ನವದೆಹಲಿ(ಡಿ.24): ಸಿಕ್ಕ ಅವಕಾಶಗಳನ್ನು ಗೌರವಿಸಿ ಎಂದು ಅಂಡರ್ 19 ವಿಶ್ವಕಪ್‌'ಗೆ ಆಯ್ಕೆಗೊಂಡಿರುವ ಆಟಗಾರರಿಗೆ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಕಿವಿಮಾತು ಹೇಳಿದ್ದಾರೆ.

‘ಐಸಿಸಿ ಅಂಡರ್-19 ವಿಶ್ವಕಪ್ ನನ್ನ ವೃತ್ತಿ ಜೀವನದಲ್ಲಿ ಮಹತ್ವದ ಮೈಲಿಗಲ್ಲು. ವೃತ್ತಿಜೀವನ ರೂಪಿಸಿಕೊಳ್ಳಲು ಉತ್ತಮ ವೇದಿಕೆ ಒದಗಿಸಿಕೊಟ್ಟಿತು. ಕಿರಿಯರ ವಿಶ್ವಕಪ್ ನನ್ನ ಮನದಲ್ಲಿ ಅಚ್ಚಳಿಯದೆ ಉಳಿದಿದೆ. ಆದಕಾರಣ ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವುದು, ಗೌರವಿಸುವುದನ್ನು ಕಲಿಯುವುದು ಮುಖ್ಯ’ ಎಂದು ವಿರಾಟ್ ಹೇಳಿದ್ದಾರೆ.

ನ್ಯೂಜಿಲೆಂಡ್'ನಲ್ಲಿ ಜನವರಿ 13ರಿಂದ ಆರಂಭವಾಗಲಿರುವ ಅಂಡರ್-19 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವನ್ನು ಯುವ ಪ್ರತಿಭೆ ಪೃಥ್ವಿ ಶಾ ಮುನ್ನಡೆಸಲಿದ್ದಾರೆ. 2008ರ ಅಂಡರ್-19 ವಿಶ್ವಕಪ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಭಾರತ ತಂಡವನ್ನು ಮುನ್ನಡೆಸಿದ್ದರು. ಅಲ್ಲದೇ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದರು.