Asianet Suvarna News Asianet Suvarna News

ರುಪೇ ಪ್ರೈಮ್ ವಾಲಿಬಾಲ್ ಲೀಗ್: ಬೆಂಗಳೂರು ಟಾರ್ಪಿಡೋಸ್‌ನಲ್ಲಿ ಕರ್ನಾಟಕದ ನಾಲ್ವರು

ರುಪೇ ಪ್ರೈಮ್ ವಾಲಿಬಾಲ್ ಲೀಗ್ ಪವರ್ಡ್ ಬೈ ಎ23 ನಲ್ಲಿ ಪ್ರಮುಖ ತಂಡವಾಗಿ ಸೆಣಸುತ್ತಿರುವ 'ಬೆಂಗಳೂರು ಟಾರ್ಪಿಡೋಸ್'ನಲ್ಲಿ ಕರ್ನಾಟಕದ ನಾಲ್ವರು ಆಟಗಾರರು ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಕರ್ನಾಟಕ ವಾಲಿಬಾಲ್ ಪುನಶ್ಚೇತನಕ್ಕೆ ಟೂರ್ನಿ ತಳಹದಿಯಾಗಿದೆ ಎಂದು ಆಟಗಾರರು ಪ್ರತಿಪಾದಿಸಿದ್ದಾರೆ.  

RuPay Prime Volleyball League: four players from Karnataka at Bangalore Torpedoes akb
Author
First Published Feb 8, 2023, 12:22 AM IST

ಬೆಂಗಳೂರು(ಫೆ 7) 'ರುಪೇ ಪ್ರೈಮ್ ವಾಲಿಬಾಲ್ ಲೀಗ್ ಪವರ್ಡ್ ಬೈ ಎ23 ನಲ್ಲಿ ಪ್ರಮುಖ ತಂಡವಾಗಿ ಸೆಣಸುತ್ತಿರುವ 'ಬೆಂಗಳೂರು ಟಾರ್ಪಿಡೋಸ್'ನಲ್ಲಿ ಕರ್ನಾಟಕದ ನಾಲ್ವರು ಆಟಗಾರರು ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಕರ್ನಾಟಕ ವಾಲಿಬಾಲ್ ಪುನಶ್ಚೇತನಕ್ಕೆ ಟೂರ್ನಿ ತಳಹದಿಯಾಗಿದೆ ಎಂದು ಆಟಗಾರರು ಪ್ರತಿಪಾದಿಸಿದ್ದಾರೆ.  

ಎರಡು ಬಾರಿ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದಿರುವ ಅಮೆರಿಕದ ಕೋಚ್‌ ಡೇವಿಡ್‌ ಲೀ ಅವರ ಮಾರ್ಗದರ್ಶನದಲ್ಲಿ ಸುಧೀರ್ ಶೆಟ್ಟಿ(Sudhir Shetty), ವಿನಾಯಕ ರೋಕಡೆ ( Vinayak Rokade), ಸೃಜನ್ ಶೆಟ್ಟಿ (Srujan Shetty) ಮತ್ತು ಕೆ. ತರುಣ್ ಗೌಡ (K.Tarun Gowda), ಉತ್ಕೃಷ್ಟ ತಂತ್ರಗಳನ್ನು ಪ್ರದರ್ಶಿಸುತ್ತಿದ್ದಾರೆ. ರುಪೇ ಪ್ರೈಮ್ ವಾಲಿಬಾಲ್ ಲೀಗ್ ಪವರ್ಡ್ ಬೈ ಎ23 ನಿಂದ ಮುಂಬರುವ ದಿನಗಳಲ್ಲಿ ಕರ್ನಾಟಕದ ಉದಯೋನ್ಮುಖ ಆಟಗಾರರಿಗೆ ಹೆಚ್ಚಿನ ಅವಕಾಶ ದೊರೆಯಲಿದ್ದು, ವಾಲಿಬಾಲ್ ನತ್ತ ಆಸಕ್ತಿ ಬೆಳೆಸಿಕೊಳ್ಳಲು ಇದು ಉತ್ತಮ ವೇದಿಕೆಯಾಗಿದೆ ಎಂದು ಕರ್ನಾಟಕ ಆಟಗಾರರು ಹೇಳಿದ್ದಾರೆ. ಒಟ್ಟಾರೆ ಈ ಟೂರ್ನಿಯಲ್ಲಿ ಬೇರೆ ಬೇರೆ ತಂಡಗಳಲ್ಲಿ ಕರ್ನಾಟಕದ ಡಜನ್ ಗೂ ಹೆಚ್ಚು ಮಂದಿ ಆಟಗಾರರು ಆಡುತ್ತಿದ್ದು, ಇದು ಮುಂಬರುವ ದಿನಗಳಲ್ಲಿ ಕರ್ನಾಟಕ ವಾಲಿಬಾಲ್ ಅನ್ನು ಉಜ್ವಲಗೊಳಿಸಲು ಸಹಕಾರಿಯಾಗಲಿದೆ ಎನ್ನುತ್ತಾರೆ.

