ಬೇ ಓವಲ್[ಜ.28]: ಅನುಭವಿ ಬ್ಯಾಟ್ಸ್’ಮನ್ ರಾಸ್ ಟೇಲರ್[93], ವಿಕೆಟ್’ಕೀಪರ್ ಬ್ಯಾಟ್ಸ್’ಮನ್ ಟಾಮ್ ಲಾಥಮ್[51] ಆಕರ್ಷಕ ಬ್ಯಾಟಿಂಗ್ ಹೊರತಾಗಿಯೂ ಸಂಘಟಿತ ಬೌಲಿಂಗ್ ಪ್ರದರ್ಶನ ತೋರಿದ ಟೀಂ ಇಂಡಿಯಾ ಆತಿಥೇಯ ನ್ಯೂಜಿಲೆಂಡ್ ತಂಡವನ್ನು ಕೇವಲ 243 ರನ್’ಗಳಿಗೆ ಆಲೌಟ್ ಮಾಡುವಲ್ಲಿ ಯಶಸ್ವಿಯಾಗಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ನ್ಯೂಜಿಲೆಂಡ್ ಮತ್ತೊಮ್ಮೆ ಉತ್ತಮ ಆರಂಭ ಪಡೆಯಲು ವಿಫಲವಾಯಿತು. ತಂಡದ ಮೊತ್ತ 26 ರನ್’ಗಳಾಗುವಷ್ಟರಲ್ಲಿ ಆರಂಭಿಕ ಬ್ಯಾಟ್ಸ್’ಮನ್’ಗಳು ಪೆವಿಲಿಯನ್ ಸೇರಿದರು. ನಾಯಕ ವಿಲಿಯಮ್ಸನ್ ಆಟ ಕೇವಲ 28 ರನ್’ಗಳಿಗೆ ಸೀಮಿತವಾಯಿತು. ಹೆನ್ರಿ ನಿಕೋಲಸ್ ಹಾಗೂ ಮಿಚೆಲ್ ಸ್ಯಾಂಟರ್ ಎರಡಂಕಿ ಮೊತ್ತ ಮುಟ್ಟಲು ಹಾರ್ದಿಕ್ ಪಾಂಡ್ಯ ಅವಕಾಶ ನೀಡಲಿಲ್ಲ.

ಆಸರೆಯಾದ ಟೇಲರ್-ಲಾಥಮ್: ತಂಡದ ಮೊತ್ತ 59 ರನ್’ಗಳಾಗುವಷ್ಟರಲ್ಲಿ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ನ್ಯೂಜಿಲೆಂಡ್ ತಂಡಕ್ಕೆ ಅನುಭವಿ ಬ್ಯಾಟ್ಸ್’ಮನ್ ಟೇಲರ್ ಹಾಗೂ ಲಾಥಮ್ ಆಸರೆಯಾದರು. ಮೊದಲೆರಡು ಪಂದ್ಯಗಳಲ್ಲಿ ಅರ್ಧಶತಕ ಸಿಡಿಸಲು ವಿಫಲವಾಗಿದ್ದ ಟೇಲರ್ ಕೊನೆಗೂ ಅರ್ಧಶತಕ ಸಿಡಿಸಿದರು. ಟೇಲರ್’ಗೆ ಲಾಥಮ್ ಉತ್ತಮ ಸಾಥ್ ನೀಡಿದರು. ಈ ಜೋಡಿ ನಾಲ್ಕನೇ ವಿಕೆಟ್’ಗೆ 119 ರನ್’ಗಳ ಜತೆಯಾಟವಾಡುವ ಮೂಲಕ ಆಸರೆಯಾದರು. 

ಮಿಂಚಿದ ಬೌಲರ್’ಗಳು: ಟೀಂ ಇಂಡಿಯಾದ ಬೌಲರ್’ಗಳು ಈ ಸರಣಿಯಲ್ಲಿ ಸತತ ಮೂರನೇ ಬಾರಿಗೆ ಕಿವೀಸ್ ತಂಡವನ್ನು ಆಲೌಟ್ ಮಾಡುವಲ್ಲಿ ಯಶಸ್ವಿಯಾದರು. ಶಮಿ ತಾವೆಸೆದ ಮೊದಲ ಓವರ್’ನಲ್ಲೇ ಮನ್ರೋ ವಿಕೆಟ್ ಪಡೆದರು. ಶಮಿ ಮೂರು ವಿಕೆಟ್ ಕಬಳಿಸಿದರೆ, ಭುವನೇಶ್ವರ್ ಕುಮಾರ್, ಹಾರ್ದಿಕ್ ಪಾಂಡ್ಯ ಹಾಗೂ ಯಜುವೇಂದ್ರ ಚೆಹಲ್ ತಲಾ 2 ವಿಕೆಟ್ ಪಡೆದು ಮಿಂಚಿದರು.