಗಳಲ್ಲಿ ಫೈನಲ್‌ಗೇರಿದ್ದ ಸಿಂಧು, 3ರಲ್ಲಿ ಮಾತ್ರ ಪ್ರಶಸ್ತಿ ಜಯಿಸಿದ್ದರು. 

ಬೀಜಿಂಗ್[ಜು.30]: ಭಾರತದ ತಾರಾ ಶಟ್ಲರ್‌ಗಳಾದ ಪಿ.ವಿ.ಸಿಂಧು ಮತ್ತು ಕಿದಾಂಬಿ ಶ್ರೀಕಾಂತ್, ಇಂದಿನಿಂದ ಆರಂಭವಾಗಲಿರುವ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್’ನಲ್ಲಿ ಭಾರತದ ಸವಾಲನ್ನು ಮುನ್ನಡೆಸಲಿದ್ದಾರೆ. ಭಾರತ ಈವರೆಗೂ ಟೂರ್ನಿಯಲ್ಲಿ 2 ಬೆಳ್ಳಿ ಮತ್ತು 5 ಕಂಚು ಸೇರಿ ಒಟ್ಟು 7 ಪದಕಗಳನ್ನು ಗೆದ್ದಿದೆ. ಅದರಲ್ಲಿ 5 ಪದಕಗಳನ್ನು ಸಿಂಧು ಮತ್ತು ಸೈನಾ ಗೆದ್ದಿರುವುದು ವಿಶೇಷ.

ಹೈದರಾಬಾದ್‌ನ 23 ವರ್ಷದ ಸಿಂಧು, ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಇದುವರೆಗೆ ಒಂದು ಬೆಳ್ಳಿ ಮತ್ತು 2 ಕಂಚು ಸೇರಿ ಒಟ್ಟು 3 ಪದಕಗಳನ್ನು ಗೆದ್ದಿದ್ದಾರೆ. ಆದರೆ ಒಮ್ಮೆಯೂ ಚಿನ್ನ ಗೆದ್ದಿಲ್ಲ. ಮಹತ್ವದ ಟೂರ್ನಿಗಳಲ್ಲಿ ಪ್ರಶಸ್ತಿ ಹೊಸ್ತಿಲಲ್ಲಿಯೇ ಪದೇ ಪದೆ ಮುಗ್ಗರಿಸುತ್ತಿರುವ ಸಿಂಧು, ಈ ಬಾರಿ ಪ್ರಶಸ್ತಿಗೆ ಮುತ್ತಿಕ್ಕುವ ತವಕದಲ್ಲಿದ್ದಾರೆ. ಕಳೆದ ವರ್ಷದ ವಿಶ್ವ ಚಾಂಪಿಯನ್‌ಶಿಪ್ ಫೈನಲ್’ನಲ್ಲಿ ಜಪಾನ್‌ನ ನೋಜೋಮಿ ಒಕುಹಾರಾ ವಿರುದ್ಧ ಸಿಂಧು ಸುಮಾರು 110 ನಿಮಿಷ ಹೋರಾಟ ನಡೆಸಿದ್ದರೂ ಯಶ ಲಭಿಸಿರಲಿಲ್ಲ. ಕಳೆದ ವರ್ಷ 6 ಪ್ರತಿಷ್ಠಿತ ಟೂರ್ನಿಗಳಲ್ಲಿ ಫೈನಲ್‌ಗೇರಿದ್ದ ಸಿಂಧು, 3ರಲ್ಲಿ ಮಾತ್ರ ಪ್ರಶಸ್ತಿ ಜಯಿಸಿದ್ದರು. ಪ್ರಸಕ್ತ ಋತುವಿನಲ್ಲೂ ಸಿಂಧು, ಇಂಡಿಯಾ ಓಪನ್, ಕಾಮನ್‌ವೆಲ್ತ್ ಗೇಮ್ಸ್ ಮತ್ತು ಥಾಯ್ಲೆಂಡ್ ಓಪನ್‌ಗಳಲ್ಲಿ ಫೈನಲ್‌ಗೇರಿದ್ದು, ಪ್ರಶಸ್ತಿ ಜಯಿಸುವಲ್ಲಿ ವಿಫಲಗೊಂಡಿದ್ದಾರೆ. ಸದ್ಯ ಟೂರ್ನಿಯಲ್ಲಿ ಸಿಂಧುಗೆ ಮೊದಲ ಸುತ್ತಲ್ಲಿ ಬೈ ದೊರೆತಿದೆ. ಕಾಮನ್‌ವೆಲ್ತ್ ಪದಕ ವಿಜೇತೆ ಸೈನಾ ನೆಹ್ವಾಲ್ ಉತ್ತಮ ಲಯದಲ್ಲಿದ್ದು, ಪ್ರಶಸ್ತಿ ಗೆಲ್ಲುವ ವಿಶ್ವಾಸದಲ್ಲಿದ್ದಾರೆ. 28 ವರ್ಷದ ಸೈನಾ, ಸ್ವಿಜರ್‌ಲೆಂಡ್‌ನ ಸಬ್ರಿನಾ ಅಥವಾ ಟರ್ಕಿಯ ಅಲಿಯೆ ಡೆಮಿರ್ಬಾಗ್ ವಿರುದ್ಧ ಅಭಿಯಾನ ಆರಂಭಿಸಲಿದ್ದಾರೆ.