Prime Volleyball League ಬಲಿಷ್ಠ ಅಹಮದಾಬಾದ್‌ಗೆ ಸೋಲುಣಿಸಿದ ಹೈದರಾಬಾದ್‌ ಬ್ಲ್ಯಾಕ್ ಹಾಕ್ಸ್..!

ಸುದ್ದಿಗಾರರ ಜೊತೆ ಮಾತನಾಡಿದ ಮೂಲತಃ ಬೆಳಗಾವಿಯವರಾದ (Belgaum) ವಿನಾಯಕ ರೋಕಡೆ, ಶಾಲಾ ಹಂತದಲ್ಲಿ ಕ್ರಿಕೆಟ್‌ನತ್ತ ಆಸಕ್ತಿ ಬೆಳೆಸಿಕೊಂಡಿದ್ದೆ. ಆದರೆ ಶಿಕ್ಷಕರ ಒತ್ತಾಸೆಗೆ ಕಟ್ಟು ಬಿದ್ದು ವಾಲಿಬಾಲ್ ಕ್ರೀಡೆಗೆ ಒತ್ತು ನೀಡಿದೆ. ನಂತರ ವಲಯವಾರು,  ರಾಜ್ಯ ಮತ್ತು ರಾಷ್ಟ್ರಮಟ್ಟವನ್ನು ಪ್ರತಿನಿಧಿಸಿದೆ. ರುಪೇ ಪ್ರೈಮ್ ವಾಲಿಬಾಲ್ ಲೀಗ್ ಪವರ್ಡ್ ಬೈ ಎ23 ಒಟ್ಟಾರೆ ವಾಲಿಬಾಲ್ ಕ್ರೀಡೆ ಮತ್ತು ಆಟಗಾರರಿಗೆ ಹೆಚ್ಚಿನ ರೀತಿಯಲ್ಲಿ ಉಪಯುಕ್ತವಾಗಿದೆ. ಇದರಿಂದ ನಮ್ಮ ಕ್ರೀಡಾ ಕೌಶಲ್ಯ ಮತ್ತೊಂದು ಹಂತಕ್ಕೆ ತಲುಪಲಿದೆ. ಕೋಚ್‌ ಡೇವಿಡ್‌ ಲೀ (David Lee) ಅವರಿಂದ ನಮ್ಮ ಆಟದ ಋಣಾತ್ಮಕ ಅಂಶಗಳನ್ನು ಧನಾತ್ಮವಾಗಿ ಪರಿವರ್ತಿಸಿಕೊಳ್ಳಲು ಸಾಧ್ಯವಾಗುತ್ತಿದೆ ಎಂದರು.

ವಾಲಿಬಾಲ್ ನಲ್ಲಿ ದೈಹಿಕ ಸದೃಢತೆ ಬಹಳ ಮುಖ್ಯ. ಇದಕ್ಕಾಗಿ ವ್ಯಾಪಕ ಕಸರತ್ತು ಮಾಡುತ್ತೇವೆ. ಲೀಗ್ ಆರಂಭಕ್ಕೂ ಎರಡು ತಿಂಗಳ ಮುಂಚೆ ತರಬೇತಿ ಆರಂಭಿಸಿದ್ದು, ತರಬೇತುದಾರರ ಮಾರ್ಗದರ್ಶನವನ್ನು ಪರಿಪಾಲಿಸುತ್ತಿದ್ದೇವೆ. ಜೊತೆಗೆ ಹಿತ, ಮಿತ ಮತ್ತು ಪೌಷ್ಟಿಕ ಆಹಾರ ಸೇವನೆಗೆ ಒತ್ತು ನೀಡುತ್ತಿದ್ದೇವೆ ಎಂದರು.

ಈ ಬಾರಿ ಉಡುಪಿಯ ಕಾರ್ಕಾಳದಿಂದ ಇಬ್ಬರು ಆಟಗಾರರು ತಮ್ಮ ಕ್ರೀಡಾ ಕೌಶಲ್ಯ ಪ್ರದರ್ಶಿಸುತ್ತಿರುವುದು ವಿಶೇಷವಾಗಿದೆ. 'ಬೆಂಗಳೂರು ಟಾರ್ಪಿಡೋಸ್'ನಲ್ಲಿ ಸುಧೀರ್ ಶೆಟ್ಟಿ ರಾಜ್ಯ ಮತ್ತು ರಾಷ್ಟ್ರಮಟ್ಟವನ್ನು ಪ್ರತಿನಿಧಿಸಿ ಇದೀಗ ನೈಋತ್ಯ ರೈಲ್ವೆಯಲ್ಲಿ ಉದ್ಯೋಗದಲ್ಲಿದ್ದಾರೆ. ಸುಧೀರ್ ಶೆಟ್ಟಿ ಮಾತನಾಡಿ, ಉಡುಪಿ ನಮ್ಮ ಕ್ರೀಡಾ ಚಟುವಟಿಕೆಗೆ ನೀರೆರೆದಿದೆ. ಸಣ್ಣಪುಟ್ಟ ಟೂರ್ನಿಗಳಲ್ಲಿ ಆಡಿದ ನಂತರ ದೊಡ್ಡ ಮಟ್ಟದ ಅವಕಾಶ ದೊರೆಯಿತು. ವಾಲಿಬಾಲ್ ಲೀಗ್ ನಲ್ಲಿ ಆಡುತ್ತಿರುವುದು ತಮಗೆ ಸುವರ್ಣಾವಕಾಶವಾಗಿದೆ ಎಂದರು.

