ದ್ವಿತೀಯ ಟೆಸ್ಟ್ ಪಂದ್ಯದ ಎರಡನೇ ದಿನದಾಟದ ಅಂತ್ಯಕ್ಕೆ ಭಾರತ ತಂಡ ಆಂಗ್ಲರ ಮೇಲಿನ ಹಿಡಿತವನ್ನು ಇನ್ನಷ್ಟು ಬಿಗಿಗೊಳಿಸಿತು. 455 ರನ್‌'ಗಳಿಗೆ ಆಲೌಟ್ ಆದ ಭಾರತದ ಎದುರು ಇಂಗ್ಲೆಂಡ್ 49 ಓವರ್‌ಗಳಲ್ಲಿ 103 ರನ್‌'ಗಳಿಗೆ 5 ವಿಕೆಟ್ ಕಳೆದುಕೊಂಡು ಇನ್ನೂ 352 ರನ್ ಹಿನ್ನಡೆಯಲ್ಲಿದೆ.

ವಿಶಾಖಪಟ್ಟಣ(ನ.18): ವಿರಾಟ್ ಕೊಹ್ಲಿ ಮತ್ತು ಚೇತೇಶ್ವರ ಪೂಜಾರ ದಾಖಲಿಸಿದ ಸೊಗಸಾದ ಶತಕದಿಂದಾಗಿ ಬಸವಳಿದಿದ್ದ ಪ್ರವಾಸಿ ಇಂಗ್ಲೆಂಡ್, ಎರಡನೇ ದಿನದಂದು ಕೊಹ್ಲಿ ಬಳಗ ತೋರಿದ ಆಕ್ರಮಣಕಾರಿ ಆಟಕ್ಕೆ ಮತ್ತಷ್ಟು ಮಂಕಾಗಿ ಸಂಕಷ್ಟಕ್ಕೆ ಸಿಲುಕಿಕೊಂಡಿದೆ.

ಇಲ್ಲಿನ ಡಾ. ವೈ.ಎಸ್. ರಾಜಶೇಖರ ರೆಡ್ಡಿ ಮೈದಾನದಲ್ಲಿ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದ ಎರಡನೇ ದಿನದಾಟದ ಅಂತ್ಯಕ್ಕೆ ಭಾರತ ತಂಡ ಆಂಗ್ಲರ ಮೇಲಿನ ಹಿಡಿತವನ್ನು ಇನ್ನಷ್ಟು ಬಿಗಿಗೊಳಿಸಿತು. 455 ರನ್‌'ಗಳಿಗೆ ಆಲೌಟ್ ಆದ ಭಾರತದ ಎದುರು ಇಂಗ್ಲೆಂಡ್ 49 ಓವರ್‌ಗಳಲ್ಲಿ 103 ರನ್‌'ಗಳಿಗೆ 5 ವಿಕೆಟ್ ಕಳೆದುಕೊಂಡು ಇನ್ನೂ 352 ರನ್ ಹಿನ್ನಡೆಯಲ್ಲಿದೆ. ಇದು ಆಂಗ್ಲರ ಮುಂದೆ ಕಠಿಣ ಹಾದಿಯನ್ನೇ ತೆರೆದಿಟ್ಟಂತಾಗಿದೆ.

ಬೆನ್ ಸ್ಟೋಕ್ಸ್ ಹಾಗೂ ಜಾನಿ ಬೇರ್‌ಸ್ಟೋ ತಲಾ 12 ರನ್ ಗಳಿಸಿ ಕ್ರೀಸ್‌ನಲ್ಲಿದ್ದು, ಈ ಜೋಡಿ ಮೂರನೇ ದಿನದಂದು ನೀಡುವ ಪ್ರದರ್ಶನದ ಮೇಲೆ ಇಂಗ್ಲೆಂಡ್‌ನ ಅಳಿವು - ಉಳಿವು ನಿರ್ಧರಿತವಾಗಲಿದೆ. ಪಿಚ್ ಸಹಜವಾಗಿಯೇ ತಿರುವು ಪಡೆಯಲು ಆರಂಭಿಸಿರುವುದು ಕೂಡ ಪ್ರವಾಸಿ ತಂಡದ ಬೇಗುದಿಯನ್ನು ಹೆಚ್ಚಿಸಿದೆ.

