117 ವರ್ಷಗಳ ಹಳೆಯ ದಾಖಲೆಯನ್ನು ಸಮಿತ್ ಅಳಿಸಿಹಾಕಿದ್ದಾರೆ.

ಜೈಪುರ್(ಡಿ. 27): ಗುಜರಾತ್’ನ ಒಪನಿಂಗ್ ಬ್ಯಾಟ್ಸ್’ಮ್ಯಾನ್ ಸಮಿತ್ ಗೋಹೆಲ್ ಹೊಸ ವಿಶ್ವದಾಖಲೆ ಸ್ಥಾಪಿಸಿದ್ದಾರೆ. ಇಂದು ಒಡಿಶಾ ವಿರುದ್ಧದ ರಣಜಿ ಕ್ವಾರ್ಟರ್’ಫೈನಲ್ ಪಂದ್ಯದಲ್ಲಿ ಸಮಿತ್ ಗೊಹೆಲ್ ಅಜೇಯ 359 ರನ್ ಗಳಿಸುವ ಮೂಲಕ ಕೆಲವಾರು ದಾಖಲೆಗಳನ್ನು ಸ್ಥಾಪಿಸಿದ್ದಾರೆ. 723 ಎಸೆತಗಳಿಂದ 359 ರನ್ ಗಳಿಸಿದ ಸಮಿತ್ ಇನ್ನಿಂಗ್ಸಲ್ಲಿ 45 ಬೌಂಡರಿ ಹಾಗೂ ಒಂದು ಸಿಕ್ಸ್ ಒಳಗೊಂಡಿದ್ದವು. 117 ವರ್ಷಗಳ ಹಳೆಯ ದಾಖಲೆಯನ್ನು ಸಮಿತ್ ಅಳಿಸಿಹಾಕಿದ್ದಾರೆ.

ಸಮಿತ್ ಗೊಹೆಲ್ ಮಾಡಿದ ದಾಖಲೆಗಳು:
* ಪ್ರಥಮ ದರ್ಜೆ ಕ್ರಿಕೆಟ್’ನಲ್ಲಿ ಕಳೆದ 81 ವರ್ಷಗಳಲ್ಲಿ ತ್ರಿಶತಕ ಗಳಿಸಿದ ಮೊದಲ ಆರಂಭಿಕ ಆಟಗಾರ
* 1899ರಲ್ಲಿ ಕೌಂಟಿ ಕ್ರಿಕೆಟ್ ಟೂರ್ನಿಯಲ್ಲಿ ಇಂಗ್ಲೆಂಡ್’ನ ಬಾಬಿ ಆಬೆಲ್ ಗಳಿಸಿದ್ದ 357 ರನ್’ಗಳ ದಾಖಲೆಯನ್ನು ಮುರಿದುಹಾಕಿದ ಸಮಿತ್
* ಪ್ರಥಮ ದರ್ಜೆ ಕ್ರಿಕೆಟ್’ನಲ್ಲಿ ತ್ರಿಶತಕ ಗಳಿಸಿ ಎರಡನೇ ಗುಜರಾತೀ ಕ್ರಿಕೆಟಿಗ
* ಈ ಬಾರಿಯ ರಣಜಿ ಋತುವಿನಲ್ಲಿ ತ್ರಿಶತಕ ಗಳಿಸಿದ ಐದನೇ ಕ್ರಿಕೆಟಿಗ

ಬದಲಾದ ಕ್ರಿಕೆಟಿಗ:
ವಿಶ್ವದಾಖಲೆ ಸ್ಥಾಪಿಸಿರುವ ಸಮಿತ್ ಗೋಹೆಲ್’ರ ಈ ಸಾಧನೆ ಹಿಂದೆ ಸಾಕಷ್ಟು ಪರಿಶ್ರಮ ಮತ್ತು ಆಶ್ಚರ್ಯಕರ ಸಂಗತಿಗಳು ಅಡಕವಾಗಿವೆ. ಕ್ರಿಕೆಟ್ ವೃತ್ತಿಯ ಆರಂಭದ ದಿನದಲ್ಲಿ ಸಮಿತ್ ರನ್ ಗಳಿಸಲು ಪರದಾಡುತ್ತಿದ್ದರು. ಸುಲಭವಾಗಿ ಶಾಟ್ ಹೊಡೆಯಬಲ್ಲ ಹಾಫ್ ವಾಲಿ ಎಸೆತಗಳನ್ನೂ ಅವರು ಡಿಫೆಂಡ್ ಮಾಡುತ್ತಿದ್ದರು. ತಮ್ಮ ಬತ್ತಳಿಕೆಯಲ್ಲಿ ಸಾಕಷ್ಟು ಶಾಟ್’ಗಳಿದ್ದರೂ ಅವುಗಳ ಬಳಕೆ ಮಾತ್ರ ಅಪರೂಪವಾಗಿತ್ತು. ಗುಜರಾತ್ ತಂಡದ ಕೋಚ್ ವಿಜಯ್ ಪಟೇಲ್ ಹಾಗೂ ಟೀಮ್ ಇಂಡಿಯಾ ಆಟಗಾರ ಪಾರ್ಥಿವ್ ಪಟೇಲ್ ಅವರ ಮಾರ್ಗದರ್ಶನದಲ್ಲಿ ಸಮಿತ್ ಗೋಹೆಲ್ ತಮ್ಮ ಬ್ಯಾಟಿಂಗ್ ಶೈಲಿಯಲ್ಲಿ ಬದಲಾವಣೆ ಮಾಡಿಕೊಂಡಿದ್ದಾರೆ. ಇಗ ಬಹಳ ಸುಲಲಿತವಾಗಿ ರನ್ ಗಳಿಸುತ್ತಾರೆ. ಹೆಚ್ಚು ಸಿಕ್ಸರ್’ಗಳನ್ನು ಭಾರಿಸದಿದ್ದರೂ ವೇಗವಾಗಿ ರನ್ ಗಳಿಸುವ ಚಾಕಚಕ್ಯತೆ ಹೊಂದಿದ್ದಾರೆ.