US Open 2022 ಒನ್ಸ್ ಜಬುರ್ ಮಣಿಸಿದ ಇಗಾ ಸ್ವಿಯಾಟೆಕ್ ಯುಎಸ್ ಓಪನ್ ಚಾಂಪಿಯನ್..!
ಇಗಾ ಸ್ವಿಯಾಟೆಕ್ ನೂತನ ಯುಎಸ್ ಓಪನ್ ಮಹಿಳಾ ಸಿಂಗಲ್ಸ್ ಚಾಂಪಿಯನ್
21 ವರ್ಷದ ಪೋಲೆಂಡ್ ಆಟಗಾರ್ತಿಗೆ ಚೊಚ್ಚಲ ಯುಎಸ್ ಓಪನ್ ಗರಿ
ಮತ್ತೊಮ್ಮೆ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡ ಒನ್ಸ್ ಜಬುರ್
ನ್ಯೂಯಾರ್ಕ್(ಸೆ.11): ವಿಶ್ವ ನಂ.1 ಮಹಿಳಾ ಸಿಂಗಲ್ಸ್ ಟೆನಿಸ್ ಆಟಗಾರ್ತಿ ಇಗಾ ಸ್ವಿಯಾಟೆಕ್, ಚೊಚ್ಚಲ ಬಾರಿಗೆ ಯುಎಸ್ ಓಪನ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಪೋಲೆಂಡ್‌ನ ಇಗಾ ಸ್ವಿಯಾಟೆಕ್, ಟ್ಯುನೇಷಿಯಾದ ಒನ್ಸ್ ಜಬುರ್ ಎದುರು 6-2, 7-6(5) ನೇರ ಸೆಟ್‌ಗಳಲ್ಲಿ ಗೆಲುವು ದಾಖಲಿಸುವ ಮೂಲಕ ಯುಎಸ್ ಓಪನ್ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ. ಇದು ಇಗಾ ಸ್ವಿಯಾಟೆಕ್ ಜಯಿಸಿದ ಯುಎಸ್ ಓಪನ್‌ನ ಮೊದಲ ಹಾಗೂ ಒಟ್ಟಾರೆ ಮೂರನೇ ಗ್ರ್ಯಾನ್ ಸ್ಲಾಂ ಪ್ರಶಸ್ತಿಯಾಗಿದೆ.
ಟೂರ್ನಿಯುದ್ದಕ್ಕೂ ಭರ್ಜರಿ ಪ್ರದರ್ಶನದ ಮೂಲಕ ಫೈನಲ್‌ಗೆ ಲಗ್ಗೆಯಿಟ್ಟಿದ್ದ ಇಗಾ ಸ್ವಿಯಾಟೆಕ್, ಎರಡನೇ ಸೆಟ್‌ನ ಟೈಬ್ರೇಕರ್‌ನಲ್ಲಿ ಗೆಲುವು ಸಾಧಿಸುತ್ತಿದ್ದಂತೆಯೇ ಕೋರ್ಟ್‌ನಲ್ಲಿಯೇ ಅಂಗಾತ ಮಲಗಿಕೊಂಡು ಕೆಲ ಸೆಕೆಂಡ್‌ಗಳ ಕಾಲ ಮುಖ ಮುಚ್ಚಿಕೊಂಡು ಸಂಭ್ರಮ ಪಟ್ಟರು. ಯುಎಸ್ ಓಪನ್ ಫೈನಲ್‌ನಲ್ಲಿ 5ನೇ ಶ್ರೇಯಾಂಕಿತ ಆಟಗಾರ್ತಿ ಒನ್ಸ್ ಜಬುರ್ ಎರಡನೇ ಸೆಟ್‌ನಲ್ಲಿ ಕಠಿಣ ಪೈಪೋಟಿ ನೀಡಿದರಾದರೂ, ಗೆಲುವು ಪೋಲೆಂಡ್ ಆಟಗಾರ್ತಿಯ ಪಾಲಾಯಿತು.
US Open 2022 ಪ್ರಶಸ್ತಿಗಾಗಿ ಆಲ್ಕರಜ್ vs ರುಡ್ ಫೈನಲ್ ಫೈಟ್
ಯುಎಸ್ ಓಪನ್ ಟೆನಿಸ್ ಗ್ರ್ಯಾನ್ ಸ್ಲಾಂ ಜಯಿಸಿದ ಬಳಿಕ, ಕೋರ್ಟ್‌ನಲ್ಲೇ ಮಾತನಾಡಿದ ಇಗಾ ಸ್ವಿಯಾಟೆಕ್, ನನಗೆ ಈ ರೀತಿ ಸಮಚಿತ್ತದಿಂದ ಹಾಗೂ ಗುರಿಯತ್ತ ಗಮನ ಹರಿಸಿದ್ದರಿಂದ ಇದು ಸಾಕಾರವಾಗಿದೆ ಎಂದು ಹೇಳಿದ್ದಾರೆ. ಇದು ನ್ಯೂಯಾರ್ಕ್ ನಗರ, ಇಂದೊಂದು ರೀತಿ ಕ್ರೇಜಿ ಅನುಭವ. ಈ ಗೆಲುವನ್ನು ಹೆಮ್ಮೆಯಿಂದ ಸ್ವೀಕರಿಸುತ್ತಿದ್ದೇನೆ ಎಂದು ಪೋಲೆಂಡ್ ಆಟಗಾರ್ತಿ ಹೇಳಿದ್ದಾರೆ.
