ಲಂಡನ್(ಜು.07): ವಿಂಬಲ್ಡನ್ ಟೂರ್ನಿಯಿಂದ ಜಪಾನ್ ಅಗ್ರ ಶ್ರೇಯಾಂಕಿತ ಆಟಗಾರ ಕೈ ನಿಶಿಕೋರಿ ಅಘಾತ ಅನುಭವಿಸುವ ಮೂಲಕ ಟೂರ್ನಿಯಿಂದ ಹೊರಬಿದ್ದರೆ, ಮರೀನ್ ಸಿಲಿಕ್ ಪ್ರೀ ಕ್ವಾರ್ಟರ್ ಫೈನಲ್'ಗೆ ಲಗ್ಗೆಯಿಟ್ಟಿದ್ದಾರೆ. ಇನ್ನೂ ಮಹಿಳೆಯರ ವಿಭಾಗದಲ್ಲಿ ಹ್ಯಾಲಿಪ್, ಅಜೆರಿಂಕಾ ಕೂಡಾ ಸುಲಭವಾಗಿ ಪ್ರೀ ಕ್ವಾರ್ಟರ್ ಫೈನಲ್'ಗೆ ಪ್ರವೇಶಿಸಿದ್ದಾರೆ.

9ನೇ ಶ್ರೇಯಾಂಕಿತ ಜಪಾನ್ ಆಟಗಾರ ನಿಶಿಕೋರಿ ಮೂರನೇ ಸುತ್ತಿನಲ್ಲಿ ಸ್ಪೇನ್'ನ ರಾಬರ್ಟ್ ಬೌಟಿಸ್ಟ ಆಗ್ಟ್ ಎದುರು 6-4,7-6(3),3-6,6-3 ಸೆಟ್'ಗಳ ಅಂತರದಲ್ಲಿ ಸೋಲುಂಡು ಟೂರ್ನಿಯಿಂದ ಹೊರಬಿದ್ದರು.

ಮತ್ತೊಂದು ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಮರೀನ್ ಸಿಲಿಕ್ ಅವರು ಸ್ಟೀವ್ ಜಾನ್ಸನ್ ಅವರನ್ನು 6-4, 7-6(3), 6-4 ಸೆಟ್'ಗಳ ಅಂತರದಲ್ಲಿ ಮಣಿಸುವ ಮೂಲಕ 16ರ ಘಟ್ಟ ಪ್ರವೇಶಿಸಿದ್ದಾರೆ.

ಇನ್ನು ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಎರಡನೇ ಶ್ರೇಯಾಂಕಿತೆ ರೊಮೇನಿಯಾದ ಸಿಮೋನ್ ಹ್ಯಾಲೆಪ್ ಸುಲಭವಾಗಿ ಪ್ರೀ ಕ್ವಾರ್ಟರ್ ಪ್ರವೇಶಿಸಿದ್ದಾರೆ. ಚೀನಾ ಎದುರಾಳಿ ಪೆಂಗ್ ಶೈ ವಿರುದ್ಧ 6-4, 7-6(7) ನೇರ ಸೆಟ್'ಗಳಲ್ಲಿ ಜಯಭೇರಿ ಬಾರಿಸುವ ಮೂಲಕ ಗೆಲುವಿನ ನಗೆ ಬೀರಿದರು.

ಇನ್ನೊಂದು ಪಂದ್ಯದಲ್ಲಿ ಮಾಜಿ ನಂ.1 ಆಟಗಾರ್ತಿ ವಿಕ್ಟೋರಿಯಾ ಅಜೆರೆಂಕಾ ಪ್ರೀ ಕ್ವಾರ್ಟರ್ ಹಂತ ಪ್ರವೇಶಿಸಿದ್ದಾರೆ. ಬ್ರಿಟನ್ ಆಟಗಾರ್ತಿ ಹೀಥರ್ ವ್ಯಾಟ್ಸನ್ ಎದುರು ಭರ್ಜರಿ ಆಟವಾಡಿದ ಅಜೆರೆಂಕಾ 3-6,6-1, 6-4 ಸೆಟ್'ಗಳ ಅಂತರದಲ್ಲಿ ಜಯ ಸಾಧಿಸಿದರು.