ಆಫ್ರಿಕಾದ ವೇಗಿಗಳಾದ ಫಿಲಾಂಡರ್, ಕಗಿಸೋ ರಬಾಡ, ಡೇಲ್ ಸ್ಟೈನ್ ಹಾಗೂ ಮಾರ್ನೆ ಮಾರ್ಕೆಲ್ ದಾಳಿಗೆ ತತ್ತರಿಸಿದ ಟೀಂ ಇಂಡಿಯಾ 92 ರನ್'ಗಳಿಗೆ 7 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.

ಕೇಪ್'ಟೌನ್(ಜ.06): ಹಾರ್ದಿಕ್ ಪಾಂಡ್ಯ ಶತಕ ವಂಚಿತ ಏಕಾಂಗಿ ಹೋರಾಟದ ಹೊರತಾಗಿಯೂ ಟೀಂ ಇಂಡಿಯಾ 209 ರನ್'ಗಳಿಗೆ ಸರ್ವ ಪತನ ಕಂಡಿದ್ದು, ಮೊದಲ ಇನಿಂಗ್ಸ್'ನಲ್ಲಿ 77 ರನ್'ಗಳ ಹಿನ್ನಡೆ ಅನುಭವಿಸಿದೆ.

ಕೇಪ್'ಟೌನ್'ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್'ನಲ್ಲಿ ವೇಗಿಗಳ ದರ್ಬಾರು ಮುಂದುವರೆದಿದ್ದು ಹಾರ್ದಿಕ್ ಪಾಂಡ್ಯ(93) ಹೊರತು ಪಡಿಸಿ ಉಳಿದ ಬ್ಯಾಟ್ಸ್'ಮನ್'ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬರಲಿಲ್ಲ. ಆಫ್ರಿಕಾದ ವೇಗಿಗಳಾದ ಫಿಲಾಂಡರ್, ಕಗಿಸೋ ರಬಾಡ, ಡೇಲ್ ಸ್ಟೈನ್ ಹಾಗೂ ಮಾರ್ನೆ ಮಾರ್ಕೆಲ್ ದಾಳಿಗೆ ತತ್ತರಿಸಿದ ಟೀಂ ಇಂಡಿಯಾ 92 ರನ್'ಗಳಿಗೆ 7 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ 8ನೇ ವಿಕೆಟ್'ಗೆ ಜತೆಯಾದ ಹಾರ್ದಿಕ್ ಪಾಂಡ್ಯ ಹಾಗೂ ಭುವನೇಶ್ವರ್ ಕುಮಾರ್ ತಂಡಕ್ಕೆ ಆಧಾರವಾದರು. ಈ ಜೋಡಿ 99 ರನ್'ಗಳ ಜತೆಯಾಟವಾಡುವ ಮೂಲಕ ತಂಡವನ್ನು ಫಾಲೋ ಆನ್ ಭೀತಿಯಿಂದ ಪಾರು ಮಾಡಿದ್ದು ಮಾತ್ರವಲ್ಲದೇ ತಂಡದ ಮೊತ್ತವನ್ನು ಇನ್ನೂರರ ಸಮೀಪ ಕೊಂಡ್ಯುಯ್ದರು. ಸಂಕಷ್ಟದ ಸ್ಥಿತಿಯಲ್ಲಿ ಬ್ಯಾಟಿಂಗ್ ಆರಂಭಿಸಿದ ಪಾಂಡ್ಯ ಸೀಮಿತ ಓವರ್'ಗಳ ಪಂದ್ಯದಂತೆ ಬ್ಯಾಟ್ ಬೀಸಿದರು. ಕೇವಲ 95 ಎಸೆತಗಳನ್ನು ಎದುರಿಸಿದ ಪಾಂಡ್ಯ 93 ರನ್ ಬಾರಿಸಿ ರಬಾಡಗೆ ವಿಕೆಟ್ ಒಪ್ಪಿಸಿದರು. ಪಾಂಡ್ಯ ಸೊಗಸಾದ ಇನಿಂಗ್ಸ್'ನಲ್ಲಿ 14 ಬೌಂಡರಿ ಹಾಗೂ ಒಂದು ಸಿಕ್ಸರ್ ಕೂಡಾ ಸೇರಿತ್ತು. ಇನ್ನೊಂದೆಡೆ ಭುವಿ 86 ಎಸೆತಗಳನ್ನು ಎದುರಿಸಿ 4 ಬೌಂಡರಿಗಳ ನೆರವಿನಿಂದ 25 ರನ್ ಬಾರಿಸಿ ಪಾಂಡ್ಯಗೆ ತಕ್ಕ ಸಾಥ್ ನೀಡಿದರು.

ಆಫ್ರಿಕಾ ಪರ ಫಿಲಾಂಡರ್ ಹಾಗೂ ರಬಾಡ ತಲಾ 3 ವಿಕೆಟ್ ಪಡೆದರೆ, ಸ್ಟೈನ್ ಹಾಗೂ ಮಾರ್ಕೆಲ್ ತಲಾ 2 ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರ್:

ದಕ್ಷಿಣ ಆಫ್ರಿಕಾ ಮೊದಲ ಇನಿಂಗ್ಸ್: 286/10

ಭಾರತ: 209/10

ಹಾರ್ದಿಕ್ ಪಾಂಡ್ಯ: 93

ಫಿಲಾಂಡರ್: 33/3

(* ವಿವರ ಅಪೂರ್ಣ)