ಪ್ರಸ್ತುತ ನಡೆಯುತ್ತಿರುವ ಭಾರತ- ಇಂಗ್ಲೆಂಡ್ ಕ್ರಿಕೆಟ್ ಸರಣಿಯಲ್ಲಿ ಉಳಿದಿರುವ 2 ಟೆಸ್ಟ್, 3 ಏಕದಿನ ಹಾಗೂ 3 ಟಿ-20 ಪಂದ್ಯಕ್ಕೆ ರೂ.2.83 ಕೋಟಿಯನ್ನು ವ್ಯಯ ಮಾಡಲು ಸುಪ್ರೀಂಕೋರ್ಟ್ ಬಿಸಿಸಿಐಗೆ ಅನುಮತಿ ನೀಡಿದೆ.

ನವದೆಹಲಿ (ಡಿ.07): ಪ್ರಸ್ತುತ ನಡೆಯುತ್ತಿರುವ ಭಾರತ- ಇಂಗ್ಲೆಂಡ್ ಕ್ರಿಕೆಟ್ ಸರಣಿಯಲ್ಲಿ ಉಳಿದಿರುವ 2 ಟೆಸ್ಟ್, 3 ಏಕದಿನ ಹಾಗೂ 3 ಟಿ-20 ಪಂದ್ಯಕ್ಕೆ ರೂ.2.83 ಕೋಟಿಯನ್ನು ವ್ಯಯ ಮಾಡಲು ಸುಪ್ರೀಂಕೋರ್ಟ್ ಬಿಸಿಸಿಐಗೆ ಅನುಮತಿ ನೀಡಿದೆ.

ಲೋಧಾ ಸಮಿತಿಯ ಶಿಫಾರಸ್ಸುಗಳನ್ನು ಜಾರಿಗೊಳಿಸಲು ಸಹಕರಿಸದಿರುವ ರಾಜ್ಯ ಅಸೋಸಿಯೇಶನ್ ಗೆ ಯಾವುದೇ ಅನುದಾನ ನೀಡಬೇಡಿ ಎಂದು ಸುಪ್ರೀಂಕೋರ್ಟ್ ಬಿಸಿಸಿಐಗೆ ಸೂಚಿಸಿದೆ.

ಇಂಗ್ಲೆಂಡ್ ವಿರುದ್ಧ ಮುಂಬೈ ಹಾಗೂ ಚೆನ್ನೈನಲ್ಲಿ ನಡೆಯಲಿರುವ ಟೆಸ್ಟ್ ಗಳನ್ನು ಆಯೋಜಿಸಲು ರೂ.1.33 ಕೋಟಿ ಹಣವನ್ನು ಬಿಡುಗಡೆ ಮಾಡುವಂತೆ ಕೋರಿ ಬಿಸಿಸಿಐ ಸುಪ್ರೀಂನಲ್ಲಿ ಮದ್ಯಂತರ ಮನವಿಯನ್ನು ಸಲ್ಲಿಸಿತ್ತು.

ವಿಚಾರಣೆ ನಡೆಸಿರುವ ನ್ಯಾಯಾಲಯ ಸರಣಿಯಲ್ಲಿ ಉಳಿದಿರುವ ಒಟ್ಟಾರೆ ಪಂದ್ಯಗಳನ್ನಾಡಲು ರೂ.2.83 ಕೋಟಿಗಳನ್ನು ವ್ಯಯಿಸಲು ಬಿಸಿಸಿಐಗೆ ಇವತ್ತು ಅನುಮತಿ ನೀಡಿದೆ.

ನಾಳೆಯಿಂದ 4 ನೇ ಟೆಸ್ಟ್ ಪ್ರಾರಂಭವಾಗಲಿದ್ದು, ಅಂತಿಮ ಪಂದ್ಯ ಚೆನ್ನೈನಲ್ಲಿ ಡಿ. 16 ರಿಂದ ಪ್ರಾರಂಭವಾಗಲಿದೆ.