ಈಗಾಗಲೇ ಎರಡು ಬಾರಿ ಫ್ರೆಂಚ್ ಓಪನ್ ಟೆನಿಸ್ ಗ್ರ್ಯಾನ್ ಸ್ಲಾಂ ಜಯಿಸಿರುವ ಇಗಾ ಸ್ವಿಯಾಟೆಕ್, ಇದೇ ಮೊದಲ ಬಾರಿಗೆ ಹಾರ್ಡ್ ಕೋರ್ಟ್‌ನಲ್ಲಿ ಟೆನಿಸ್ ಗ್ರ್ಯಾನ್ ಸ್ಲಾಂ ಜಯಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ 21 ವರ್ಷದ ಇಗಾ ಸ್ವಿಯಾಟೆಕ್, ಯುಎಸ್ ಓಪನ್ ಟೆನಿಸ್ ಟೂರ್ನಿ ಜಯಿಸಿದ ಪೋಲೆಂಡ್‌ನ ಮೊದಲ ಮಹಿಳಾ ಸಿಂಗಲ್ಸ್ ಆಟಗಾರ್ತಿ ಎನ್ನುವ ಕೀರ್ತಿಗೂ ಭಾಜನರಾದರು.
ಇನ್ನು ಯುಎಸ್ ಓಪನ್ ಫೈನಲ್‌ನಲ್ಲಿ ಟ್ಯುನೇಷಿಯಾದ ಒನ್ಸ್ ಜಬುರ್ ಸೋಲು ಅನುಭವಿಸಿದರೂ ಸಹಾ ವಿಶ್ವ ಶ್ರೇಯಾಂಕದಲ್ಲಿ ಎರಡನೇ ಸ್ಥಾನಕ್ಕೇರುವಲ್ಲಿ ಯಶಸ್ವಿಯಾಗಿದ್ದಾರೆ. ಒನ್ಸ್ ಜಜುರ್, ವಿಂಬಲ್ಡನ್ ಟೆನಿಸ್ ಗ್ರ್ಯಾನ್ ಸ್ಲಾಂನಲ್ಲಿ ಫೈನಲ್ ಪ್ರವೇಶಿಸುವ ಮೂಲಕ ಈ ಸಾಧನೆ ಮಾಡಿದ ಅರಬ್‌ನ ಮೊದಲ ಮಹಿಳಾ ಸಿಂಗಲ್ಸ್ ಆಟಗಾರ್ತಿ ಎನ್ನುವ ಕೀರ್ತಿಗೆ ಪಾತ್ರರಾಗಿದ್ದರು. ಇದಾದ ಬಳಿಕ ಯುಎಸ್ ಓಪನ್ ಟೆನಿಸ್ ಗ್ರ್ಯಾನ್ ಸ್ಲಾಂನಲ್ಲಿ ಫೈನಲ್ ಪ್ರವೇಶಿಸುವ ಮೂಲಕ ಈ ಸಾಧನೆ ಮಾಡಿದ ಆಫ್ರಿಕಾದ ಮೊದಲ ಮಹಿಳಾ ಸಿಂಗಲ್ಸ್ ಆಟಗಾರ್ತಿ ಎನ್ನುವ ಕೀರ್ತಿಗೆ ಪಾತ್ರರಾಗಿದ್ದಾರೆ.
ನಾನು ಮತ್ತಷ್ಟು ತಲೆಮಾರುಗಳನ್ನು ಟೆನಿಸ್‌ನತ್ತ ಒಲವು ತೋರಿಸಲು ಪ್ರೇರೇಪಿಸುವ ವಿಶ್ವಾಸವಿದೆ. ಇದು ಕೇವಲ ಆರಂಭವಷ್ಟೇ, ಇನ್ನೂ ಸಾಕಷ್ಟು ದೂರ ಸಾಗಬೇಕಿದೆ ಎಂದು ಒನ್ಸ್ ಜಬುರ್ ಹೇಳಿದ್ದಾರೆ.