ಮುಂಬೈ(ನ.06): 2019ರ ಐಪಿಎಲ್ ಆಯೋಜನೆ ಬಿಸಿಸಿಐಗೆ ತಲೆನೋವಾಗಿ ಪರಿಣಮಿಸಿದೆ. ಒಂದೆಡೆ ಲೋಕಸಭಾ ಚುನಾವಣೆ ಮತ್ತೊಂದೆಡೆ ವಿಶ್ವಕಪ್ ಟೂರ್ನಿ ಈ ಎರಡರ ನಡುವೆ ಪ್ರತಿಷ್ಠಿತ ಐಪಿಎಲ್ ಟೂರ್ನಿ ಆಯೋಜಿಸಲು ಬಿಸಿಸಿಐ ತಯಾರಿ ನಡೆಸುತ್ತಿದೆ. ಇದರ ಬೆನ್ನಲ್ಲೇ ಶ್ರೀಮಂತ ಕ್ರಿಕೆಟ್ ಲೀಗ್ ಟೂರ್ನಿಯ ಪ್ಲೇ ಆಫ್ ಪಂದ್ಯಗಳಿಗೆ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ಆಟಗಾರರು ಅಲಭ್ಯರಾಗೋ ಸಾಧ್ಯತೆ ಇದೆ.

ಯುಎಇ ಅಥವಾ ಸೌತ್ಆಫ್ರಿಕಾದಲ್ಲಿ ಟೂರ್ನಿ ಆಯೋಜಿಸಲು ಬಿಸಿಸಿಐ ಮುಂದಾಗಿದೆ. ಮಾರ್ಚ್ ಅಂತಿಮವಾರದಿಂದ ಮೇ 3ನೇ ವಾರದ ವರೆಗೆ ಐಪಿಎಲ್ ಟೂರ್ನಿ ನಡೆಯಲಿದೆ. ಮೇ 30 ರಿಂದ ವಿಶ್ವಕಪ್ ಟೂರ್ನಿ ಆರಂಭವಾಗಲಿದೆ. ಮೇ 3 ರಂದು ಇಂಗ್ಲೆಂಡ್, ಐರ್ಲೆಂಡ್ ವಿರುದ್ದ ಏಕೈಕ ಏಕದಿನ ಪಂದ್ಯ ಆಯೋಜಿಸಿದೆ. ಬಳಿಕ ಪಾಕಿಸ್ತಾನ ವಿರುದ್ದ ಒಂದು ಟಿ20 ಹಾಗೂ 5 ಏಕದಿನ ಪಂದ್ಯ ಆಡಲಿದೆ. ಹೀಗಾಗಿ ಇಂಗ್ಲೆಂಡ್ ಸ್ಟಾರ್ ಪ್ಲೇಯರ್‌ಗಳು ಐಪಿಎಲ್ ಪ್ಲೇ ಆಫ್ ಪಂದ್ಯಕ್ಕೆ ಇಂಗ್ಲೆಂಡ್ ಕ್ರಿಕೆಟಿಗರು ಅಲಭ್ಯರಾಗಲಿದ್ದಾರೆ.

ಮೇ ತಿಂಗಳ ಮೊದಲ ವಾರದಲ್ಲಿ ಆಸ್ಟ್ರೇಲಿಯಾ ದ್ವಿಪಕ್ಷೀಯ ಸರಣಿ ಆಯೋಜಿಸಲು ಮುಂದಾಗಿದೆ. ಹೀಗಾದಲ್ಲಿ ಆಸಿಸ್ ಆಟಗಾರರು ಕೂಡ ಅಲಭ್ಯರಾಗಲಿದ್ದಾರೆ.  ಈಗಾಗಲೇ ಹಲವು ಸಮಸ್ಯೆಗಳನ್ನ ಎದುರಿಸುತ್ತಿರುವ ಬಿಸಿಸಿಐಗೆ ಇದೀಗ ಐಪಿಎಲ್ ಆಯೋಜನೆಯೇ ತಲೆನೋವಾಗಿದೆ.