ಬರ್ಮಿಂಗ್‌ಹ್ಯಾಮ್[ಜು.30]: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ 2 ದಿನ ಬಾಕಿ ಇರುವಾಗಲೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಮಹತ್ತರ ಬದಲಾವಣೆಗೆ ಭಾರತ ಮುಂದಾಗಿದೆ ಎನ್ನಲಾಗಿದೆ. ಅಭ್ಯಾಸ ಪಂದ್ಯದಲ್ಲಿ ಭಾರತದ ಆರಂಭಿಕ ವಿಭಾಗ ವೈಫಲ್ಯ ಕಂಡಿದ್ದರಿಂದ ಈ ಯೋಚನೆ ಭಾರತ ತಂಡದ ಪಾಳಯದಲ್ಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಆ.1ರಿಂದ ಆರಂಭಗೊಳ್ಳಲಿರುವ ಟೆಸ್ಟ್ ಸರಣಿಯಲ್ಲಿ ಕೆ.ಎಲ್.ರಾಹುಲ್ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿಯುವ ಸಾಧ್ಯತೆಯಿದೆ ಎಂಬ ಸುಳಿವನ್ನು ತಂಡದ ಕೋಚ್ ರವಿ ಶಾಸ್ತ್ರಿ ಬಿಟ್ಟುಕೊಟ್ಟಿದ್ದಾರೆ. ಸ್ಥಳೀಯ ವಾಹಿನಿಯೊಂದರ ಜತೆ ಮಾತನಾಡಿರುವ ರವಿಶಾಸ್ತ್ರಿ, ‘ಮತ್ತೊಬ್ಬ ಆರಂಭಿಕ ಬ್ಯಾಟ್ಸ್‌ಮನ್‌ರನ್ನು ಮಧ್ಯಮ ಕ್ರಮಾಂಕದಲ್ಲಿ ಇಳಿಸುವ ಯೋಜನೆಯಿದೆ’ ಎಂದಿದ್ದಾರೆ. ಹೀಗಾಗಿ ಶಿಖರ್ ಧವನ್ ಹಾಗೂ ಮುರುಳಿ ವಿಜಯ್ ಆರಂಭಿಕರಾಗಿ ಕಣಕ್ಕಿಳಿದರೆ, ಮೂರನೇ ಕ್ರಮಾಂಕದಲ್ಲಿ ಕೊಹ್ಲಿ, ನಾಲ್ಕನೇ ಕ್ರಮಾಂಕದಲ್ಲಿ ಪೂಜಾರ, ಆನಂತರ ರಾಹುಲ್ ಬ್ಯಾಟಿಂಗ್’ಗಿಳಿಯುವ ಸಾಧ್ಯತೆಯಿದೆ.

ರಾಹುಲ್ ಇನ್ನಿಂಗ್ಸ್ ಆರಂಭಿಸಲಿ: ಗಂಗೂಲಿ
ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯಲ್ಲಿ ಕೆ.ಎಲ್. ರಾಹುಲ್ ಮತ್ತು ಮುರಳಿ ವಿಜಯ್ ಇನ್ನಿಂಗ್ಸ್ ಆರಂಭಿಸುವುದು ಸೂಕ್ತ ಎಂದು ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅಭಿಪ್ರಾಯ ಪಟ್ಟಿದ್ದಾರೆ. 
ವಿದೇಶಿ ನೆಲದಲ್ಲಿ ಧವನ್ ಟೆಸ್ಟ್‌ನಲ್ಲಿ ಗಮನಾರ್ಹ ಪ್ರದರ್ಶನ ನೀಡಿಲ್ಲ. ದ.ಆಫ್ರಿಕಾ, ಇಂಗ್ಲೆಂಡ್, ಆಸ್ಟ್ರೇಲಿಯಾದಲ್ಲಿ ಧವನ್ ಆಟವೇ ಇದಕ್ಕೆ ಸಾಕ್ಷಿ’ ಎಂದಿದ್ದಾರೆ.

‘ಭುವಿ, ಬುಮ್ರಾ ಅನುಪಸ್ಥಿತಿ ಕಾಡಲ್ಲ’ 
‘ಭಾರತ ಕ್ರಿಕೆಟ್ ತಂಡದ ವೇಗದ ವಿಭಾಗದಲ್ಲಿ ಎಂದಿಗೂ ಕಾಡುವುದಿಲ್ಲ. ಭುವನೇಶ್ವರ್ ಮತ್ತು ಬುಮ್ರಾ ಅನುಪಸ್ಥಿತಿಯನ್ನು ಇತರೆ ವೇಗಿಗಳು ಸಮರ್ಥವಾಗಿ ತುಂಬಲಿದ್ದಾರೆ’ ಎಂದು ಇಂಗ್ಲೆಂಡ್‌ನ ಮಾಜಿ ವೇಗಿ ಡರೆನ್ ಗೌ ಹೇಳಿದ್ದಾರೆ. ಗಾಯದ ಸಮಸ್ಯೆಯಿಂದಾಗಿ ಇಂಗ್ಲೆಂಡ್ ವಿರುದ್ಧದ ಮೊದಲ 3 ಟೆಸ್ಟ್‌ಗೆ ಭುವಿ ಹಾಗೂ ಬುಮ್ರಾ ಅಲಭ್ಯರಾಗಿದ್ದಾರೆ.