ಪ್ರೈಮ್ ವಾಲಿಬಾಲ್ ಲೀಗ್: ಹಾಲಿ ಚಾಂಪಿಯನ್ ಕೋಲ್ಕತಾ ಶುಭಾರಂಭ

ಉದಯೋನ್ಮುಖ ಆಟಗಾರ ಕಾರ್ಕಳದ ಯುವಕ ಸೃಜನ್ ಶೆಟ್ಟಿ ಮಾತನಾಡಿ, ತಮ್ಮಂತಹ ಯುವ ಕ್ರೀಡಾ ಪಟುಗಳಿಗೆ ಇದು ವಿಶೇಷವಾದದ್ದು. 2020 ರಲ್ಲಿ ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ಮೊದಲ ಬಾರಿಗೆ ತರಬೇತಿ ಆರಂಭಿಸಿದೆ. ನಂತರ ಆರು ತಿಂಗಳಲ್ಲಿ ಕೋವಿಡ್ ಲಾಕ್ ಡೌನ್ ನಿಂದ ತರಬೇತಿಗೆ ತೊಂದರೆಯಾಯಿತು. ತಾವು ಎರಡನೇ ವರ್ಷದ ಪದವಿ ತರಗತಿಯಲ್ಲಿ ಓದುತ್ತಿದ್ದು, ಕಳೆದ ವರ್ಷ ಖೋಲೋ ಇಂಡಿಯಾದಲ್ಲಿ ನಮ್ಮ ತಂಡ ಚಿನ್ನದ ಪದಕ ಗೆದ್ದಿತ್ತು. ಕಳೆದ ಬಾರಿ ಬೆಂಗಳೂರು ತಂಡವನ್ನು ಪ್ರತಿನಿಧಿಸಿದ್ದ ತಮ್ಮ ವಾಲಿಬಾಲ್ ಕ್ರೀಡಾ ಯಾನ ಇದೀಗ ದೊಡ್ಡ ಮಟ್ಟದಲ್ಲಿ ಅನಾವರಣಗೊಳ್ಳುತ್ತಿದೆ. ನಮ್ಮ ತಂಡದ ತರಬೇತುದಾರರಾದ ಲೀ ಬೇರೆ ಬೇರೆ ದೇಶಗಳ ತಂಡಗಳನ್ನು ಪ್ರತಿನಿಧಿಸಿದ್ದು, ಅವರ ಅನುಭವ ನಮ್ಮನ್ನು ಇನ್ನಷ್ಟು ಪಕ್ವಗೊಳಿಸಲು ಸಹಕಾರಿಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಹಾಸನದ ಕೆ. ತರುಣ್ ಗೌಡ ಮಾತನಾಡಿ, ತಮ್ಮ ವಾಲಿಬಾಲ್ ಬದುಕಿಗೆ ಆಸರೆಯಾಗಿದ್ದು ಆಳ್ವಾಸ್ ಶಿಕ್ಷಣ ಸಂಸ್ಥೆ. ಇದೀಗ ರುಪೇ ಪ್ರೈಮ್ ವಾಲಿಬಾಲ್ ಲೀಗ್ ಪವರ್ಡ್ ಬೈ ಎ23 ಆಶಾಕಿರಣವಾಗಿದೆ.  ಈ ಟೂರ್ನಿ ಕರ್ನಾಟಕ ವಾಲಿಬಾಲ್ ಪುನಶ್ಚೇತನಕ್ಕೆ ಪೂರಕವಾಗಿದ್ದು, ಮತ್ತೊಮ್ಮೆ ಕರ್ನಾಟಕ  ಈ ಕ್ರೀಡೆಯಲ್ಲಿ ಮಿಂಚಲು ಉತ್ತಮ ವೇದಿಕೆಯಾಗಿದೆ ಎಂದು ಸಂತಸ ಹಂಚಿಕೊಂಡರು.

Follow Us:
Download App:
  • android
  • ios