ಅಲುಗಾಡಿದ ಅಡಿಪಾಯ

ಎರಡನೇ ದಿನದಾಟದ ಭೋಜನ ವಿರಾಮದ ಕೆಲ ಹೊತ್ತಿನಲ್ಲಿಯೇ ಭಾರತದ ಮೊದಲ ಇನ್ನಿಂಗ್ಸ್‌ಗೆ ಇತಿಶ್ರೀ ಹಾಡುವಲ್ಲಿ ಇಂಗ್ಲೆಂಡ್ ಸಲವಾಯಿತಾದರೂ, ಕೊಹ್ಲಿ ಪಡೆಯ ಸವಾಲಿನ ಮೊತ್ತಕ್ಕೆ ದಿಟ್ಟ ಉತ್ತರ ನೀಡುವಲ್ಲಿ ಅದು ಶುರುವಿನಿಂದಲೇ ಎಡವಿತು. ಇನ್ನಿಂಗ್ಸ್‌ನ ಮೂರನೇ ಓವರ್‌ನಲ್ಲಿಯೇ ಇಂಗ್ಲೆಂಡ್ ಕಪ್ತಾನ ಅಲಸ್ಟೇರ್ ಕುಕ್ (2) ಅವರನ್ನು ವೇಗಿ ಮೊಹಮದ್ ಶಮಿ ಕ್ಲೀನ್ ಬೌಲ್ಡ್ ಮಾಡಿ ಇಂಗ್ಲೆಂಡ್‌ನ ಪತನಕ್ಕೆ ನಾಂದಿ ಹಾಡಿದರು. ಹೀಗೆ 10 ವರ್ಷಗಳ ಬಳಿಕ ಏಷ್ಯಾದಲ್ಲಿ ಕುಕ್ ವಿಕೆಟ್ ಕೈಚೆಲ್ಲಿ ನಿರಾಸೆಯಿಂದ ಕ್ರಿಸ್ ತೊರೆದರು. ರಾಜ್‌ಕೋಟ್ ಟೆಸ್ಟ್‌'ನ ಮೊದಲ ಇನ್ನಿಂಗ್ಸ್‌ನಲ್ಲಿ ವಿಫಲವಾದರೂ, ಎರಡನೇ ಇನ್ನಿಂಗ್ಸ್‌ನಲ್ಲಿ ಅಮೋಘ ಶತಕ ದಾಖಲಿಸಿದ್ದ ಕುಕ್, ಎದುರಿಸಿದ 11 ಎಸೆತಗಳಲ್ಲಿ ಎರಡಂಕಿ ದಾಟಲು ವಿಫಲವಾಗಿ ಕ್ರೀಸ್ ತೊರೆದರು. ಇನ್ನು ಯುವ ಆಟಗಾರ ಹಸೀಬ್ ಹಮೀದ್ ಆಟಕ್ಕೆ ಹೊಂದಿಕೊಳ್ಳಲು ಕಡು ಪ್ರಯಾಸಪಟ್ಟರು. ಈ ತಿಣುಕಾಟದಲ್ಲೇ ಅವರು ಚೊಚ್ಚಲ ಪಂದ್ಯವನ್ನಾಡುತ್ತಿರುವ ಜಯಂತ್ ಯಾದವ್ ಹಾಗೂ ವೃದ್ಧಿಮಾನ್ ಸಾಹ ಅವರಿಂದ ರನೌಟ್ ಆಗಿ ಪೆವಿಲಿಯನ್ ಸೇರಿಕೊಂಡರು. 50 ಎಸೆತಗಳನ್ನು ಎದುರಿಸಿದ ಹಮೀದ್ 13 ರನ್ ಗಳಿಸಿದರು. ಆದರೆ, ಜಿಗುಟು ಆಟದಿಂದಲೇ ಜೋ ರೂಟ್ ಜತೆಗೆ ಹಮೀದ್ 2ನೇ ವಿಕೆಟ್‌ಗೆ 47 ರನ್‌ಗಳ ಜತೆಯಾಟ ನಿರ್ವಹಿಸಿದರು.

