ತೀವ್ರ ಜಿದ್ದಜಿದ್ದಿನಿಂದ ಕೂಡಿದ ಪಂದ್ಯದಲ್ಲಿ ಮೊದಲ ಸೆಟ್'ನಲ್ಲಿ ಹಿನ್ನಡೆ ಅನುಭವಿಸಿದ್ದ ಸೈನಾ, ಆನಂತರದ ಎರಡು ಸೆಟ್'ಗಳಲ್ಲಿ ದಿಟ್ಟ ಪ್ರದರ್ಶನ ತೋರುವ ಮೂಲಕ ಪಂದ್ಯವನ್ನು ತಮ್ಮದಾಗಿಸಿಕೊಂಡರು.
ಜಕಾರ್ತ(ಜೂ.13): ಭಾರತದ ಅಗ್ರಶ್ರೇಯಾಂಕಿತ ಶಟ್ಲರ್'ಗಳಾದ ಸೈನಾ ನೆಹ್ವಾಲ್ ಮತ್ತು ಪಿ.ವಿ. ಸಿಂಧು ಇಂಡೋನೇಷ್ಯಾ ಓಪನ್ ಸೂಪರ್ ಸೀರಿಸ್ ಪ್ರೀಮಿಯರ್ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನಲ್ಲಿ ಗೆಲುವು ಸಾಧಿಸಿ ಶುಭಾರಂಭ ಮಾಡಿದ್ದಾರೆ.
ಇಲ್ಲಿನ ಬ್ಯಾಡ್ಮಿಂಟನ್ ಕೋರ್ಟ್‌ನಲ್ಲಿ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಸೈನಾ ನೆಹ್ವಾಲ್ 17-21, 21-18, 21-12 ಗೇಮ್'ಗಳಿಂದ ಮಾಜಿ ವಿಶ್ವ ಚಾಂಪಿಯನ್ ಥಾಯ್ಲೆಂಡ್'ನ ರಚಾನಕ್ ಇಂಟಾನಾನ್ ಎದುರು ಜಯ ಪಡೆದರು. ಎರಡನೇ ಸುತ್ತಿನಲ್ಲಿ ಸೈನಾ ಥಾಯ್ಲೆಂಡ್'ನ ನಿಟ್ಚೋನ್ ಜಿಂದಾಪೊಲ್ ಎದುರು ಸೆಣಸಲಿದ್ದಾರೆ.
ತೀವ್ರ ಜಿದ್ದಜಿದ್ದಿನಿಂದ ಕೂಡಿದ ಪಂದ್ಯದಲ್ಲಿ ಮೊದಲ ಸೆಟ್'ನಲ್ಲಿ ಹಿನ್ನಡೆ ಅನುಭವಿಸಿದ್ದ ಸೈನಾ, ಆನಂತರದ ಎರಡು ಸೆಟ್'ಗಳಲ್ಲಿ ದಿಟ್ಟ ಪ್ರದರ್ಶನ ತೋರುವ ಮೂಲಕ ಪಂದ್ಯವನ್ನು ತಮ್ಮದಾಗಿಸಿಕೊಂಡರು.
ಮತ್ತೊಂದು ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ವಿಶ್ವದ 3ನೇ ಶ್ರೇಯಾಂಕಿತೆ ಭಾರತದ ಪಿ.ವಿ. ಸಿಂಧು 21-12, 21-19 ಸೆಟ್'ಗಳಿಂದ ಥಾಯ್ಲೆಂಡ್'ನ ಪೊರ್ನಾಪಾವಿ ಚೊಚುವಾಂಗ್ ಎದುರು ನೇರ ಗೆಲುವು ಸಾಧಿಸಿದರು. ಕೇವಲ 33 ನಿಮಿಷಗಳ ಆಟದಲ್ಲಿ ಸಿಂಧು ಪಂದ್ಯ ಜಯಿಸಿ ಸಂಭ್ರಮಿಸಿದರು. ಇನ್ನು 2ನೇ ಸುತ್ತಿನಲ್ಲಿ ಸಿಂಧು ಅಮೆರಿಕದ ಬೆಯಿವೆನ್ ಜಾಂಗ್ ಎದುರು ಸೆಣಸಲಿದ್ದಾರೆ.
