ರಷ್ಯಾ ಓಪನ್ ಬ್ಯಾಡ್ಮಿಂಟನ್: ಸೌರಭ್ ಚಾಂಪಿಯನ್
ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ಮುಕ್ತಾಯವಾಗಿದ್ದ ಆಲ್ ಇಂಡಿಯಾ ಸೀನಿಯರ್ ರ‍್ಯಾಂಕಿಂಗ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಸೌರಭ್ ಪ್ರಶಸ್ತಿ ಗೆದ್ದು, ಏಷ್ಯನ್ ಗೇಮ್ಸ್ ಭಾರತ ತಂಡದಲ್ಲಿ ಸ್ಥಾನ ಖಚಿತ ಪಡಿಸಿಕೊಂಡಿದ್ದರು.
ವ್ಲಾಡಿವೋಸ್ಟಾಕ್[ಜು.30]: ಮಾಜಿ ರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯನ್ ಭಾರತದ ಸೌರಭ್ ವರ್ಮಾ, ರಷ್ಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದಾರೆ. ಭಾನುವಾರ ಅಂತ್ಯವಾದ ಪುರುಷರ ಸಿಂಗಲ್ಸ್‌ನ ಫೈನಲ್ ಪಂದ್ಯದಲ್ಲಿ ಸೌರಭ್, ಜಪಾನ್‌ನ ಕೊಕಿ ವಟನಾಬೆ ವಿರುದ್ಧ 19-21, 21-12, 21-17 ಗೇಮ್'ಗಳಲ್ಲಿ ಗೆಲುವು ಸಾಧಿಸಿದರು. ಈ ಮೂಲಕ ವರ್ಷದ ಚೊಚ್ಚಲ ಪ್ರಶಸ್ತಿ ಗೆದ್ದ ಸಾಧನೆ ಮಾಡಿದರು.
ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ಮುಕ್ತಾಯವಾಗಿದ್ದ ಆಲ್ ಇಂಡಿಯಾ ಸೀನಿಯರ್ ರ‍್ಯಾಂಕಿಂಗ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಸೌರಭ್ ಪ್ರಶಸ್ತಿ ಗೆದ್ದು, ಏಷ್ಯನ್ ಗೇಮ್ಸ್ ಭಾರತ ತಂಡದಲ್ಲಿ ಸ್ಥಾನ ಖಚಿತ ಪಡಿಸಿಕೊಂಡಿದ್ದರು. ಕಳೆದ ವರ್ಷ ನಡೆದಿದ್ದ ಬಿಟ್‌ಬರ್ಗರ್ ಓಪನ್‌ನಲ್ಲಿ ರನ್ನರ್ ಅಪ್ ಆಗಿದ್ದ ಸೌರಭ್, ಚೈನೀಸ್ ತೈಪೆ ಗ್ರ್ಯಾನ್ ಪ್ರಿ ಗೋಲ್ಡ್ ನಲ್ಲಿ ಚಾಂಪಿಯನ್ ಪ್ರಶಸ್ತಿ ಗೆದ್ದಿದ್ದರು. ಇಲ್ಲಿನ ಸ್ಪೋರ್ಟ್ಸ್ ಹಾಲ್ ಒಲಿಂಪಿಕ್‌ನ ಬ್ಯಾಡ್ಮಿಂಟನ್ ಕೋರ್ಟ್‌ನಲ್ಲಿ ನಡೆದ ಫೈನಲ್ ಪಂದ್ಯದ ಮೊದಲ ಗೇಮ್’ನಲ್ಲಿ ಹಿನ್ನಡೆ ಅನುಭವಿಸಿದ ಸೌರಭ್, ನಂತರ 2 ಗೇಮ್ ಗಳಲ್ಲಿ ಮುನ್ನಡೆ ಕಾಯ್ದುಕೊಂಡು ಪಂದ್ಯ ಗೆದ್ದರು. 1 ಗಂಟೆ ಅವಧಿಯ ಆಟದಲ್ಲಿ ಎದುರಾಳಿ ಶಟ್ಲರ್‌ನ ಎಲ್ಲ ತಂತ್ರಗಳನ್ನು ತಲೆಕೆಳಗೆ ಮಾಡಿದ ಸೌರಭ್ ಪ್ರಶಸ್ತಿಗೆ ಮುತ್ತಿಕ್ಕಿದರು. ಪಂದ್ಯದ ಆರಂಭದಲ್ಲಿ ಜಪಾನ್‌ನ ಶಟ್ಲರ್ ಉತ್ತಮ ಅಂಕಗಳನ್ನು ಕಲೆಹಾಕಿದರು. ಮೊದಲ ಗೇಮ್‌ನ ವಿರಾಮದ ವೇಳೆಗೆ ವಟನಾಬೆ 11-5 ರಿಂದ ಉತ್ತಮ ಮುನ್ನಡೆ ಸಾಧಿಸಿದರು. ನಂತರದ ಅವಧಿಯಲ್ಲಿ 11-12 ರಿಂದ ಉತ್ತಮ ಹೋರಾಟ ಕಂಡುಬಂದ ಗೇಮ್‌ನಲ್ಲಿ ವಟನಾಬೆ ಏಕಾಏಕಿ 21-19 ರಿಂದ ಮುನ್ನಡೆದರು.
ಆದರೆ 2ನೇ ಗೇಮ್‌ನಲ್ಲಿ ಸೌರಭ್ ತಿರುಗೇಟು ನೀಡುವಲ್ಲಿ ಯಶಸ್ವಿಯಾದರು. ಆರಂಭದಲ್ಲಿ 7-3 ರಿಂದ ಮುನ್ನಡೆದ ಸೌರಭ್ ವಿರಾಮದ ವೇಳೆಗೆ 11-6ರಿಂದ ಮುನ್ನಡೆ ಪಡೆದರು. ಅಂಕಗಳಲ್ಲಿ ಇದೇ ಅಂತರವನ್ನು ಕಾಯ್ದುಕೊಂಡ ಸೌರಭ್ ಮುನ್ನಡೆ ಸಾಧಿಸಿದರು. 1-1 ರಿಂದ ಸಮಬಲ ಪಡೆದರು. ನಿರ್ಣಾಯಕ ಗೇಮ್‌ನಲ್ಲಿ ಇಬ್ಬರೂ ಶಟ್ಲರ್‌ಗಳು ಸಮಬಲದ ಹೋರಾಟ ನೀಡಿದರು. ಒಂದು ಹಂತದಲ್ಲಿ 15-15, 17-17 ರಿಂದ ಸಮಬಲದ ಹೋರಾಟ ಕಂಡು ಬಂದರೂ ಅಂತಿಮವಾಗಿ ಜಪಾನ್‌ನ ವಟನಾಬೆಗೆ ಸೋಲಿನ ರುಚಿ ತೋರಿಸಿದ ಸೌರಭ್ ಅದ್ಭುತ ಪ್ರದರ್ಶನದೊಂದಿಗೆ ಪಂದ್ಯ ಜಯಿಸಿದರು.