Asianet Suvarna News Asianet Suvarna News

ಫ್ರೆಂಚ್ ಓಪನ್ ಟೂರ್ನಿಯಿಂದ ದಿಢೀರ್ ಹೊರನಡೆದ ಸೆರೆನಾ

ತಾಯಿಯಾದ ಬಳಿಕ ಮೊದಲ ಬಾರಿಗೆ ಟೆನಿಸ್ ಅಂಗಳಕ್ಕೆ ಇಳಿದ ಸೆರೆನಾ ವಿಲಿಯಮ್ಸ್, ಗಾಯದ ಸಮಸ್ಯೆಯಿಂದ ಅನಿವಾರ್ಯವಾಗಿ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಮರಿಯಾ ಶರಪೋವಾ ವಿರುದ್ಧದ ಪಂದ್ಯಕ್ಕೂ ಮುನ್ನ ಸೆರೆನಾ ಸುದ್ದಿಗೋಷ್ಠಿ ಕರೆದು ಟೂರ್ನಿಗೆ ಗುಡ್‌ಬೈ ಹೇಳಿದ್ದಾರೆ.

Serena Williams pulls out with injury before Maria Sharapova match

ಪ್ಯಾರಿಸ್(ಜೂನ್.5): ಫ್ರೆಂಚ್ ಓಪನ್ ಟೂರ್ನಿ ಗೆಲ್ಲೋ ನೆಚ್ಚಿನ ಟೆನಿಸ್ ತಾರೆಯಾಗಿದ್ದ ಅಮೇರಿಕಾದ ಸೆರೆನಾ ವಿಲಿಯಮ್ಸ್, ಭುಜದ ನೋವಿನಿಂದ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ.   ತಾಯಿಯಾದ ಬಳಿಕ ಮೊದಲ ಬಾರಿಗೆ ಗ್ರ್ಯಾಂಡ್ ಸ್ಲಾಂನಲ್ಲಿ ಕಣಕ್ಕಿಳಿದಿದ್ದ ಸೆರೆನಾ ವಿಲಿಯಮ್ಸ್, ಫ್ರೆಂಚ್ ಓಪನ್ ಗೆಲ್ಲುವ ಮೂಲಕ ಟೆನಿಸ್‌ಗೆ ಭರ್ಜರಿಯಾಗಿ ವಾಪಸಾಗುವ ಕನಸು ಕಾಣುತ್ತಿದ್ದರು. ಸೆರೆನಾ ಕನಸು ಭಗ್ನಗೊಂಡಿದೆ.

ಜೂಲಿಯಾ ಜಾರ್ಜ್ಸ್ ವಿರುದ್ಧ ಮಹಿಳಾ ಸಿಂಗಲ್ಸ್ 3ನೇ ಸುತ್ತಿನ ಪಂದ್ಯದ ವೇಳೆ ಸೆರೆನಾ ಭುಜದ ಗಾಯಕ್ಕೆ ತುತ್ತಾಗಿದ್ದಾರೆ. ಆದರೂ ಸಹೋದರಿ ವೀನಸ್ ವಿಲಿಯಮ್ಸ್ ಜತೆ ಡಬಲ್ಸ್ ಪಂದ್ಯದಲ್ಲಿ ಆಡಿದ್ದರು. ಸೋಮವಾರ ಸಿಂಗಲ್ಸ್ 4 ನೇ ಸುತ್ತಿನ ಪಂದ್ಯದಲ್ಲಿ ರಷ್ಯಾದ ಮರಿಯಾ ಶರಪೋವಾ ವಿರುದ್ಧ ಸೆರೆನಾ ಕಣಕ್ಕಿಳಿಯಬೇಕಿತ್ತು. ಈ ಪಂದ್ಯ ಟೆನಿಸ್ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಹುಟ್ಟಿಹಾಕಿತ್ತು. ಆದರೆ ಸೆರೆನಾ ದಿಢೀರ್ ಪತ್ರಿಕಾಗೋಷ್ಠಿ ಕರೆದು,ತಾವು ಪಂದ್ಯಾವಳಿಯಿಂದ ಹೊರ ನಡೆಯುತ್ತಿರುವುದಾಗಿ ಘೋಷಿಸಿದರು. ಸರ್ವ್ ಮಾಡಲು ಅಸಾಧ್ಯ: ಭುಜದಲ್ಲಿ ಬಲವಾದ ನೋವು ಕಾಣಿಸಿಕೊಂಡಿದ್ದು, ಸರ್ವ್ ಮಾಡಲು ಸಾಧ್ಯವೇ ಇಲ್ಲ ಎನ್ನುವ ಪರಿಸ್ಥಿತಿ ಎದುರಾದ ಕಾರಣ, ಹಿಂದೆ ಸರಿಯುವ ನಿರ್ಧಾರ ಕೈಗೊಂಡಿದ್ದಾಗಿ ಸೆರೆನಾ ಹೇಳಿದರು.

