ಮೂರನೇ ವಿಕೆಟ್'ಗೆ ಜತೆಯಾದ ಶ್ರೇಯಸ್ ಅಯ್ಯರ್ ಹಾಗೂ ವಿಜಯ್ ಶಂಕರ್ ಜೋಡಿ ಆಫ್ರಿಕಾ ಬೌಲರ್'ಗಳನ್ನು ಲೀಲಾಜಾಲವಾಗಿ ಎದುರಿಸಿತು.
ಪ್ರಿಟೋರಿಯಾ(ಆ.08): ಶ್ರೇಯಸ್ ಅಯ್ಯರ್ ಹಾಗೂ ವಿಜಯ್ ಶಂಕರ್ ಅವರ ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ದಕ್ಷಿಣ ಆಫ್ರಿಕಾ 'ಎ' ವಿರುದ್ಧ ಮನೀಶ್ ಪಾಂಡೆ ನೇತೃತ್ವದ ಭಾರತ 'ಎ' ತಂಡ 7 ವಿಕೆಟ್'ಗಳ ಜಯಭೇರಿ ಬಾರಿಸಿದೆ.
ಪ್ರಶಸ್ತಿ ಗೆಲ್ಲಲು ದಕ್ಷಿಣ ಆಫ್ರಿಕಾ 'ಎ' ತಂಡ ನೀಡಿದ್ದ 268ರನ್'ಗಳ ಗುರಿ ಬೆನ್ನತ್ತಿದ ಮನೀಶ್ ಪಾಂಡೆ ಬಳಗ ಆರಂಭದಲ್ಲೇ ಕರುಣ್ ನಾಯರ್ ಹಾಗೂ ಸಂಜು ಸ್ಯಾಮ್ಸನ್ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ಮೂರನೇ ವಿಕೆಟ್'ಗೆ ಜತೆಯಾದ ಶ್ರೇಯಸ್ ಅಯ್ಯರ್ ಹಾಗೂ ವಿಜಯ್ ಶಂಕರ್ ಜೋಡಿ ಆಫ್ರಿಕಾ ಬೌಲರ್'ಗಳನ್ನು ಲೀಲಾಜಾಲವಾಗಿ ಎದುರಿಸಿತು. ಅಯ್ಯರ್ ಹಾಗೂ ಶಂಕರ್ ಜೋಡಿ ಮೂರನೇ ವಿಕೆಟ್'ಗೆ 141 ರನ್'ಗಳ ಜತೆಯಾಟವಾಡುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಭಾರತ ಪರ ಶ್ರೇಯಸ್ ಅಜೇಯ 140 ರನ್ ಸಿಡಿಸಿದರೆ, ಮನೀಶ್ ಪಾಂಡೆ ಅಜೇಯ 32 ರನ್ ಸಿಡಿಸಿ ತಂಡದ ಗೆಲುವಿನ ದಡ ಸೇರಿಸಿದರು.
ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ 'ಎ' ತಂಡ ಆರಂಭಿಕ ಆಘಾತಗಳ ನಡುವೆಯೂ ಫರ್ಹಾನ್ ಬೆಹ್ರಾದ್ದೀನ್ ಅಜೇಯ ಶತಕ ಹಾಗೂ ಡ್ವೇನ್ ಪ್ರಿಸ್ಟೋರಿಯಸ್ ಆಕರ್ಷಕ ಅರ್ಧಶತಕಗಳ ನೆರವಿನಿಂದ ನಿಗದಿತ 50 ಓವರ್'ಗಳಲ್ಲಿ 7 ವಿಕೆಟ್ ನಷ್ಟಕ್ಕೆ 267 ರನ್ ಕಲೆಹಾಕಿತ್ತು. ಭಾರತ ಪರ ಶಿಸ್ತಿನ ದಾಳಿ ಸಂಘಟಿಸಿದ ಶಾರ್ದೂಲ್ ಠಾಕೂರ್ 3 ವಿಕೆಟ್ ಪಡೆದರೆ, ಸಿದ್ದಾರ್ಥ್ ಕೌಲ್ 2 ವಿಕೆಟ್ ಪಡೆದು ಮಿಂಚಿದರು.
