Asianet Suvarna News Asianet Suvarna News

ಮಲ ಮಗಳ ಪಾಸ್‌ಪೋರ್ಟ್‌ಗೆ ಸಹಿ: ಕುಂಬ್ಳೆಗೆ ಸಂಕಷ್ಟ

ಮಲ ಮಗಳ ಪಾಸ್‌ಪೋರ್ಟ್‌ಗೆ ಸಹಿ: ಕುಂಬ್ಳೆಗೆ ಸಂಕಷ್ಟ| ಪತ್ನಿಯ ಮೊದಲ ಪತಿಯಿಂದ ದೂರು| ಕ್ರಮಕ್ಕೆ ಹೈಕೋರ್ಟ್‌ ನಿರ್ದೇಶನ

Signature In Step daughters Passport Anil Kumble In Trouble
Author
Bangalore, First Published Aug 10, 2019, 11:20 AM IST

ಬೆಂಗಳೂರು[ಆ.10]: ಮಲ ಮಗಳ ಪಾಸ್‌ಪೋರ್ಟ್‌ ನವೀಕರಣಕ್ಕೆ ಕೋರಿದ್ದ ಅರ್ಜಿಯಲ್ಲಿ ತಂದೆಯ ಸಹಿ ಮಾಡಿದ ಪ್ರಕರಣದ ಸಂಬಂಧ ಸುಳ್ಳು ಮಾಹಿತಿ ನೀಡಿದ ಹಾಗೂ ಸಹಿ ಫೋರ್ಜರಿ ಮಾಡಿದ ಆರೋಪಗಳಡಿ ಮಾಜಿ ಕ್ರಿಕೆಟಿಗ ಅನಿಲ್‌ ಕುಂಬ್ಳೆ ವಿರುದ್ಧ 2012ರಲ್ಲಿ ಸಲ್ಲಿಕೆಯಾಗಿದ್ದ ದೂರು ಆಧರಿಸಿ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಪಾಸ್‌ಪೋರ್ಟ್‌ ಇಲಾಖೆಗೆ ಹೈಕೋರ್ಟ್‌ ನಿರ್ದೇಶಿಸಿದೆ.

ಕುಮಾರ್‌ ವಿ.ಜಾಗೀರ್‌ದಾರ್‌ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ವೀರಪ್ಪ ಅವರಿದ್ದ ಏಕಸದಸ್ಯ ನ್ಯಾಯಪೀಠ, ಅರ್ಜಿದಾರರು 2012ರ ಜ.10ರಂದು ಅನಿಲ್‌ ಕುಂಬ್ಳೆ ಮತ್ತವರ ಪತ್ನಿ ಚೇತನ ಅವರ ಹೆಸರು ಉಲ್ಲೇಖಿಸಿ ನೀಡಿದ್ದ ದೂರನ್ನು ಶೀಘ್ರ ಕಾನೂನು ಪ್ರಕಾರ ಪರಿಗಣಿಸಿ ಸೂಕ್ತ ಆದೇಶ ಪ್ರಕಟಿಸಬೇಕು ಎಂದು ಕೋರಮಂಗಲದ ಪ್ರಾದೇಶಿಕ ಪಾಸ್‌ಪೋರ್ಟ್‌ ಅಧಿಕಾರಿಗೆ ಇತ್ತೀಚೆಗೆ ನಿರ್ದೇಶಿಸಿದೆ.

ಬೌಂಡರಿ ಕೌಂಟ್ ಕುರಿತು ಚರ್ಚಿಸಲು ಮುಂದಾದ ಕುಂಬ್ಳೆ ನೇತೃತ್ವದ ಐಸಿಸಿ ಸಮಿತಿ

ಕುಮಾರ್‌ ಜಾಗೀರ್‌ದಾರ್‌ ಮತ್ತು ಚೇತನ ರಾಮತೀರ್ಥ ಅವರು 1986ರಲ್ಲಿ ಮದುವೆಯಾಗಿ, 1996ರಲ್ಲಿ ಕಾನೂನು ಪ್ರಕಾರ ವಿಚ್ಛೇದನ ಪಡೆದುಕೊಂಡಿದ್ದರು. ಅವರಿಗೆ ಹೆಣ್ಣು ಮಗು ಜನಿಸಿತ್ತು. ವಿಚ್ಛೇದನದ ನಂತರ ಚೇತನ ಅವರು ಅನಿಲ್‌ ಕುಂಬ್ಳೆ ಅವರನ್ನು ಮದುವೆಯಾಗಿದ್ದರು. ಈ ಮಧ್ಯೆ 2012ರ ಜ.10ರಂದು ಕುಮಾರ್‌ ಜಾಗೀದಾರ್‌ ಕೋರಮಂಗಲದ ಪ್ರಾದೇಶಿಕ ಪಾಸ್‌ಪೋರ್ಟ್‌ ಅಧಿಕಾರಿಗೆ ದೂರು ನೀಡಿದ್ದರು. ನಂತರ 2012ರಲ್ಲಿ ಮೇ 7ರಂದು ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು.

