ಹೈದ್ರಾಬಾದಲ್ಲಿ ವಿದಾಯದ ಪಂದ್ಯವಾಡಿದ ಸಾನಿಯಾ ಮಿರ್ಜಾ..! ತವರಿನಲ್ಲಿ ವೃತ್ತಿಬದುಕಿಗೆ ಅಧಿಕೃತ ತೆರೆ
ತವರಿನಲ್ಲಿ ವಿದಾಯದ ಪಂದ್ಯವನ್ನಾಡಿದ ಸಾನಿಯಾ ಮಿರ್ಜಾ
ಎರಡು ದಶಕಗಳ ಸುದೀರ್ಘ ಟೆನಿಸ್ ಬದುಕಿಗೆ ಸಾನಿಯಾ ಗುಡ್‌ಬೈ
36 ವರ್ಷದ ಸಾನಿಯಾ ವಿದಾಯದ ಪಂದ್ಯದಲ್ಲಿ ಹಲವು ಸೆಲಿಬ್ರಿಟಿಗಳು ಭಾಗಿ
ಹೈದರಾಬಾದ್(ಮಾ.06): ಇತ್ತೀಚೆಗಷ್ಟೇ ದುಬೈ ಓಪನ್ ಮೂಲಕ ಸುದೀರ್ಘ ಅವಧಿಯ ಟೆನಿಸ್ ವೃತ್ತಿಬದುಕಿಗೆ ತೆರೆ ಎಳೆದಿದ್ದ ಭಾರತದ ದಿಗ್ಗಜೆ ಸಾನಿಯಾ ಮಿರ್ಜಾ ಭಾನುವಾರ ತವರೂರು ಹೈದರಾಬಾದ್ನಲ್ಲಿ ಪ್ರದರ್ಶನ ಪಂದ್ಯವಾಡಿ ಅಧಿಕೃತವಾಗಿ ನಿವೃತ್ತಿ ಘೋಷಿಸಿದರು.
2 ದಶಕಗಳ ಹಿಂದೆ ಇಲ್ಲಿನ ಲಾಲ್ ಬಹದೂರ್ ಕ್ರೀಡಾಂಗಣದಲ್ಲೇ ಸಾನಿಯಾ ತಮ್ಮ ಚೊಚ್ಚಲ ಡಬ್ಲ್ಯುಟಿಎ ಸಿಂಗಲ್ಸ್ ಪ್ರಶಸ್ತಿ ಗೆದ್ದಿದ್ದರು. ಅದೇ ಕ್ರೀಡಾಂಗಣದಲ್ಲಿ ಕೊನೆ ಪಂದ್ಯವಾಡಿದ 36 ವರ್ಷದ ಸಾನಿಯಾಗೆ ಅಭಿಮಾನಿಗಳು ಜೈಕಾರ ಕೂಗಿ ವಿದಾಯ ಹೇಳಿದರು. ಈ ವೇಳೆ ಟೆನಿಸಿಗ ರೋಹಣ್ ಬೋಪಣ್ಣ, ಮಾಜಿ ಕ್ರಿಕೆಟಿಗರಾದ ಯುವರಾಜ್ ಸಿಂಗ್, ಅಜರುದ್ದೀನ್, ಕೇಂದ್ರದ ಮಾಜಿ ಕ್ರೀಡಾ ಸಚಿವ ಕಿರಣ್ ರಿಜಿಜು ಸೇರಿದಂತೆ ಪ್ರಮುಖರು ಹಾಜರಿದ್ದರು.
2003ರಲ್ಲಿ ವೃತ್ತಿಪರ ಟೆನಿಸ್‌ಗೆ ಕಾಲಿಟ್ಟಿದ್ದ ಸಾನಿಯಾ, 2013ರ ವರೆಗೂ ಸಿಂಗಲ್ಸ್‌ನಲ್ಲೂ ಸ್ಪರ್ಧಿಸುತ್ತಿದ್ದರು. ಆದರೆ ಅವರಿಗೆ ಹೆಚ್ಚು ಯಶಸ್ಸು ದೊರೆತಿದ್ದು ಡಬಲ್ಸ್ ವಿಭಾಗದಲ್ಲಿ. ಮಹಿಳಾ ಡಬಲ್ಸ್ ಹಾಗೂ ಮಿಶ್ರ ಡಬಲ್ಸ್‌ನಲ್ಲಿ ಸಾನಿಯಾ ತಲಾ 3 ಗ್ರ್ಯಾನ್ ಸ್ಲಾಂ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಮಹಿಳಾ ಡಬಲ್ಸ್‌ನಲ್ಲಿ ವಿಶ್ವ ನಂ.1 ಸ್ಥಾನವನ್ನೂ ಅಲಂಕರಿಸಿದ್ದರು.
