ಬೆಂಗಳೂರು[ಜೂ.17]: ಫಿಫಾ ವಿಶ್ವಕಪ್‌ನ ಅಧಿಕೃತ ಪ್ರಾಯೋಜಕರ ಆಹ್ವಾನದ ಮೇರೆಗೆ ರಷ್ಯಾಗೆ ತೆರಳಿದ್ದ ಭಾರತ ತಂಡ ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ, ಭಾನುವಾರ ಇಲ್ಲಿನ ಎನ್‌ಸಿಎನಲ್ಲಿ ಯೋ-ಯೋ ಫಿಟ್ನೆಸ್ ಟೆಸ್ಟ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ.

ರೋಹಿತ್ ಬಿಸಿಸಿಐನಿಂದ ಅನುಮತಿ ಪಡೆದು ರಷ್ಯಾಗೆ ತೆರಳಿದ್ದರು. ಇದೇ ವೇಳೆ ಫಿಟ್ನೆಸ್ ಪರೀಕ್ಷೆಯಲ್ಲಿ ಫೇಲಾಗಿ, ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿಗೆ ಆಯ್ಕೆಯಾಗಿರುವ ತಂಡದಿಂದ ಹೊರಬಿದ್ದ ಅಂಬಟಿ ರಾಯುಡು ಬದಲಿಗೆ ಬಿಸಿಸಿಐ ಆಯ್ಕೆ ಸಮಿತಿ ಸುರೇಶ್ ರೈನಾಗೆ ಸ್ಥಾನ ನೀಡಿದೆ. ರೈನಾ ಶುಕ್ರವಾರ ನಡೆದಿದ್ದ ಫಿಟ್ನೆಸ್ ಟೆಸ್ಟ್‌ನಲ್ಲಿ ಪಾಸಾಗಿದ್ದರು. ಬಹು ದಿನಗಳ ಬಳಿಕ
ರೈನಾ ಏಕದಿನ ತಂಡಕ್ಕೆ ವಾಪಸಾಗಿದ್ದಾರೆ.

ಭಾರತ ತಂಡವು ಇದೇ ತಿಂಗಳು ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದ್ದು, ಜೂನ್ 27 ಹಾಗೂ 29ರಂದು ಐರ್ಲೆಂಡ್ ವಿರುದ್ಧ 2 ಟಿ20 ಪಂದ್ಯಗಳ ಸರಣಿಯಾಡಲಿದೆ. ಆಬಳಿಕ ವಿರಾಟ್ ಪಡೆ ಇಂಗ್ಲೆಂಡ್ ವಿರುದ್ಧ ತಲಾ ಮೂರು ಟಿ20 ಹಾಗೂ ಏಕದಿನ ಸರಣಿಯಾಡಲಿದೆ. ನಂತರ ಆಂಗ್ಲರ ಎದುರು ಸೆಪ್ಟೆಂಬರ್ 1ರಿಂದ 5 ಪಂದ್ಯಗಳ ಟೆಸ್ಟ್ ಸರಣಿಯಾಡಲಿದೆ