ಇದೇ ತಿಂಗಳು 23 ರಿಂದ ಆರಂಭವಾಗಲಿರುವ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಗೂ ಮುನ್ನ ನಡೆದ ಅಭ್ಯಾಸ ಪಂದ್ಯದಲ್ಲಿ ಆಸೀಸ್ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಸಂಪೂರ್ಣ ವಿಫಲರಾದರು.

ಮುಂಬೈ(ಫೆ.19): ಮುಂಬೈ ಯುವ ಕ್ರಿಕೆಟಿಗ ಶ್ರೇಯಸ್ ಅಯ್ಯರ್ ಬಾರಿಸಿದ ಅಜೇಯ ದ್ವಿಶತಕ(202)ದ ನೆರವಿನಿಂದ ಆಸ್ಟ್ರೇಲಿಯಾ- ಭಾರತ ಎ ನಡುವಿನ ಅಭ್ಯಾಸ ಪಂದ್ಯವು ನಿರೀಕ್ಷೆಯಂತೆಯೇ ಡ್ರಾದಲ್ಲಿ ಅಂತ್ಯ ಕಂಡಿದೆ.

ಇಲ್ಲಿನ ಬಾರ್ಬೋನ್ ಕ್ರೀಡಾಂಗಣದಲ್ಲಿ ನಡೆದ ಮೂರು ದಿನಗಳ ಅಭ್ಯಾಸ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪ್ರವಾಸಿ ಆಸ್ಟ್ರೇಲಿಯಾ ತಂಡ 469 ರನ್'ಗಳ ಬೃಹತ್ ಮೊತ್ತ ಕಲೆಹಾಕಿತ್ತು. ನಂತರ ಬ್ಯಾಟಿಂಗಿಗಿಳಿದ ಭಾರತ ಎ ತಂಡ ಶ್ರೇಯಸ್ ಅಯ್ಯರ್ ಏಕಾಂಗಿ ಹೋರಾಟದ ನೆರವಿನಿಂದ 403 ರನ್'ಗಳಿಗೆ ಸರ್ವ ಪತನ ಕಂಡಿತು.

ಭಾರತ ಎ ಪರ ಅಜೇಯ ದ್ವಿಶತಕ ಸಿಡಿಸಿದ ಮುಂಬೈ ಮೂಲದ ಅಯ್ಯರ್ ವೃತ್ತಿ ಜೀವನದ ವಯುಕ್ತಿಕ ಗರಿಷ್ಟ ರನ್ ಗಳಿಸಿದ ದಾಖಲೆಗೂ ಪಾತ್ರರಾದರು. ಇನ್ನು ಇವರಿಗೆ ಉತ್ತಮ ಸಾಥ್ ನೀಡಿದ ಕನ್ನಡಿಗ ಸ್ಫೋಟಕ ಬ್ಯಾಟಿಂಗ್(74) ಮೂಲಕ ತಂಡದ ಮೊತ್ತ ಹೆಚ್ಚಿಸುವಲ್ಲಿ ನೆರವಾದರು.

66 ರನ್'ಗಳ ಮುನ್ನೆಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿದ ಆಸೀಸ್ ಪಡೆ 4 ವಿಕೆಟ್ ನಷ್ಟಕ್ಕೆ 110 ರನ್'ಗಳಿಸಿದ್ದಾಗ ಉಭಯ ತಂಡದ ನಾಯಕರು ಪಂದ್ಯ ಡ್ರಾ ಮಾಡಿಕೊಳ್ಳಲು ಸಮ್ಮತಿಸಿದರು.

ಆತಿಥೇಯರಿಗೆ ಈ ನಾಲ್ವರಿಂದ ನಿರಾಸೆ

ಇದೇ ತಿಂಗಳು 23 ರಿಂದ ಆರಂಭವಾಗಲಿರುವ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಗೂ ಮುನ್ನ ನಡೆದ ಅಭ್ಯಾಸ ಪಂದ್ಯದಲ್ಲಿ ಆಸೀಸ್ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಸಂಪೂರ್ಣ ವಿಫಲರಾದರು. ಮೊದಲ ಇನಿಂಗ್ಸ್'ನಲ್ಲಿ 25 ರನ್ ಬಾರಿಸಿದ್ದ ಎಡಗೈ ಬ್ಯಾಟ್ಸ್'ಮನ್'ನಿಂದ ಎರಡನೇ ಇನಿಂಗ್ಸ್'ನಲ್ಲಿ ಹೊರಹೊಮ್ಮಿದ್ದು ಕೇವಲ 35 ರನ್ ಮಾತ್ರ. ಹಾಗೆಯೇ ಮ್ಯಾಟ್ ರೆನ್'ಷಾ ಮೇಲೂ ಸಾಕಷ್ಟು ನಿರೀಕ್ಷೆಯಿತ್ತ. ಆದರೆ ಆ ನಿರೀಕ್ಷೆ ಹುಸಿಗೊಳಿಸಿದ ರೆನ್'ಷಾ ಎರಡೂ ಇನಿಂಗ್ಸ್'ನಿಂದ ಕಲೆಹಾಕಿದ ರನ್ ಕೇವಲ 21 ಮಾತ್ರ. ಇನ್ನು ಕಾಂಗರು ಪಡೆಯ ಬೌಲಿಂಗ್ ಆಧಾರಸ್ತಂಭ ಎಂದೇ ಗುರುತಿಸಿಕೊಂಡಿರುವ ನಾಥನ್ ಲಯನ್ ನಾಲ್ಕು ವಿಕೆಟ್ ಉರುಳಿಸಿದರೂ ಎದುರಾಳಿ ತಂಡಕ್ಕೆ ಬಿಟ್ಟುಕೊಟ್ಟಿದ್ದು ಬರೋಬ್ಬರಿ 162 ರನ್. ಇದರ ಜೊತೆಗೆ ಮತ್ತೊಬ್ಬ ಬೌಲರ್ ಓಕೆಫೆ 3 ವಿಕೆಟ್ ಪಡೆಯಲು 101 ರನ್'ಗಳನ್ನು ನೀಡಿ ತೀವ್ರ ನಿರಾಸೆ ಅನುಭವಿಸಿದರು.