ರೂಟ್ ಅರ್ಧಶತಕ

ಕುಕ್ ಬಳಿಕ ಸಶಕ್ತ ಜತೆಯಾಟದ ಕನವರಿಕೆಯಲ್ಲಿದ್ದ ಜೋ ರೂಟ್‌ಗೆ ಹಮೀದ್ ನಿರ್ಗಮನ ತುಸು ಬೇಸರ ತರಿಸಿದರೂ, ಏಕಾಗ್ರತೆ ಕಳೆದುಕೊಳ್ಳದೆ ಸ್ಥಿತಪ್ರಜ್ಞತೆಯಿಂದ ಬ್ಯಾಟಿಂಗ್ ಮುಂದುವರೆಸುವ ಸಂಕಲ್ಪ ತೊಟ್ಟರು. ಭಾರತದ ಬೌಲರ್‌ಗಳ ಪರಿಣಾಮಕಾರಿ ದಾಳಿಯ ಮಧ್ಯೆ ಸುಲಭವಾಗಿ ರನ್ ಗಳಿಸುವುದು ಸಾಧ್ಯವಾಗಿರಲಿಲ್ಲ. ಇದು ರೂಟ್‌'ಗೆ ನಿಜವಾಗಿಯೂ ಸವಾಲಾಗಿ ಪರಿಣಮಿಸಿತ್ತು. ಇದೇ ಹೊತ್ತಲ್ಲಿ ಹಮೀದ್ ಬಳಿಕ ಆಡಲಿಳಿದ ಬೆನ್ ಡಂಕೆಟ್, ಅಶ್ವಿನ್‌ಗೆ ಬೌಲ್ಡ್ ಆಗಿ ಪೆವಿಲಿಯನ್ ಸೇರಿಕೊಂಡದ್ದು ಕೂಡ ರೂಟ್ ಮೇಲಿನ ಒತ್ತಡವನ್ನು ಜಾಸ್ತಿಯಾಗಿಸಿತು. ಇಷ್ಟರ ಮಧ್ಯೆಯೂ ದಿಟ್ಟ ಬ್ಯಾಟಿಂಗ್ ನಡೆಸಿದ ರೂಟ್ ಅರ್ಧಶತಕ ಪೂರೈಸಿದರಾದರೂ, ಅಶ್ವಿನ್ ಅವರ ಹೋರಾಟಕ್ಕೆ ಪೂರ್ಣ ವಿರಾಮ ಹಾಕಿ ಇಂಗ್ಲೆಂಡ್‌'ಗೆ ಭಾರೀ ಪ್ರಹಾರ ನೀಡಿದರು. ಭರ್ಜರಿ ಹೊಡೆತಕ್ಕೆ ಕೈಹಾಕಿದ ರೂಟ್ ಉಮೇಶ್ ಯಾದವ್‌'ಗೆ ಕ್ಯಾಚಿತ್ತು ಹೊರನಡೆದರು. 98 ಎಸೆತಗಳನ್ನು ಎದುರಿಸಿದ ರೂಟ್ 6 ಆಕರ್ಷಕ ಬೌಂಡರಿಗಳುಳ್ಳ 53 ರನ್ ಗಳಿಸಿದರು. ಅವರ ನಂತರದಲ್ಲಿ ಇಂಗ್ಲೆಂಡ್ ಆಲ್ರೌಂಡರ್ ಮೊಯೀನ್ ಅಲಿ (1)ಯನ್ನೂ ಕಳೆದುಕೊಂಡು ತತ್ತರಿಸಿತು. ಅಂದಹಾಗೆ ಅಲಿ, ಆಫ್ ಸ್ಪಿನ್ನರ್ ಜಯಂತ್ ಯಾದವ್ ವೃತ್ತಿಬದುಕಿನ ಮೊದಲ ವಿಕೆಟ್ ಆದರು.

ಸ್ಕೋರ್ ವಿವರ

ಭಾರತ ಮೊದಲ ಇನ್ನಿಂಗ್ಸ್

129.4 ಓವರ್‌ಗಳಲ್ಲಿ 455ಕ್ಕೆ ಆಲೌಟ್

ಇಂಗ್ಲೆಂಡ್ ಮೊದಲ ಇನ್ನಿಂಗ್ಸ್

49 ಓವರ್‌ಗಳಲ್ಲಿ 5 ವಿಕೆಟ್‌ಗೆ 103