‘ನಾನು ಪ್ಯಾರಿಸ್‌ನಲ್ಲಿ ಮಂಗಳವಾರ ಎಂಆರ್‌ಐ ಸ್ಕ್ಯಾನಿಂಗ್‌ಗೆ ಒಳಪಡುತ್ತೇನೆ. ಗಾಯದ ಪ್ರಮಾಣ ಎಷ್ಟಿದೆ ಎನ್ನುವುದನ್ನು ನೋಡಿಕೊಂಡು ಮುಂದಿನ ಚಿಕಿತ್ಸೆ ಬಗ್ಗೆ ತೀರ್ಮಾನಿಸಲಿದ್ದೇನೆ. ಎಷ್ಟು ಸಾಧ್ಯವೋ ಅಷ್ಟು ತಜ್ಞರನ್ನು ಭೇಟಿ ಮಾಡಿ ಅವರಿಂದ ಸಲಹೆ ಪಡೆದುಕೊಳ್ಳಲಿದ್ದೇನೆ’ ಎಂದ ಸೆರೆನಾ ಹೇಳಿದರು.  
 

2017ರ ಆಸ್ಟ್ರೇಲಿಯನ್ ಓಪನ್ ಬಳಿಕ ಮೊದಲ ಬಾರಿಗೆ ಗ್ರ್ಯಾಂಡ್ ಸ್ಲಾಂನಲ್ಲಿ ಕಣಕ್ಕಿಳಿದ ಸೆರನಾ, ಮೊದಲ ಮೂರು ಸುತ್ತುಗಳಲ್ಲಿ ತೋರಿದ ಪ್ರದರ್ಶನ ಅವರ ಮೇಲಿನ ನಿರೀಕ್ಷೆ ಹೆಚ್ಚಿಸಿತ್ತು. ಮರಿಯಾ ಶರಪೋವಾ ವಿರುದ್ಧ ಸತತ 18 ಪಂದ್ಯಗಳನ್ನು ಗೆದ್ದ ದಾಖಲೆ ಹೊಂದಿರುವ ಸೆರನಾ, ಒಟ್ಟಾರೆ 21 ಪಂದ್ಯಗಳಲ್ಲಿ 19-2 ಗೆಲುವು ಸೋಲಿನ ದಾಖಲೆ ಹೊಂದಿದ್ದಾರೆ. ಹೀಗಾಗಿ ರುವ ಸೆರೆನಾ, 4ನೇ ಸುತ್ತಿನ ಪಂದ್ಯ ಗೆದ್ದು ಕ್ವಾರ್ಟರ್ ಫೈನಲ್‌ಗೇರುವ ನೆಚ್ಚಿನ ಆಟಗಾರ್ತಿ ಎನಿಸಿಕೊಂಡಿದ್ದರು. ಆದರೆ ಗಾಯಗೊಂಡಿರುವ ಕಾರಣ, ಮುಂದಿನ ತಿಂಗಳು ಆರಂಭಗೊಳ್ಳಲಿರುವ ವಿಂಬಲ್ಡನ್ ಗ್ರ್ಯಾಂಡ್‌ಸ್ಲಾಂನಲ್ಲಿ ಕಣಕ್ಕಿಳಿಯುವುದು ಅನುಮಾನವೆನಿಸಿದೆ. 
 

Follow Us:
Download App:
  • android
  • ios