ಶ್ರೀಕಾಂತ್, ಪ್ರಣಯ್ ಸವಾಲು: ಕಾಮನ್‌ವೆಲ್ತ್ ಬೆಳ್ಳಿ ಗೆದ್ದ ವಿಶ್ವಾಸದಲ್ಲಿರುವ ಶ್ರೀಕಾಂತ್, ವಿಶ್ವ ಚಾಂಪಿಯನ್ ಆಗುವ ಕನಸು ಕಾಣುತ್ತಿದ್ದಾರೆ. 3 ಬಾರಿ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ ಮಲೇ ಷ್ಯಾದ ಲೀ ಚೊಂಗ್ ವೀ, ಅನಾರೋಗ್ಯದ ಕಾರಣದಿಂದ ಟೂರ್ನಿಯಿಂದ ಹಿಂದೆ ಸರಿದಿದ್ದು, ಶ್ರೀಕಾಂತ್ ಪ್ರಶಸ್ತಿಯ ಹಾದಿ ಕೊಂಚ ಸುಗಮಗೊಂಡಿದೆ. ಎಚ್.ಎಸ್.ಪ್ರಣಯ್, ಬಿ.ಸಾಯಿ ಪ್ರಣೀತ್, ಸಮೀರ್ ವರ್ಮಾ ಕೂಡ ಸ್ಪರ್ಧೆಯಲ್ಲಿದ್ದಾರೆ. ಪುರುಷರ ಡಬಲ್ಸ್‌ನಲ್ಲಿ ಕಾಮನ್‌ವೆಲ್ತ್ ಬೆಳ್ಳಿ ಗೆದ್ದಿರುವ ಸಾತ್ವಿಕ್ ಸಾಯಿರಾಜ್ ರಂಕಿರೆಡ್ಡಿ- ಚಿರಾಗ್ ಶೆಟ್ಟಿ, ಮನು ಅತ್ರಿ-ಬಿ. ಸುಮಿತ್ ರೆಡ್ಡಿ, ರೋಹನ್ ಕಪೂರ್-ಖುಹೂ ಗಾರ್ಗ್, ಸೌರಭ್ ವರ್ಮಾ-ಅನುಷ್ಕಾ ಪಾರಿಕ್ ಜೋಡಿಗಳು ಸ್ಪರ್ಧಿಸುತ್ತಿವೆ. ಮಹಿಳಾ ಡಬಲ್ಸ್‌ನಲ್ಲಿ ಕಾಮನ್‌ವೆಲ್ತ್‌ನಲ್ಲಿ ಕಂಚಿನ ಪದಕ ಗೆದ್ದಿದ್ದ ಅಶ್ವಿನಿ ಪೊನ್ನಪ್ಪ-ಎನ್. ಸಿಕ್ಕಿರೆಡ್ಡಿ ಜೋಡಿ, ಮಿಶ್ರ ಡಬಲ್ಸ್‌ನಲ್ಲಿ ಸಾತ್ವಿಕ್ ಸಾಯಿರಾಜ್-ಅಶ್ವಿನಿ ಪೊನ್ನಪ್ಪ ಮತ್ತು ಪ್ರಣವ್ ಜೆರ್ರಿ ಚೋಪ್ರಾ-ಎನ್.ಸಿಕ್ಕಿರೆಡ್ಡಿ ಜೋಡಿ ಪ್ರಶಸ್ತಿಗಾಗಿ ಸೆಣಸಲಿವೆ.

18- ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ  ಪಾಲ್ಗೊಳ್ಳುತ್ತಿರುವ ಭಾರತದ ಶಟ್ಲರ್‌ಗಳು

07- ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಈವರೆಗೂಗೆದ್ದಿರುವ ಒಟ್ಟು ಪದಕಗಳು

03- ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಸಿಂಧು ಇದುವರೆಗೂ ಗೆದ್ದಿರುವ ಪದಕಗಳು

02- ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಸೈನಾ ಇಲ್ಲಿಯ ತನಕ ಗೆದ್ದಿರುವ ಪದಕಗಳು

loader