ಕೊಹ್ಲಿ ಪಡೆ ಮುಂದಿನ 3 ಪಂದ್ಯಗಳನ್ನು ಗೆದ್ದರೆ ಸರಣಿ ಗೆಲುವು ಸಾಧ್ಯ. ಸರಣಿ ಉಳಿಸಿಕೊಳ್ಳಲೂ 2 ಪಂದ್ಯಗಳನ್ನು ಜಯಿಸಲೇಬೇಕಾದ ಅನಿವಾರ್ಯತೆಯಲ್ಲಿದೆ ಕೊಹ್ಲಿ ಪಡೆ.

ಬೆಂಗಳೂರು(ಮಾ.03): ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ಎದುರು ಹೀನಾಯ ಸೋಲುಂಡಿದ್ದ ಕೊಹ್ಲಿ ನೇತೃತ್ವದ ಭಾರತ ತಂಡ, ಶನಿವಾರದಿಂದ ಆರಂಭವಾಗುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಸ್ಟೀವನ್ ಸ್ಮಿತ್ ಸಾರಥ್ಯದ ಆಸ್ಟ್ರೇಲಿಯಾಗೆ ತಿರುಗೇಟು ನೀಡುವ ಪಣದೊಂದಿಗೆ ಪಂದ್ಯಕ್ಕೆ ಅಣಿಯಾಗಿದೆ.

ಇಲ್ಲಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯಕ್ಕೆ ಸಕಲ ರೀತಿಯಲ್ಲೂ ಸಜ್ಜಾಗಿರುವ ಭಾರತ ತಂಡ ಸರಣಿಯಲ್ಲಿ ಸಮಬಲ ಸಾಧಿಸುವ ಗುರಿ ಹೊತ್ತಿದೆ. ಕೊಹ್ಲಿ ಪಡೆ ಮುಂದಿನ 3 ಪಂದ್ಯಗಳನ್ನು ಗೆದ್ದರೆ ಸರಣಿ ಗೆಲುವು ಸಾಧ್ಯ. ಸರಣಿ ಉಳಿಸಿಕೊಳ್ಳಲೂ 2 ಪಂದ್ಯಗಳನ್ನು ಜಯಿಸಲೇಬೇಕಾದ ಅನಿವಾರ್ಯತೆಯಲ್ಲಿದೆ ಕೊಹ್ಲಿ ಪಡೆ.

ಪುಣೆಯಲ್ಲಿ ನಡೆದಿದ್ದ ಮೊದಲ ಪಂದ್ಯದಲ್ಲಿ ಭಾರತ ತಂಡ 333 ರನ್‌'ಗಳ ಸೋಲು ಕಂಡಿತ್ತು. ಆಸೀಸ್ ಸ್ಪಿನ್ನರ್ ಸ್ಟೀವ್ ಒ ಕೀಫೆ 70ರನ್‌'ಗಳಿಗೆ 12 ವಿಕೆಟ್ ಪಡೆದು ಮಿಂಚಿದ್ದರು. ಈ ಸೋಲಿನೊಂದಿಗೆ ಭಾರತದ ಸತತ 20ನೇ ಜಯಕ್ಕೆ ಆಸೀಸ್ ಅಡ್ಡಗಾಲು ಹಾಕಿತ್ತು. ಆದರೂ ಭಾರತ ತಂಡ ಐಸಿಸಿ ಟೆಸ್ಟ್ ಶ್ರೇಯಾಂಕ ಪಟ್ಟಿಯಲ್ಲಿ ನಂ.1 ಸ್ಥಾನ ಕಾಯ್ದುಕೊಂಡಿದೆ.

ಇನ್ನು ಆಸ್ಟ್ರೇಲಿಯಾ ತಂಡ ಮೊದಲ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಆತ್ಮವಿಶ್ವಾಸದಲ್ಲಿದೆ. ಅಲ್ಲದೇ ಪಿಚ್ ತಿರುವಿನ ಬಗ್ಗೆ ಅರಿತಿರುವ ಆಸೀಸ್ ಎಚ್ಚರಿಕೆಯ ಹೆಜ್ಜೆಯನ್ನಿರಿಸಲು ರಣತಂತ್ರ ರೂಪಿಸಿದೆ. ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೇರುವ ಹುಮ್ಮಸ್ಸಿನಲ್ಲಿರುವ ಸ್ಮಿತ್ ಪಡೆ ಇನ್ನುಳಿದ 3 ಪಂದ್ಯಗಳಲ್ಲಿ ಗೆಲುವು ಸಾಧಿಸುವ ವಿಶ್ವಾಸ ಹೊಂದಿದೆ. ಇದರೊಂದಿಗೆ 4 ವರ್ಷಗಳ ಹಿಂದಿನ ಸೇಡನ್ನು ತೀರಿಸಿಕೊಳ್ಳುವ ತವಕವೂ ಅದರಲ್ಲಿದೆ.