ಸ್ವಿಜರ್‌ಲೆಂಡ್‌ನ ಮಾರ್ಟಿನಾ ಹಿಂಗಿಸ್ ಜೊತೆ 2015ರಲ್ಲಿ ವಿಂಬಲ್ಡನ್, ಯುಎಸ್ ಓಪನ್, 2016ರಲ್ಲಿ ಆಸ್ಪ್ರೇಲಿಯನ್ ಓಪನ್ ಚಾಂಪಿಯನ್ ಆಗಿದ್ದ ಸಾನಿಯಾ, ಮಹೇಶ್ ಭೂಪತಿ ಜೊತೆ 2009ರಲ್ಲಿ ಆಸ್ಪ್ರೇಲಿಯನ್ ಓಪನ್, 2012ರಲ್ಲಿ ಫ್ರೆಂಚ್ ಓಪನ್ ಜಯಿಸಿದ್ದರು. 2014ರಲ್ಲಿ ಬ್ರೆಜಿಲ್‌ನ ಬ್ರುನೊ ಸೊರೆಸ್ ಜೊತೆ ಯುಎಸ್ ಓಪನ್ ಪ್ರಶಸ್ತಿ ಗೆದ್ದಿದ್ದರು. ಗ್ರ್ಯಾನ್ ಸ್ಲಾಂನ ಮಹಿಳಾ ಡಬಲ್ಸ್‌ನಲ್ಲಿ ಒಮ್ಮೆ, ಮಿಶ್ರ ಡಬಲ್ಸ್‌ನಲ್ಲಿ 5 ಬಾರಿ ರನ್ನರ್-ಅಪ್ ಕೂಡಾ ಆಗಿದ್ದರು.
ಇಂದು ಸ್ಟಾಫರ್ಡ್ ಕಪ್ ಫುಟ್ಬಾಲ್ ಫೈನಲ್ ಫೈಟ್
ಬೆಂಗಳೂರು: 30 ವರ್ಷಗಳ ಬಳಿಕ ಮತ್ತೆ ಆಯೋಜನೆಗೊಂಡಿರುವ ಪ್ರತಿಷ್ಠಿತ ಸ್ಟಾಫರ್ಡ್ ಕಪ್ ಫುಟ್ಬಾಲ್ ಟೂರ್ನಿಯ ಫೈನಲ್ನಲ್ಲಿ ಸೋಮವಾರ ಎಫ್‌ಸಿ ಬೆಂಗಳೂರು ಯುನೈಟೆಡ್ ಹಾಗೂ ಚೆನ್ನೈಯಿನ್ ಎಫ್‌ಸಿ ತಂಡಗಳು ಸೆಣಸಾಡಲಿವೆ. ಟೂರ್ನಿಯುದ್ದಕ್ಕೂ ಅಭೂತಪೂರ್ವ ಪ್ರದರ್ಶನ ತೋರಿದ್ದ ಬೆಂಗಳೂರು ತಂಡ ಸೆಮಿಫೈನಲ್ನಲ್ಲಿ ಎಎಸ್ಸಿ ತಂಡವನ್ನು 3-2 ಗೋಲುಗಳಿಂದ ಮಣಿಸಿತ್ತು. 2 ಬಾರಿ ಇಂಡಿಯನ್ ಸೂಪರ್ ಲೀಗ್(ಐಎಸ್ಎಲ್) ಚಾಂಪಿಯನ್ ಚೆನ್ನೈಯಿನ್ ತಂಡ ಸೆಮೀಸ್ನಲ್ಲಿ ಡೆಲ್ಲಿ ಎಫ್‌ಸಿ ತಂಡವನ್ನು ಪೆನಾಲ್ಟಿಶೂಟೌಟ್ನಲ್ಲಿ 4-2 ಗೋಲುಗಳಿಂದ ಸೋಲಿಸಿತ್ತು.
ಪಂದ್ಯ ಆರಂಭ: ಮಧ್ಯಾಹ್ನ 3ಕ್ಕೆ
ರಾಷ್ಟ್ರೀಯ ನೆಟ್ಬಾಲ್: ರಾಜ್ಯ ವನಿತೆಯರಿಗೆ ಕಂಚು
ಬೆಂಗಳೂರು: ಭಾರತೀಯ ನೆಟ್ಬಾಲ್ ಫೆಡರೇಶನ್ ಆಯೋಜಿಸಿದ 40ನೇ ರಾಷ್ಟ್ರೀಯ ನೆಟ್ಬಾಲ್ ಚಾಂಪಿಯನ್ಶಿಪ್ನಲ್ಲಿ ಕರ್ನಾಟಕ ಮಹಿಳಾ ತಂಡ ಕಂಚಿನ ಪದಕ ಗೆದ್ದಿದೆ. ಸೆಮಿಫೈನಲ್ನಲ್ಲಿ ಹರಾರಯಣ ವಿರುದ್ಧ 33-35ರಿಂದ ಸೋತ ಕರ್ನಾಟಕ 3ನೇ ಸ್ಥಾನಕ್ಕೆ ನಡೆದ ಪಂದ್ಯದಲ್ಲಿ ಹಿಮಾಚಲ ಪ್ರದೇಶ ವಿರುದ್ಧ 20-20 ಟೈ ಸಾಧಿಸಿತು. ಹೀಗಾಗಿ ಎರಡೂ ತಂಡಗಳಿಗೆ ಕಂಚು ದೊರೆಯಿತು. ಪುರುಷರ ವಿಭಾಗದಲ್ಲಿ ರಾಜ್ಯ ತಂಡ ಕ್ವಾರ್ಟರ್ ಫೈನಲ್ನಲ್ಲಿ ಕೇರಳ ವಿರುದ್ಧ 38-41 ಅಂಕಗಳಿಂದ ಸೋಲನುಭವಿಸಿತು.