ಚೇತನ ಹಾಗೂ ನನಗೆ ಜನಿಸಿದ ಮಗಳು 2012ರಲ್ಲಿ ಕೋರಮಂಗಲ ಪ್ರಾದೇಶಿಕ ಪಾಸ್‌ಪೋರ್ಟ್‌ ಕಚೇರಿಗೆ ಪಾಸ್‌ಪೋರ್ಟ್‌ ನವೀಕರಣಕ್ಕೆ ಅರ್ಜಿ ಸಲ್ಲಿಸಿದ್ದರು. ಆಗ ಆಕೆ ಅಪ್ರಾಪ್ತೆ. ಕಾನೂನು ಪ್ರಕಾರ ಅಪ್ತಾಪ್ತರು ಪಾಸ್‌ಪೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಯಲ್ಲಿ ಮಗುವಿನ ತಂದೆ ಹಾಗೂ ತಾಯಿ ಸಹಿ ಹಾಕಬೇಕಿದೆ. ಆದರೆ, ಮಗಳ ತಂದೆ ನಾನಾಗಿದ್ದರೂ, ತಂದೆಯ ಸಹಿಯನ್ನು ಅನಿಲ್‌ ಕುಂಬ್ಳೆ ಮಾಡಿದ್ದಾರೆ. ಆ ಮೂಲಕ ಸುಳ್ಳು ಮಾಹಿತಿ ಒದಗಿಸಿ, ವಂಚನೆ ಮಾಡಲಾಗಿದೆ.

ಶಿವಣ್ಣ ಬರ್ತಡೇಗೆ ಸರ್ಪ್ರೈಸ್ ಕೊಟ್ಟ ಅನಿಲ್ ಕುಂಬ್ಳೆ

ಸಹಿಯನ್ನು ಫೋರ್ಜರಿ ಮಾಡಲಾಗಿದೆ. ಹೀಗಾಗಿ, ಚೇತನ ಹಾಗೂ ಅನಿಲ್‌ ಕುಂಬ್ಳೆ ವಿರುದ್ಧ ಕ್ರಮ ಜರುಗಿಸಬೇಕು ಎಂದು 2012ರ ಜ.10ರಂದು ಕೋರಮಂಗಲ ಪ್ರಾದೇಶಿಕ ಪಾಸ್‌ಪೋರ್ಟ್‌ ಅಧಿಕಾರಿಗೆ ದೂರು ನೀಡಿದೆ. ಆದರೆ ನನ್ನ ದೂರು ಆಧರಿಸಿ ಯಾವುದೇ ಕ್ರಮ ಜರುಗಿಸಿಲ್ಲ. ಆದ್ದರಿಂದ ಚೇತನ ಕುಂಬ್ಳೆ ಮತ್ತು ಅನಿಲ್‌ ಕುಂಬ್ಳೆ ವಿರುದ್ಧ ಅಗತ್ಯ ಕಾನೂನು ಜರುಗಿಸಬೇಕು ಎಂದು ಅರ್ಜಿಯಲ್ಲಿ ಕುಮಾರ್‌ ಜಾಗೀದಾರ್‌ ಕೋರಿದ್ದರು.

ಅರ್ಜಿ ಸಂಬಂಧ ಕುಮಾರ್‌ ಜಾಗೀರ್‌ದಾರ್‌ ಹಾಗೂ ಪ್ರತಿವಾದಿಗಳಾಗಿದ್ದ ಕೋರಮಂಗಲ ಪ್ರಾದೇಶಿಕ ಪಾಸ್‌ಪೋರ್ಟ್‌ ಅಧಿಕಾರಿ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಪರ ವಕೀಲರ ವಾದ ಹಾಗೂ ಪ್ರತಿವಾದವನ್ನು ಆಲಿಸಿದ ನಂತರ ನ್ಯಾಯಪೀಠ ಆದೇಶ ಮಾಡಿದೆ.

ಅಪ್ರಾಪ್ತ ಮಗಳು ಪಾಸ್‌ಪೋರ್ಟ್‌ ಕೋರಿ ಸಲ್ಲಿಸಿದ್ದ ಅರ್ಜಿಯಲ್ಲಿ ತಂದೆಯ ಸೋಗಿನಲ್ಲಿ ಸಹಿ ಹಾಕಿ, ಸುಳ್ಳು ಮಾಹಿತಿ ನೀಡಿ ವಂಚಿಸಿದ ಆರೋಪ ಸಂಬಂಧ ಅನಿಲ್‌ ಕುಂಬ್ಳೆ ಹಾಗೂ ಚೇತನ ಅವರ ವಿರುದ್ಧ ದೂರು ಬಂದಿದೆ. ಆದರೆ, ಪಾಸ್‌ಪೋರ್ಟ್‌ ಪ್ರಾಧಿಕಾರವು ಚೇತನ ಅವರಿಗೆ ಮಾತ್ರ ಶೋಕಾಸ್‌ ನೋಟಿಸ್‌ ನೀಡಿ ವಿವರಣೆ ಕೇಳಿತ್ತು. ಆದರೆ, ಅನಿಲ್‌ ಕುಂಬ್ಳೆ ವಿರುದ್ಧ ನಿರ್ದಿಷ್ಟ ಆರೋಪ ಬಂದಿದ್ದರೂ ಅವರ ವಿರುದ್ಧ ಯಾವುದೇ ಪ್ರಕ್ರಿಯೆ ನಡೆಸಿಲ್ಲ. ಹೀಗಾಗಿ ಕೋರಮಂಗಲ ಪ್ರಾದೇಶಿಕ ಪಾಸ್‌ಪೋರ್ಟ್‌ ಅಧಿಕಾರಿ, ಅರ್ಜಿದಾರರು ದೂರಿನಲ್ಲಿ ಉಲ್ಲೇಖಿಸಿರುವ ವ್ಯಕ್ತಿಗಳ ವಿರುದ್ಧದ ಶೀಘ್ರ ಕಾನೂನು ಪ್ರಕಾರ ಕ್ರಮ ಕೈಗೊಂಡು ಸೂಕ್ತ ಆದೇಶ ಹೊರಡಿಸಬೇಕು ಎಂದು ನ್ಯಾಯಪೀಠ ಆದೇಶದಲ್ಲಿ ನಿರ್ದೇಶಿಸಿದೆ.

Follow Us:
Download App:
  • android
  • ios