ರಿಪನ್ ಚೌಧರಿಯನ್ನು ಪೊಲೀಸರು ಬಂಧಿಸಿದ್ದು, ಆತನ ಮೇಲೆ ಐಪಿಸಿ ಸೆಕ್ಷನ್ 120(B), 294 ಅನ್ವಯ ಪ್ರಕರಣ ದಾಖಲಿಸಿದ್ದಾರೆ.

ಕರಾಚಿ(ಡಿ.21): ತಾವು ಕ್ರಿಕೆಟ್ ಆಡುವಾಗ ಧರಿಸುವ ದಿರಿಸನ್ನೇ ಹೋಲುವ ಜೆರ್ಸಿಯನ್ನು ತೊಟ್ಟಿದ್ದ ಕಾರಣಕ್ಕಾಗಿ ಅಸ್ಸಾಂನಲ್ಲಿ ಬಂಧನಕ್ಕೊಳಗಾಗಿರುವ ಭಾರತೀಯ ನಾಗರಿಕ ರಿಪನ್ ಚೌಧರಿ ಎಂಬಾತನ ಪರವಾಗಿ ಪಾಕಿಸ್ತಾನದ ಕ್ರಿಕೆಟಿಗ ಶಾಹೀದ್ ಅಫ್ರಿದಿ ದನಿಯೆತ್ತಿದ್ದಾರೆ.

ರಿಪನ್ ಚೌಧರಿಯನ್ನು ಪೊಲೀಸರು ಬಂಧಿಸಿದ್ದು, ಆತನ ಮೇಲೆ ಐಪಿಸಿ ಸೆಕ್ಷನ್ 120(B), 294 ಅನ್ವಯ ಪ್ರಕರಣ ದಾಖಲಿಸಿದ್ದಾರೆ.

ಬಂಧನದ ಬಗ್ಗೆ ಪಾಕಿಸ್ತಾನದ ‘ಜಂಗ್’ ಎಂಬ ಪತ್ರಿಕೆಯಲ್ಲಿ ಬಂದ ವರದಿಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘‘ಇದು ದುರದೃಷ್ಟಕರ. ಇಲ್ಲೂ (ಪಾಕಿಸ್ತಾನ) ಭಾರತೀಯ ಕ್ರಿಕೆಟ್ ಅಭಿಮಾನಿಗಳನ್ನು ಸಾಕಷ್ಟಿದ್ದಾರೆ. ಹಾಗೆಂದ ಮಾತ್ರಕ್ಕೆ ಅವರನ್ನು ಬಂಧಿಸುವುದು ಸರಿಯೇ? ಭಾರತದಲ್ಲಿ ಇಂಥ ವಿಚಾರಗಳಿಗೆ ರಾಜಕೀಯ ಬಣ್ಣ ಬಳಿಯಲಾಗುತ್ತಿದೆ’’ ಎಂದಿದ್ದಾರಲ್ಲದೆ, ಈ ಪ್ರಕರಣವನ್ನು ಭಾರತದ ಪ್ರಧಾನಿ ಮೋದಿ ಗಮನಕ್ಕೆ ತರುವುದಾಗಿ ಹೇಳಿದ್ದಾರೆ.

ಕೆಲದಿನಗಳ ಹಿಂದಷ್ಟೇ ಭಾರತ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅಭಿಮಾನಿಯೊಬ್ಬ ತನ್ನ ಮನೆಯ ಮೇಲೆ ಭಾರತದ ತ್ರಿವರ್ಣ ಧ್ವಜ ಹಾರಿಸಿದ್ದಕ್ಕಾಗಿ ಅಲ್ಲಿನ ನ್ಯಾಯಾಲಯವು 10 ವರ್ಷ ಜೈಲು ಶಿಕ್ಷೆ ವಿಧಿಸಿದ್ದನ್ನಿಲ್ಲಿ ಸ್ಮರಿಸಬಹುದು.